ಜಿಲ್ಲೆಯಲ್ಲಿ 1222 ಮಂದಿಗೆ ಗಾಂಜಾ ಟೆಸ್ಟ್, 660 ಬಾರಿ ಏರಿಯಾ ಡಾಮಿನೇಷನ್!

Anti Drug Drive in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಎಸ್​ಪಿ ನಿಖಿಲ್​ ಬಿ ಶಿವಮೊಗ್ಗಕ್ಕೆ ಬಂದ ಮೇಲೆ ತಂತ್ರಜ್ಞಾನದ ವಿಚಾರದಲ್ಲಿ ಪೊಲೀಸ್ ಇಲಾಖೆ ಸಖತ್ ಅಪ್​ಡೇಟ್ ಆಗುತ್ತಿದೆ. ಅದರಲ್ಲಿಯು ಜಾಗೃತಿ ಮೂಡಿಸುವ ವಿಚಾರದಲ್ಲಿ ಸೋಶಿಯಲ್ ಮೀಡಿಯಾಗಳನ್ನ ಪೊಲೀಸರೇ ಮೀಡಿಯಾ ಇನ್ಲ್ಫಯೆನ್ಸರ್​ಗಿಂತಲೂ ಅಚ್ಚುಕಟ್ಟಾಗಿ ಹ್ಯಾಂಡಲ್ ಮಾಡುತ್ತಿದ್ದಾರೆ. ಇನ್ನೂ ಮಾದಕ ವಸ್ತುಗಳ ವಿಚಾರದಲ್ಲಿ ಹಾಗೂ ಅಕ್ರಮ ಚಟುವಟಿಕೆಗಳ ವಿಚಾರದಲ್ಲಿ ಜೀರೋ ಟಾಲರೆನ್ಸ್ ಹೊಂದಿರುವೆ ಶಿವಮೊಗ್ಗ ಪೊಲೀಶ್ ಇಲಾಖೆ ಕಳೆದ ಜನವರಿಯಿಂದ ಇಲ್ಲಿವರೆಗೂ 1222 ಮಂದಿಗೆ ಗಾಂಜಾ ಟೆಸ್ಟ್​ ಗೆ ಒಳಪಡಿಸಿದೆ. ಅಲ್ಲದೆ 660 ಬಾರಿ ಏರಿಯಾ ಡಾಮಿನೇಷನ್​ ನಡೆಸಿದೆ.

ಹೌದು, ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಬಿಡುಗಡೆ ಮಾಡಿರುವ ಕಾರ್ಯಾಚರಣೆಯ ಅಂಕಿ-ಸಂಖ್ಯೆಗಳ ಪ್ರಕಾರ ಜನವರಿ 1, 2026 ರಿಂದ ಜೂನ್ 26, 2026 ರವರೆಗಿನ ಆರು ತಿಂಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಬರೋಬ್ಬರಿ 1222 ಆಸಾಮಿಗಳನ್ನು ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 374 ಮಂದಿ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಇನ್ನು ಜೂನ್ 22 ರಿಂದ ಜೂನ್ 26 ರವರೆಗೆ ನಡೆದ ವಿಶೇಷ ಕಾರ್ಯಾಚರಣೆಯ ಅವಧಿಯಲ್ಲಿಯೇ 204 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 11 ಜನ ಗಾಂಜಾ ಸೇವಿಸಿರುವುದು ಸಾಬೀತಾಗಿದೆ. ಒಟ್ಟಾರೆಯಾಗಿ 341 ಗಾಂಜಾ ಸೇವನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ವಿಶೇಷ ಕಾರ್ಯಾಚರಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ.

ಮಾದಕ ವ್ಯಸನಕ್ಕೆ ತುತ್ತಾದವರನ್ನು ಕೇವಲ ಬಂಧಿಸುವುದಷ್ಟೇ ಅಲ್ಲದೆ, ಅವರಲ್ಲಿ ಪರಿವರ್ತನೆ ತರುವ ಉದ್ದೇಶದಿಂದ 141 ಜನರನ್ನು ಆಪ್ತ ಸಮಾಲೋಚನೆಗೆ ಕಳುಹಿಸಲಾಗಿದ್ದು, ವಿಶೇಷ ಅಭಿಯಾನದಡಿ 11 ಜನರಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಇನ್ನೂ ಅಪರಾಧ ಕೃತ್ಯಗಳನ್ನು ಹಾಗೂ ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಲು ಬರೋಬ್ಬರಿ 660 ಏರಿಯಾ ಡಾಮಿನೇಷನ್ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ. ಕೇವಲ ಐದು ದಿನಗಳ ವಿಶೇಷ ಕಾರ್ಯಾಚರಣೆ ಅವಧಿಯಲ್ಲಿ 116 ಬಾರಿ ಏರಿಯಾ ಡಾಮಿನೇಷನ್ ನಡೆಸಲಾಗಿದೆ. ಈ ಕಾರ್ಯಾಚರಣೆಗಳ ವೇಳೆ ಒಟ್ಟು 103 ಗಾಂಜಾ ಸೇವನೆ ಆರೋಪಿತರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಶೇಷ ಕಾರ್ಯಾಚರಣೆಯ ಸಮಯದಲ್ಲಿ 13 ಆರೋಪಿತರನ್ನು ಪತ್ತೆಹಚ್ಚಲಾಗಿದೆ ಎಂಬ ಅಂಶಗಳು ಮಲೆನಾಡು ಟುಡೆಗೆ ಲಭ್ಯವಾಗಿದೆ.