ಶಿಕಾರಿಪುರ : ಕಾಡುಹಂದಿಗಳ ಹಾವಳಿ: ಅಂಬ್ಲಿಗೋಳ ವಲಯ ಅರಣ್ಯ ಕಚೇರಿ ಎದುರು ನೂರಾರು ರೈತರ ಬೃಹತ್ ಪ್ರತಿಭಟನೆ

ಹಂಚಿಕೊಳ್ಳಿ
WhatsApp Facebook X Telegram
Shikaripura Farmers Protest at Ambligola Forest Office
Shikaripura Farmers Protest at Ambligola Forest Office

ಸುದ್ದಿಯ ಸ್ಥಳ: Shikaripura, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ : ಇತ್ತೀಚೆಗೆ ಜಿಲ್ಲೆಯಾದ್ಯಂತ ಆನೆ ಹಾವಳಿ ಹಾಗೂ ಆನೆಗಳ ಸ್ಥಳಾಂತರ ವಿಚಾರವಾಗಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿರುವ ಮತ್ತೊಂದು ವಿಚಾರ ಮುನ್ನೆಲೆಗೆ ಬಂದಿದೆ. ಕಾಡುಹಂದಿಗಳು ಬೆಳೆ ಹಾಳು ಮಾಡುತ್ತಿವೆ ಎಂದು ಆರೋಪಿಸಿ ಅಂಬ್ಲಿಗೋಳ ವಲಯ ಅರಣ್ಯ ಕಚೇರಿ ಮುಂಭಾಗ ನೂರಾರು ರೈತರಿಂದ ಬೃಹತ್ ಪ್ರತಿಭಟನೆ ನಡೆದಿದೆ.

ಹೌದು, ಶಿಕಾರಿಪುರ ತಾಲೂಕಿನ ಅಂಬ್ಲಿಗೋಳ ಗ್ರಾಮದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ರೈತರು ಬೆಳೆದಿರುವ ಅಡಿಕೆ, ಬಾಳೆ, ಭತ್ತ, ಮೆಕ್ಕೆಜೋಳ, ಕಬ್ಬು ಸೇರಿ ನೂರಾರು ಎಕರೆ ಬೆಳೆಗಳು ಕಾಡುಹಂದಿಗಳ ಪಾಲಾಗಿವೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರೈತರು ಅಂಬ್ಲಿಗೋಳ ವಲಯ ಅರಣ್ಯ ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿದ್ದಾರೆ.

ರೈತ ಹೋರಾಟ ಸಮಿತಿ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಅಂಬ್ಲಿಗೋಳ ಸೇರಿ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳ ನೂರಾರು ರೈತರು ಭಾಗಿಯಾಗಿದ್ದರು. ಖಾಸಗಿ ಜಮೀನುಗಳಿಗೂ ಹಿಂಡು ಹಿಂಡಾಗಿ ಕಾಡುಹಂದಿಗಳು ಲಗ್ಗೆ ಇಡುತ್ತಿವೆ. ಈ ಕುರಿತಂತೆ ಹಲವು ಬಾರಿ ದೂರು ನೀಡಿದರೂ ಅರಣ್ಯ ಇಲಾಖೆ ಕಂದಕ, ಸೋಲಾರ್ ಬೇಲಿ ನಿರ್ಮಿಸಲಿಲ್ಲ ಎಂದು ಅರಣ್ಯ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ಹಾಗೂ ಖಾಸಗಿ ಜಮೀನುಗಳ ರಕ್ಷಣೆಗೆ ರೈತರು ಪಟ್ಟು ಹಿಡಿದಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಂಬ್ಲಿಗೋಳ ಆರ್‌ಎಫ್‌ಒ ಮಾಧವ ಹರಸಾಹಸ ಪಟ್ಟರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor