ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳು ಹಾಗೂ ಸಂಸ್ಥೆಗಳಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಸಹಾಯಕರು (FDA) ಮತ್ತು ತತ್ಸಮಾನ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಸೂಚನೆ ಹೊರಡಿಸಿದೆ. ಉಳಿಕೆ ಮೂಲ ವೃಂದದ (RPC) ವ್ಯಾಪ್ತಿಯಲ್ಲಿ ಒಟ್ಟು 2,163 ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತಾಗಿ ಹೊರಡಿಸಲಾದ ಅಧಿಸೂಚನೆ ಮತ್ತು ಉದ್ಯೋಗವಕಾಶದ ಮಾಹಿತಿಯ ಪೂರ್ತಿ ವಿವರನ್ನ ಇಲ್ಲಿ ನೀಡಲಾಗಿದೆ.
ಅಕ್ಟೋಬರ್ 29, 2026ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಸಹಾಯಕರು, ಲೆಕ್ಕ ಸಹಾಯಕರು, ವಾರ್ಡನ್ಗಳು, ನಿಲಯ ಮೇಲ್ವಿಚಾರಕರು, ಕಂಪ್ಯೂಟರ್ ಆಪರೇಟರ್ಗಳು, ಪ್ರವಾಸೋದ್ಯಮ ಪ್ರಚಾರ ಅಧಿಕಾರಿಗಳು ಹಾಗೂ ಇತರ ತತ್ಸಮಾನ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ನವೆಂಬರ್ 25, 2026ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.
ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ?
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಸಹಾಯಕರ 490 ಹುದ್ದೆಗಳಿದ್ದು, ಇದರಲ್ಲಿ 488 ಸಾಮಾನ್ಯ ನೇಮಕಾತಿ ಹಾಗೂ 2 ಹಿಂಬಾಕಿ ಹುದ್ದೆಗಳು ಸೇರಿವೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಪುರುಷ ವಾರ್ಡನ್ಗಳ 294 ಹುದ್ದೆಗಳು, ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರ 249 ಹುದ್ದೆಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪುರುಷ ನಿಲಯ ಮೇಲ್ವಿಚಾರಕರ 180 ಹುದ್ದೆಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1 ಹುದ್ದೆಗಳು 135 ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಪ್ರಥಮ ದರ್ಜೆ ಸಹಾಯಕರ 100 ಹುದ್ದೆಗಳು ಖಾಲಿಯಿವೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ನಿಲಯ ಮೇಲ್ವಿಚಾರಕರ 100 ಹುದ್ದೆಗಳು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಪ್ರಥಮ ದರ್ಜೆ ಸಹಾಯಕ ಕಂ. ಕಂಪ್ಯೂಟರ್ ಆಪರೇಟರ್ ಹುದ್ದೆಗಳು 79 ಹಾಗೂ ನಿಲಯ ಪಾಲಕರ 78 ಹುದ್ದೆಗಳ ನೇಮಕಾತಿಗೂ ಅವಕಾಶ ಕಲ್ಪಿಸಲಾಗಿದೆ.
- ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರ 56, ಕೃಷಿ ಇಲಾಖೆಯಲ್ಲಿ 50, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರ 48, ಅರಣ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರ 36 ಹಾಗೂ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಸಹಾಯಕರ 32 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
- ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ವಾರ್ಡನ್ಗಳ 31, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧಕರ 23, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಸಹಾಯಕರ 20, ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಥಮ ದರ್ಜೆ ಸಹಾಯಕರ 18 ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಲ್ಲಿ 17 ಹುದ್ದೆಗಳಿವೆ.
- ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಲ್ಲಿ ಉಪ ತೋಟಗಾರಿಕಾ ಅಧಿಕಾರಿಗಳ 17, ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸಹಾಯಕರ 15, ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಥಮ ದರ್ಜೆ ಸಹಾಯಕರ 13, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ 12, ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯಲ್ಲಿ 12 ಹಾಗೂ ಕಾರ್ಮಿಕ ಇಲಾಖೆಯಲ್ಲಿ 11 ಹುದ್ದೆಗಳನ್ನು ಪ್ರಕಟಿಸಲಾಗಿದೆ.
- ಇದಲ್ಲದೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ 10, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಲ್ಲಿ 7, ಪುರಾತತ್ವ ಇಲಾಖೆಯಲ್ಲಿ 6, ಹಿಂದೂ ಧಾರ್ಮಿಕ ಸಂಸ್ಥೆಗಳ ಇಲಾಖೆಯಲ್ಲಿ 6, ಕರ್ನಾಟಕ ಗೃಹ ಮಂಡಳಿಯಲ್ಲಿ 6, ಅಂತರ್ಜಲ ನಿರ್ದೇಶನಾಲಯದಲ್ಲಿ 5, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ 5 ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 2 ಹುದ್ದೆಗಳು ಖಾಲಿಯಿವೆ.
- ಒಟ್ಟಾರೆ ವಿವಿಧ ಇಲಾಖೆಗಳ 33 ವಿಭಾಗಗಳಲ್ಲಿ 2,163 ಹುದ್ದೆಗಳ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿಯೂ ಉದ್ಯೋಗಾವಕಾಶ
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1 ಹುದ್ದೆಗಳ ಜಿಲ್ಲಾವಾರು ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಗೆ 9 ಹುದ್ದೆಗಳನ್ನು ನಿಗದಿಪಡಿಸಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಪ್ರಥಮ ದರ್ಜೆ ಸಹಾಯಕರ ನೇಮಕಾತಿಯಲ್ಲಿ ಶಿವಮೊಗ್ಗ ಜಿಲ್ಲೆಗೆ 7 ಹುದ್ದೆಗಳಿವೆ.
ನ್ಯಾಯಾಂಗ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ಜಿಲ್ಲಾವಾರು ವಿವರದಲ್ಲಿ ಶಿವಮೊಗ್ಗ ಜಿಲ್ಲೆಗೆ 6 ಹುದ್ದೆಗಳನ್ನು ಗುರುತಿಸಲಾಗಿದೆ. ಉಳಿದ ಇಲಾಖೆಗಳ ಹುದ್ದೆಗಳಿಗೂ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಅರ್ಹತೆ ಮತ್ತು ಷರತ್ತುಗಳ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ ಏನು?
- ಪ್ರಥಮ ದರ್ಜೆ ಸಹಾಯಕ ಹಾಗೂ ತತ್ಸಮಾನ ಹುದ್ದೆಗಳಿಗೆ ಒಂದೇ ರೀತಿಯ ವಿದ್ಯಾರ್ಹತೆ ನಿಗದಿಪಡಿಸಿಲ್ಲ. ಹುದ್ದೆಯ ಸ್ವರೂಪ ಮತ್ತು ಇಲಾಖೆಯ ನೇಮಕಾತಿ ನಿಯಮಗಳ ಆಧಾರದಲ್ಲಿ ಅರ್ಹತೆ ಬದಲಾಗುತ್ತದೆ ಎಂದು ತಿಳಿಸಲಾಗಿದೆ.
- ಲೆಕ್ಕ ಸಹಾಯಕರ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Com, BBM ಅಥವಾ BBA ಪದವಿ ಪಡೆದಿರಬೇಕು. ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ ತತ್ಸಮಾನವೆಂದು ಅಂಗೀಕರಿಸಲಾದ ಸಂಬಂಧಿತ ಪದವಿಗಳನ್ನೂ ಪರಿಗಣಿಸಲಾಗುತ್ತದೆ.
- ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮತ್ತು B.Ed ವಿದ್ಯಾರ್ಹತೆ ಹೊಂದಿರಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಲಯ ಮೇಲ್ವಿಚಾರಕರ ಹುದ್ದೆಗಳಿಗೂ ಪದವಿ ಮತ್ತು B.Ed ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪ್ರಥಮ ದರ್ಜೆ ಸಹಾಯಕ ಕಂ. ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಸಂಬಂಧಿತ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಅಗತ್ಯವಿದೆ. ಅಧಿಸೂಚನೆಯಲ್ಲಿ BE (Computer Science/Information Technology), BCA, MCA, BSc ಅಥವಾ MSc (Computer Science), PG Diploma in Computer Application ಸೇರಿದಂತೆ ನಿಗದಿತ ವಿದ್ಯಾರ್ಹತೆಗಳನ್ನು ಉಲ್ಲೇಖಿಸಲಾಗಿದೆ. ಇತರ ಪದವೀಧರರಿಗೆ ನಿಗದಿತ ಅವಧಿಯ ಕಂಪ್ಯೂಟರ್ ತರಬೇತಿ ಹಾಗೂ ಜ್ಞಾನದ ಷರತ್ತುಗಳಿವೆ.
- ಪ್ರವಾಸೋದ್ಯಮ ಪ್ರಚಾರ ಅಧಿಕಾರಿ ಹುದ್ದೆಗೆ ಪ್ರವಾಸೋದ್ಯಮ, ಸಂವಹನ, ಇತಿಹಾಸ, ಸಿದ್ಧಾಂತಶಾಸ್ತ್ರ, ಪುರಾತತ್ವ, ಪತ್ರಿಕೋದ್ಯಮ ಅಥವಾ ಇತರ ವಿಷಯದಲ್ಲಿ ಪದವಿಯೊಂದಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯ ಹೋಟೆಲ್ ಮ್ಯಾನೇಜ್ಮೆಂಟ್ ಡಿಪ್ಲೊಮಾ ಹೊಂದಿರಬೇಕು.
- ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1 ಸೇರಿದಂತೆ ಇತರ ಕೆಲವು ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ ಅಗತ್ಯವಿದೆ. ವಾಣಿಜ್ಯ ತೆರಿಗೆ ಪರಿವೀಕ್ಷಕರು ಮತ್ತು ತೋಟಗಾರಿಕಾ ಹುದ್ದೆಗಳಿಗೂ ಅಧಿಸೂಚನೆಯಲ್ಲಿ ಪ್ರತ್ಯೇಕ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಸಂಬಂಧಿತ ವಿದ್ಯಾರ್ಹತೆ ಪಡೆದಿರುವುದು ಕಡ್ಡಾಯ. ಕೊನೆಯ ದಿನಾಂಕದ ನಂತರ ಪರೀಕ್ಷಾ ಫಲಿತಾಂಶ ಬರುವ ಅಭ್ಯರ್ಥಿಗಳು ಅರ್ಹರಾಗುವುದಿಲ್ಲ. ಎಲ್ಲಾ ವಿದ್ಯಾರ್ಹತೆಗಳಿಗೆ ಸಂಬಂಧಿಸಿದ ಅಂಕಪಟ್ಟಿ ಹಾಗೂ ದಾಖಲೆಗಳನ್ನು ಪರಿಶೀಲನೆಗಾಗಿ ಹೊಂದಿರಬೇಕು.
ವಯೋಮಿತಿ ಎಷ್ಟು?
ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಸರ್ಕಾರಿ ಆದೇಶದ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ 5 ವರ್ಷಗಳ ಸಡಿಲಿಕೆಯನ್ನು ಒಳಗೊಂಡು ಈ ಮಿತಿಗಳನ್ನು ನೀಡಲಾಗಿದೆ. ಮಾಜಿ ಸೈನಿಕರು, ಅಂಗವಿಕಲರು ಹಾಗೂ ಇತರ ಅರ್ಹ ವಿಶೇಷ ವರ್ಗಗಳಿಗೆ ಅನ್ವಯವಾಗುವ ಹೆಚ್ಚುವರಿ ಸಡಿಲಿಕೆಗಳು ನಿಯಮಗಳ ಪ್ರಕಾರ ಲಭ್ಯವಿರುತ್ತವೆ.
ವೇತನ ಎಷ್ಟು ಸಿಗಲಿದೆ?
ನೇಮಕಾತಿಯಾಗುವ ಹುದ್ದೆಗಳ ಆಧಾರದಲ್ಲಿ ವೇತನಶ್ರೇಣಿ ಬದಲಾಗುತ್ತದೆ. ಬಹುತೇಕ ಪ್ರಥಮ ದರ್ಜೆ ಸಹಾಯಕರು, ಲೆಕ್ಕ ಸಹಾಯಕರು, ವಾರ್ಡನ್ಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1 ಹುದ್ದೆಗಳಿಗೆ ₹44,425ರಿಂದ ₹83,700ರವರೆಗಿನ ವೇತನಶ್ರೇಣಿ ನಿಗದಿಪಡಿಸಲಾಗಿದೆ.
ಕೆಲವು ಸಹಾಯಕ ಹುದ್ದೆಗಳಿಗೆ ₹49,050ರಿಂದ ₹92,500, ವಾಣಿಜ್ಯ ತೆರಿಗೆ ಪರಿವೀಕ್ಷಕರು ಹಾಗೂ ಉಪ ತೋಟಗಾರಿಕಾ ಅಧಿಕಾರಿಗಳಿಗೆ ₹54,175ರಿಂದ ₹99,400 ಹಾಗೂ ಪ್ರವಾಸೋದ್ಯಮ ಪ್ರಚಾರ ಅಧಿಕಾರಿ ಹುದ್ದೆಗಳಿಗೆ ₹61,300ರಿಂದ ₹1,12,900ರವರೆಗೆ ವೇತನಶ್ರೇಣಿ ನಿಗದಿಯಾಗಿದೆ.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ವರ್ಗ ಹಾಗೂ ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕರು ಹಾಗೂ ತೃತೀಯ ಲಿಂಗದ ಅಭ್ಯರ್ಥಿಗಳಿಗೆ ₹500 ಶುಲ್ಕವಿದೆ. ವಿಶೇಷಚೇತನ ಅಭ್ಯರ್ಥಿಗಳಿಗೆ ₹250 ಶುಲ್ಕ ನಿಗದಿಯಾಗಿದೆ.
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು
ಅಕ್ಟೋಬರ್ 30, 2026ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ನವೆಂಬರ್ 25, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ನವೆಂಬರ್ 26, 2026 ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಜನವರಿ 8, 2027ರಂದು ಮಧ್ಯಾಹ್ನ 3ರಿಂದ ಸಂಜೆ 5 ಗಂಟೆಯವರೆಗೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1 ಅನ್ನು ಜನವರಿ 10, 2027ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಮತ್ತು ಪತ್ರಿಕೆ-2 ಅನ್ನು ಅದೇ ದಿನ ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ನಡೆಸಲು ನಿರ್ಧರಿಸಲಾಗಿದೆ.
ಪರೀಕ್ಷೆ ಮತ್ತು ಆಯ್ಕೆ ವಿಧಾನ ಹೇಗೆ?
- ನೇಮಕಾತಿಗಾಗಿ ಆಫ್ಲೈನ್ ಓಎಂಆರ್ (OMR) ಮಾದರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಪತ್ರಿಕೆ-1 ಮತ್ತು ಪತ್ರಿಕೆ-2 ತಲಾ 100 ಅಂಕಗಳನ್ನು ಒಳಗೊಂಡಿದ್ದು, ಪ್ರತಿ ಪತ್ರಿಕೆಯ ಅವಧಿ 2 ಗಂಟೆಗಳಾಗಿರುತ್ತದೆ.
- ಪತ್ರಿಕೆ-1ರಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ವಿಜ್ಞಾನ, ಭಾರತದ ಸಂವಿಧಾನ, ಕರ್ನಾಟಕದ ಇತಿಹಾಸ, ಭೂಗೋಳ, ಆಡಳಿತ, ಆರ್ಥಿಕತೆ ಹಾಗೂ ಸಂಬಂಧಿತ ವಿಷಯಗಳ ಬಗ್ಗೆ ಪ್ರಶ್ನೆಗಳಿರುತ್ತವೆ.
- ಪತ್ರಿಕೆ-2ರಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನ ವಿಷಯಗಳನ್ನು ಒಳಗೊಂಡ ಪ್ರಶ್ನೆಗಳಿರುತ್ತವೆ.
- ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತವಾಗಲಿದೆ. ಓಎಂಆರ್ ಉತ್ತರ ಪತ್ರಿಕೆಯಲ್ಲಿ ಉತ್ತರಿಸದ ಪ್ರಶ್ನೆಗಳಿಗಾಗಿ 5ನೇ ಆಯ್ಕೆಯ ವ್ಯವಸ್ಥೆಯನ್ನೂ ವಿವರಿಸಲಾಗಿದೆ. ಉತ್ತರ ಗುರುತಿಸದೆ ಖಾಲಿ ಬಿಟ್ಟ ಪ್ರಶ್ನೆಗಳಿಗೆ ಸಂಬಂಧಿಸಿದ ಷರತ್ತುಗಳನ್ನು ಅಭ್ಯರ್ಥಿಗಳು ಪಾಲಿಸಬೇಕು.
- ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಠ ಶೇ.35 ಅಂಕಗಳನ್ನು ಗಳಿಸುವುದು ಅಗತ್ಯವಾಗಿದೆ. ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಹಾಗೂ ಹುದ್ದೆಗಳ ಆಯ್ಕೆ ಪ್ರಕ್ರಿಯೆಯನ್ನು ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸಿರುವ ನಿಯಮಗಳ ಪ್ರಕಾರ ನಡೆಸಲಾಗುತ್ತದೆ.
- ನಿಗದಿತ ಅರ್ಹತೆ ಹೊಂದಿರುವ ಕೆಲವು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ಇರಲಿದೆ. ಉಳಿದವರು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಕನ್ನಡ ಭಾಷಾ ಪರೀಕ್ಷೆಯು 150 ಅಂಕಗಳನ್ನು ಒಳಗೊಂಡಿದ್ದು, ಉತ್ತೀರ್ಣತೆಗೆ ಕನಿಷ್ಠ 50 ಅಂಕಗಳು ಅಗತ್ಯವಾಗಿವೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಮೂಲಕ ಅರ್ಜಿ ಸಲ್ಲಿಸಬೇಕು. ಆನ್ಲೈನ್ ಅರ್ಜಿಯಲ್ಲಿ ವೈಯಕ್ತಿಕ ವಿವರಗಳು, ವಿದ್ಯಾರ್ಹತೆ, ಮೀಸಲಾತಿ ಮಾಹಿತಿ ಹಾಗೂ ಇತರ ಅಗತ್ಯ ವಿವರಗಳನ್ನು ದಾಖಲಿಸಬೇಕು.
ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಧಿಸೂಚನೆಯಲ್ಲಿ ಸೂಚಿಸಿರುವ ಅಗತ್ಯ ದಾಖಲೆಗಳನ್ನು ನಿಗದಿತ ಮಾದರಿಯಲ್ಲಿ ಸಲ್ಲಿಸಬೇಕು. ಶೈಕ್ಷಣಿಕ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ವಿಶೇಷ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅನ್ವಯಿಸುವ ಪ್ರಮಾಣಪತ್ರಗಳನ್ನು ಹೊಂದಿರುವುದು ಅಗತ್ಯವಾಗಿದೆ.
ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಜಿಲ್ಲಾವಾರು ಹುದ್ದೆಗಳ ವಿವರ, ಮೀಸಲಾತಿ ಮತ್ತು ಆಯ್ಕೆ ಷರತ್ತುಗಳನ್ನು ಪರಿಶೀಲಿಸಬೇಕು. ಇಲಾಖಾವಾರು ನೇಮಕಾತಿ ಷರತ್ತುಗಳು, ಮಹಿಳಾ ಮೀಸಲಾತಿ, ಸೇವಾನಿರತ ಅಭ್ಯರ್ಥಿಗಳಿಗೆ ಮೀಸಲಿಟ್ಟಿರುವ ಹುದ್ದೆಗಳು ಹಾಗೂ ಹಿಂಬಾಕಿ ಹುದ್ದೆಗಳ ವಿವರಗಳನ್ನೂ ಗಮನಿಸಬೇಕು.
ಈ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹಾಗೂ ತಾಂತ್ರಿಕ ನೆರವಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 080-23460460 ಅನ್ನು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯೊಳಗೆ ಸಂಪರ್ಕಿಸಬಹುದು.
ಅಧಿಸೂಚನೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸಂಖ್ಯೆ ಇಡಿ/ಕೆಇಎ/14/ನೇ.ವಿ./2026 (ಆರ್ಪಿಸಿ), ದಿನಾಂಕ 29.10.2026.
