Bakery Fire Accident : ಶಂಕರಘಟ್ಟ: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಮುಂಭಾಗದ ಮುಖ್ಯ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ರಾತ್ರಿ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಬೇಕರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.
ಶಂಕರಘಟ್ಟ ಮುಖ್ಯ ರಸ್ತೆಯಲ್ಲಿರುವ ಕೇಕ್ ಮನೆ ಬೇಕರಿಯಲ್ಲಿ ತಡರಾತ್ರಿ ಸುಮಾರು 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಮತ್ತು ಸ್ಥಳೀಯರು ಕೂಡಲೇ ನೀರು ಹಾಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದಾರೆ. ಆದರೆ, ಅಷ್ಟರಾಗಲೇ ಬೇಕರಿ ಒಳಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಶಾರ್ಟ್ ಸರ್ಕಿಟ್‌ನಿಂದಾಗಿ ಈ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.


