ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕೃಷಿ ಮೇಳ ನಡೆಯುತ್ತಿದೆ. ನಿನ್ನೆ ದಿನ ಮೇಳದ ಉದ್ಘಾಟನೆ ಇತ್ತು. ಕೃಷಿ ಸಚಿವ ನರೇಂದ್ರಸ್ವಾಮಿ ಬಂದಿದ್ದರು. ಸಚಿವರು ಬರುವಾಗ ಅವರನ್ನ ವೆಲಕಮ್ ಮಾಡುವ ಬ್ಯಾನರ್ ಫ್ಲೆಕ್ಸ್ಗಳು ಜೋರಾಗಿಯೇ ಇರುತ್ತದೆ. ಆದರೆ ವಿವಿ ಕಡೆಯಿಂದ ಹಾಕಿರುವ ಫ್ಲೆಕ್ಸ್ಗಳಲ್ಲಿಯು ಸಂಸದರು, ಶಾಸಕರನ್ನ ಕಡೆಗಡನೆ ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ರು.
ಇದೆ ಕಾರಣಕ್ಕೆ, ಕಾರ್ಯಕ್ರಮಕ್ಕೆ ಬರಬರುತ್ತಲೇ ಸಿಟ್ಟಾದ ಸಂಸದ ಬಿವೈಆರ್ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಫ್ಲೆಕ್ಸ್ಗಳು ರಾರಾಜಿಸ್ತಿರುವುದು ಕಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆವರಣಕ್ಕೆ ಆಗಮಿಸುತ್ತಿದ್ದಂತೆಯೇ ಅಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದಾಗ, ಅಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ಗಮನಿಸಿದ ಸಂಸದರು, ಇದೇ ಮೊದಲ ಬಾರಿಗೆ ಇಂತಹದ್ದನ್ನು ನೋಡುತ್ತಿದ್ದೇನೆ, ಇದೇನು ಕಾಂಗ್ರೆಸ್ ಪಕ್ಷದ ಕಚೇರಿ ಮಾಡಲು ಹೊರಟಿದ್ದೀರಾ ಎಂದು ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿದರು. ರಾಜಕೀಯ ಪಕ್ಷದವರು ಅವರ ಫ್ಲೆಕ್ಸ್ ಹಾಕಿಕೊಳ್ಳಲಿ, ಆದರೆ ಒಂದು ಸರ್ಕಾರಿ ಇಲಾಖೆಯಾಗಿ, ವಿಶ್ವವಿದ್ಯಾನಿಲಯವಾಗಿ ನೀವು ಇದಕ್ಕೆ ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಸಂಸದ ಬಿ.ವೈ. ರಾಘವೇಂದ್ರ ತರಾಟೆಗೆ ತೆಗೆದುಕೊಂಡರು.
ಕಚೇರಿಯೊಳಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸುವಾಗಲೂ ತಮ್ಮ ಆಕ್ಷೇಪವನ್ನು ಮುಂದುವರಿಸಿದ ಬಿ.ವೈ. ರಾಘವೇಂದ್ರ ಅವರು, ಒಂದು ವಿಶ್ವವಿದ್ಯಾನಿಲಯವಾಗಿ ನೀವು ಮಾಡಬೇಕಾದ ಕೆಲಸಗಳಿರುತ್ತವೆ, ಶುಭಾಶಯ ಕೋರುವುದಾದರೆ ಅದಕ್ಕೊಂದು ನಿಯಮವಿರುತ್ತದೆ ಎಂದು ತಿಳಿಸಿದರು. ಶಿಷ್ಟಾಚಾರದ ಪ್ರಕಾರ ಯಾರು ಇರಬೇಕೋ ಅವರ ಭಾವಚಿತ್ರಗಳನ್ನು ಮಾತ್ರ ಹಾಕಬೇಕು, ಮಾಜಿ ಮುಖ್ಯಮಂತ್ರಿಗಳ ಫೋಟೋ ಹಾಕಿ ಎಂದು ನಾನು ಕೇಳುತ್ತಿಲ್ಲ, ಆದರೆ ಸರ್ಕಾರದ ಸ್ಥಾನಕ್ಕೆ ಮತ್ತು ನಮ್ಮಂತಹ ಜನಪ್ರತಿನಿಧಿಗಳಿಗೆ ಗೌರವ ಕೊಡಬೇಕು ಎಂದು ಆಗ್ರಹಿಸಿದರು. ನಮ್ಮನ್ನು ಏಕೆ ಈ ರೀತಿ ಡಿಗ್ರೇಡ್ ಮಾಡುತ್ತಿದ್ದೀರಿ ಎಂದು ಅವರು ಅಧಿಕಾರಿಗಳ ಎದುರು ತಮ್ಮ ಅಸಮಾಧಾನ ಹೊರಹಾಕಿದರು.
ವಿಶ್ವವಿದ್ಯಾನಿಲಯದ ಮುಖ್ಯ ಗೇಟ್‌ನಿಂದ ಹಿಡಿದು ಕ್ಯಾಂಪಸ್ ಒಳಗಿನವರೆಗೂ ಕೇವಲ ಒಂದೇ ಪಕ್ಷದ ಫ್ಲೆಕ್ಸ್‌ಗಳೇ ತುಂಬಿವೆ ಎಂದು ಸಂಸದರು ಆರೋಪಿಸಿದರು. ಒಎಸ್‌ಡಿ ಹಾಗೂ ನಿರ್ದೇಶಕರು ಅವರೇ ಫ್ಲೆಕ್ಸ್ ಹಾಕಿಕೊಂಡಿದ್ದಾರೆ, ಜೊತೆಗೆ ವಿಶ್ವವಿದ್ಯಾನಿಲಯದ ವತಿಯಿಂದಲೇ ಗೇಟ್ ಬಳಿ ಫ್ಲೆಕ್ಸ್ ಹಾಕಿಸಲಾಗಿದೆ, ಇದನ್ನು ನೋಡಿದರೆ ಇದೊಂದು ರಾಜಕೀಯ ಪಕ್ಷದ ಕಾರ್ಯಕ್ರಮದಂತೆ ಕಾಣುತ್ತಿದೆ ಎಂದು ಅವರು ಕಟುವಾಗಿ ನುಡಿದರು.
ಸಂಸದರ ಈ ಸರಣಿ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಹಾಗೂ ಉಪಕುಲಪತಿಗಳು, ಇದು ನಮ್ಮಿಂದಾದ ತಪ್ಪಾಗಿದೆ, ಇದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದರು. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ, ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರುಕಳಿಸದಂತೆ ಸರಿಪಡಿಸಿಕೊಳ್ಳುತ್ತೇವೆ ಎಂದು ಅವರು ಸಂಸದ ಬಿ.ವೈ. ರಾಘವೇಂದ್ರರಿಗೆ ಭರವಸೆ ನೀಡಿದರು.
