ಮತಾಂತರ ನಿಷೇಧ ಕಾಯ್ದೆ ರದ್ದತಿಗೆ ಆಗ್ರಹ! ಶಿವಮೊಗ್ಗದಲ್ಲಿ ಕ್ರೈಸ್ತ ಸಮುದಾಯದಿಂದ ಮೌನ ಮೆರವಣಿಗೆ; ಮುಖ್ಯಮಂತ್ರಿಗೆ ಮನವಿ

ಹಂಚಿಕೊಳ್ಳಿ
WhatsApp Facebook X Telegram
Christian Forum Holds Silent March in Shivamogga Demanding Repeal of Karnataka Anti-Conversion Law
Christian Forum Holds Silent March in Shivamogga Demanding Repeal of Karnataka Anti-Conversion Law

ಸುದ್ದಿಯ ಸ್ಥಳ: Davanagere, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ–2022 (ಮತಾಂತರ ನಿಷೇಧ ಕಾಯ್ದೆ) ರದ್ದುಪಡಿಸುವಂತೆ ಆಗ್ರಹಿಸಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ (ಶಿವಮೊಗ್ಗ ವಲಯ) ವತಿಯಿಂದ ಇವತ್ತು ಗುರುವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಕ್ರೈಸ್ತ ಒಕ್ಕೂಟಗಳ ಪ್ರಮುಖರು ಮೆರವಣಿಗೆಯಲ್ಲಿ ಭಾಗವಹಿಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ನಗರದ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಿಂದ ಆರಂಭವಾದ ಮೌನ ಮೆರವಣಿಗೆ ನಗರದ ವಿವಿಧ ಪ್ರಮುಖ ರಸ್ತೆಗಳ ಮೂಲಕ ಸಾಗಿತು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 2023ರ ಜೂನ್ ತಿಂಗಳಲ್ಲಿ ರಾಜ್ಯ ಸರ್ಕಾರ ಕೈಗೊಂಡಿದ್ದ ನಿರ್ಧಾರದಂತೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ–2022 ಅನ್ನು ರದ್ದುಪಡಿಸುವ ಮಸೂದೆಯನ್ನು ಆದಷ್ಟು ಶೀಘ್ರ ವಿಧಾನಮಂಡಲದಲ್ಲಿ ಮಂಡಿಸಿ ಅಂಗೀಕರಿಸಬೇಕು ಆಗ್ರಹಿಸಿದರು.

ಪ್ರಮುಖ ಒತ್ತಾಯ

  • ಕಾಯ್ದೆಯನ್ನು ರದ್ದುಪಡಿಸುವವರೆಗೆ ಯಾವುದೇ ವ್ಯಕ್ತಿ ಅಥವಾ ಸಮುದಾಯ ಕಾನೂನುಬಾಹಿರ ಕಿರುಕುಳ, ಬಂಧನ ಅಥವಾ ಮಾನಹಾನಿಗೆ ಒಳಗಾಗದಂತೆ ಸರ್ಕಾರ ಅಗತ್ಯ ರಕ್ಷಣೆ ಒದಗಿಸಬೇಕು. ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ವ್ಯಕ್ತಿಗಳ ಸಂವಿಧಾನಾತ್ಮಕ ಹಕ್ಕುಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಫೋರಂ ಒತ್ತಾಯಿಸಿದೆ.
  • ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಬೇಕು. ಪರಸ್ಪರ ಸಮ್ಮತಿಯಿರುವ ವಯಸ್ಕರು ತಮ್ಮ ಜೀವನ ಸಂಗಾತಿಯನ್ನು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳುವ ಹಕ್ಕಿಗೂ ರಕ್ಷಣೆ ದೊರೆಯಬೇಕು
  • ಕಾನೂನುಬದ್ಧವಾಗಿ ನಡೆಯುವ ಧಾರ್ಮಿಕ ಸಭೆಗಳು, ಆರಾಧನಾ ಕಾರ್ಯಕ್ರಮಗಳು ಹಾಗೂ ದತ್ತಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಧಾರ್ಮಿಕ ನಂಬಿಕೆಗಳನ್ನು ಶಾಂತಿಯುತವಾಗಿ ಹಂಚಿಕೊಳ್ಳುವ ಹಕ್ಕಿಗೆ ಪರಿಣಾಮಕಾರಿ ರಕ್ಷಣೆ ಒದಗಿಸಬೇಕು
  • 2022ರಲ್ಲಿ ಜಾರಿಗೆ ತರಲಾದ ಈ ಕಾಯ್ದೆಯು ಧಾರ್ಮಿಕ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರ್ಯ, ಖಾಸಗಿತನ ಹಾಗೂ ವಾಕ್ ಸ್ವಾತಂತ್ರ್ಯದಂತಹ ಸಂವಿಧಾನಾತ್ಮಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯನ್ನು ಮುಂದುವರಿಸದೆ ರದ್ದುಪಡಿಸಲು ಸರ್ಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕ್ರೈಸ್ತ ಒಕ್ಕೂಟಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕಾಯ್ದೆ ರದ್ದತಿಯೊಂದಿಗೆ ಧಾರ್ಮಿಕ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳನ್ನು ರಕ್ಷಿಸುವಂತೆ ಸರ್ಕಾರವನ್ನು ಆಗ್ರಹಿಸಿದರು. ಮೌನ ಮೆರವಣಿಗೆಯ ನೇತೃತ್ವವನ್ನು ಫೋರಂ ಅಧ್ಯಕ್ಷ ರೆ.ಫಾ. ಡಾ. ಸೈಮನ್ ಪಿಂಟೋ, ಕಾರ್ಯದರ್ಶಿ ಪಾಸ್ಟರ್ ರೇಮಂಡ್ ಸಗಾಯ್ ರಾಜ್, ಕಾರ್ಯಕಾರಿ ಸಮಿತಿ ಸದಸ್ಯ ಮೊನ್ನಿ ಜ್ಯೋರ್ ಸ್ಪ್ಯಾನಿಶ್ ಡಿಸೋಜ, ಫಾ. ವೀರೇಶ್, ಜಿ. ಕುಮಾರ್, ಸತೀಶ್ ಡಿಸೋಜ, ಯೇಸುದಾಸ್, ಚಿನ್ನಪ್ಪ ಹಾಗೂ ರೋಸಲಿನ್ ಸೇರಿದಂತೆ ಹಲವರು ವಹಿಸಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor