ಶಿವಮೊಗ್ಗ : NAAPTOL ನಿಂದ ಬಂದ ಸ್ಪೀಡ್​ ಪೋಸ್ಟ್​​ ನೋಡಿ ಯಾಮಾರಿದ ರೈತ ಕಳೆದುಕೊಂಡಿದ್ದು 4 ಲಕ್ಷ ?

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ರೈತನೊಬ್ಬನಿಗೆ NAAPTOL ಲಕ್ಕಿ ಡ್ರಾ ನಲ್ಲಿ ಲಕ್ಷಾಂತರ ರೂಪಾಯಿ ಹಣ ಗೆದ್ದಿದ್ದೀರ ಎಂದು ನಂಬಿಸಿದ ವಂಚಕರು ಬರೋಬ್ಬರಿ 4 ಲಕ್ಷ ರೂಪಾಯಿ ಹಣ ವಂಚಿಸಿರುವ ಪ್ರಕರಣ ಶಿವಮೊಗ್ಗದ ಪ್ರದೇಶವೊಂದರಲ್ಲಿ ಸಂಭವಿಸಿದೆ.

ಘಟನೆ ವಿವರ ನೋಡುವುದಾದರೆ, ದೂರುದಾರ ರೈತ ಕಳೆದ ನವೆಂಬರ್ 3 ರಂದು ಮನೆಯಲ್ಲಿದ್ದಾಗ NAAPTOL ಕಂಪನಿಯ ಹೆಸರಿನಲ್ಲಿ ಸ್ಪೀಡ್ ಪೋಸ್ಟ್ ಒಂದು ಬಂದಿದೆ. ಅದನ್ನು ತೆರೆದು ನೋಡಿದಾಗ, NAAPTOL ಲಕ್ಕಿ ಡ್ರಾದಲ್ಲಿ ನೀವು 12,80,000 ರೂಪಾಯಿ ಬಹುಮಾನ ಗೆದ್ದಿದ್ದೀರಿ ಎಂದು ಪತ್ರದಲ್ಲಿ ಬರೆದಿತ್ತು.

ಇದನ್ನು ನಿಜವೆಂದು ನಂಬಿದ ರೈತ, ಲೆಟರ್​​ ಕೆಳಗಿದ್ದ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆ ಕಡೆಯಿಂದ ಮಾತನಾಡಿದ ವಂಚಕರು, ಲಾಟರಿ ಹಣವನ್ನು ಪಡೆಯಲು ಮೊದಲಿಗೆ ಪ್ರೊಸೆಸಿಂಗ್ ಫೀ ಆಗಿ 12,800 ರೂಪಾಯಿ ಪಾವತಿಸುವಂತೆ ತಿಳಿಸಿದ್ದಾರೆ. ಅದರಂತೆ ರೈತ ಹಣ ವರ್ಗಾಯಿಸಿದ್ದಾರೆ.

ಬಳಿಕ ಮತ್ತೆ ಕರೆ ಮಾಡಿದ ವಂಚಕರು ಸಿಜಿಎಸ್‌ಟಿ (CGST), ಎಸ್‌ಜಿಎಸ್‌ಟಿ (SGST), ಕಾರ್ಪೊರೇಟ್ ಟ್ಯಾಕ್ಸ್ ಸೇರಿದಂತೆ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪೀಕಿದ್ದಾರೆ. ವಂಚಕರು ನೀಡಿದ ಖಾತೆಗೆ ರೈತ ಒಟ್ಟು 4,04,600 ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಇಷ್ಟೆಲ್ಲಾ ಹಣ ಪಾವತಿಸಿದ ನಂತರವೂ ಬಹುಮಾನದ ಹಣ ಬಾರದೇ ಇದ್ದಾಗ ರೈತನಿಗೆ ಅನುಮಾನ ಮೂಡಿದೆ. ಈ ವಿಷಯವನ್ನು ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಾಗ ತಾನು ಸೈಬರ್ ವಂಚಕರ ಜಾಲಕ್ಕೆ ಬಿದ್ದು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ರೈತ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor