ಭದ್ರಾ ನೀರಿಗಾಗಿ ಭಿನ್ನಮತ! ದಾವಣಗೆರೆಯಲ್ಲಿ ಹೇಳೋದೇನು? ಭದ್ರಾವತಿಯಲ್ಲಿ ಏನಾಗ್ತಿದೆ! ಜಲಾಶಯದಲ್ಲಿ ಎಷ್ಟಿದೆ ನೀರು?

ಹಂಚಿಕೊಳ್ಳಿ
WhatsApp Facebook X Telegram
Farmers Demand Halt to Explosive Blasting Work Near Bhadra Reservoir

ಸುದ್ದಿಯ ಸ್ಥಳ: Davanagere, Karnataka

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುತ್ತಿರುವುದು, ಇದೀಗ ದಾವಣಗೆರೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಭದ್ರಾವತಿಗೆ ನೀರು ಹರಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಶಾಂತನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಭದ್ರಾ ನೀರಿನಿಂದ ಎಲ್ಲರಿಗೂ ಲಾಭವಾಗಲಿದೆ ಎಂದು ಭದ್ರಾವತಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಏನಾಗುತ್ತಿದೆ ಎಂಬುದರ ವಿವರ ಹೀಗಿದೆ.

ಭದ್ರಾ ಜಲಾಶಯದಿಂದ ನವೆಂಬರ್ 15ರಿಂದ 10 ದಿನಗಳ ಕಾಲ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ 1 ಟಿಎಂಸಿ ಅಡಿ ನೀರು ಹರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಭದ್ರಾವತಿ ತಾಲ್ಲೂಕು ಕಾಂಗ್ರೆಸ್​ ಘಟಕ ಸ್ವಾಗತಿಸಿದೆ. ಆದರೆ, ಇದೇ ನಿರ್ಧಾರವನ್ನ ಹೊನ್ನಾಳಿ ಕಾಂಗ್ರೆಸ್ ಶಾಸಕ ಡಿ.ಜಿ. ಶಾಂತನಗೌಡ ವಿರೋಧಿಸಿದ್ದು ನೀರು ಬಿಡುಗಡೆ ಸ್ಥಗಿತಗೊಳಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.

ಈ ನಿಟ್ಟಿನಲ್ಲಿ ನಿನ್ನೆ ದಿನ ಭದ್ರಾವತಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಈ ಬಾರಿ ಮಳೆ ಕೊರತೆಯಿಂದ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅಡಿಕೆ, ತೆಂಗು ಮತ್ತು ಬಾಳೆ ಸೇರಿದಂತೆ ಹಲವು ತೋಟಗಾರಿಕಾ ಬೆಳೆಗಳು ನೀರಿನ ಅಭಾವದಿಂದ ಒಣಗಲು ಆರಂಭಿಸಿದ್ದವು. ಇಂತಹ ಸಂದರ್ಭದಲ್ಲಿ ಸರ್ಕಾರ ನಾಲೆಗಳಿಗೆ ನೀರು ಹರಿಸಲು ಆದೇಶಿಸಿರುವುದು ರೈತರಿಗೆ ಅನುಕೂಲವಾಗಿದೆ ಎಂದಿದ್ದಾರೆ.

ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ಎಕರೆ ಜಮೀನಿನಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ನೀರಿನ ಕೊರತೆಯಿಂದ ಅಡಿಕೆ ಸೇರಿದಂತೆ ದೀರ್ಘಾವಧಿ ಬೆಳೆಗಳು ಒಣಗಿದರೆ ಈ ಭಾಗದ ಆರ್ಥಿಕತೆಯ ಮೇಲೆಯೇ ಗಂಭೀರ ಪರಿಣಾಮ ಉಂಟಾಗುವ ಆತಂಕವಿತ್ತು. ಸರ್ಕಾರ ಸೂಕ್ತ ಸಮಯದಲ್ಲಿ ನೀರು ಬಿಡುಗಡೆಗೆ ನಿರ್ಧರಿಸಿರುವುದರಿಂದ ತೋಟಗಾರಿಕಾ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿದರು.

ಇನ್ನೊಂದೆಡೆ ನಗರಸಭಾ ಸದಸ್ಯ ಬಿ.ಕೆ. ಮೋಹನ್ ಮಾತನಾಡಿ, ಭದ್ರಾ ಡ್ಯಾಂನಲ್ಲಿ ನೀರನ್ನ ಗಮನದಲ್ಲಿಟ್ಟುಕೊಂಡೆ, ಮುಂದಿನ ಬೇಸಿಗೆ ಹಂಗಾಮಿನ ನೀರಾವರಿಗೂ ಈಗಾಗಲೇ ಯೋಜನೆ ರೂಪಿಸಲಾಗಿದೆ. ಮುಂದಿನ ವರ್ಷದ ಜನವರಿಯಿಂದ ಮೇ ತಿಂಗಳವರೆಗೆ ನಾಲೆಗಳ ಮೂಲಕ 30 ಟಿಎಂಸಿ ಅಡಿ ನೀರು ಹರಿಸಲು ಮೊದಲೇ ಯೋಜಿಸಲಾಗಿದೆ. ಬೇಸಿಗೆ ಅವಧಿಯಲ್ಲಿಯೂ ನೀರು ಬಿಡುಗಡೆ ಮಾಡುವುದರಿಂದ ಅಚ್ಚುಕಟ್ಟು ಪ್ರದೇಶದ ತೋಟಗಾರಿಕಾ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಸರ್ಕಾರದ ಆದೇಶಕ್ಕೆ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ದಾವಣಗೆರೆ ಭಾಗದ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಬಿ.ಕೆ. ಮೋಹನ್, ಪ್ರಸ್ತುತ ನಾಲೆಗಳಿಗೆ ಹರಿಸಲಾಗುತ್ತಿರುವ ನೀರಿನಿಂದ ಹೊನ್ನಾಳಿ ಭಾಗದ ಅಡಿಕೆ ತೋಟಗಳಿಗೂ ಅನುಕೂಲವಾಗಲಿದೆ ಎಂದರು. ಭತ್ತ ಹಾಗೂ ಅಡಿಕೆ ಬೆಳೆಗಾರರಿಬ್ಬರ ಹಿತಾಸಕ್ತಿಯನ್ನೂ ಕಾಪಾಡುವುದು ಅನಿವಾರ್ಯವಾಗಿದೆ. ಈ ಅಂಶವನ್ನು ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ನೀರು ಬಿಡುಗಡೆ ಸ್ಥಗಿತಗೊಳಿಸದಿದ್ದರೆ ರಾಜೀನಾಮೆ: ಡಿ.ಜಿ. ಶಾಂತನಗೌಡ ಎಚ್ಚರಿಕೆ

ಅತ್ತ ದಾವಣಗೆರೆಯಲ್ಲಿ ಮಾತನಾಡಿದ ಹೊನ್ನಾಳಿ ಕಾಂಗ್ರೆಸ್ ಶಾಸಕ ಡಿ.ಜಿ. ಶಾಂತನಗೌಡ, ಭದ್ರಾವತಿ ತಾಲ್ಲೂಕಿನ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭದ್ರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ 1 ಟಿಎಂಸಿ ಅಡಿ ನೀರು ಹರಿಸುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ನಾಲೆಗಳಿಗೆ ನೀರು ಹರಿಸುವುದನ್ನು ತಕ್ಷಣ ಸ್ಥಗಿತಗೊಳಿಸಿ ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಕರೆಯಬೇಕು. ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದರು.

ದಾವಣಗೆರೆ ಜಿಲ್ಲೆಯ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಭದ್ರಾವತಿ ಭಾಗದ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ 10 ದಿನಗಳ ಕಾಲ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಈ ರೀತಿ ನೀರು ಬಿಡುಗಡೆ ಮಾಡುವುದರಿಂದ ದಾವಣಗೆರೆ ಜಿಲ್ಲೆಯ ಅಡಿಕೆ ತೋಟಗಳಿಗೆ ಅಗತ್ಯ ನೀರು ತಲುಪುವುದಿಲ್ಲ. ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭದ್ರಾ ಜಲಾಶಯವು ಕೇವಲ ಭದ್ರಾವತಿ ಭಾಗಕ್ಕೆ ಮಾತ್ರ ಸೀಮಿತವಾದ ಆಸ್ತಿಯಲ್ಲ. ದಾವಣಗೆರೆ ಸೇರಿದಂತೆ ಇತರ ಜಿಲ್ಲೆಗಳ ರೈತರಿಗೂ ಜಲಾಶಯದ ನೀರಿನ ಮೇಲೆ ಹಕ್ಕಿದೆ. ಆದರೆ, ಸರ್ಕಾರದ ಪ್ರಸ್ತುತ ನಿರ್ಧಾರದಿಂದ ದಾವಣಗೆರೆ ಜಿಲ್ಲೆಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಈ ನಡುವೆ ಪ್ರಸ್ತುತ 55.13 ಟಿಎಂಸಿ ಅಡಿ ನೀರು ಡ್ಯಾಂನಲ್ಲಿದ್ದು ಸಂಗ್ರಹವಾಗಿದ್ದು, ಅದರಲ್ಲಿ 13.8 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ಹೊರತುಪಡಿಸಿದರೆ 41.3 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯವಿದೆ. ಈ ಪೈಕಿ ಬೇಸಿಗೆ ಬೆಳೆಗಳಿಗೆ 30 ಟಿಎಂಸಿ ಅಡಿ ಹಾಗೂ ಕುಡಿಯುವ ನೀರು ಮತ್ತು ಕೈಗಾರಿಕಾ ಉದ್ದೇಶಗಳಿಗೆ 11.2 ಟಿಎಂಸಿ ಅಡಿ ನೀರನ್ನು ಮೀಸಲಿಡಲಾಗಿದೆ ಎಂಬುದು ಪೂರಕ ಮಾಹಿತಿ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor