ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ನಾನು ನಟ ಕಿಚ್ಚ ಸುದೀಪ್ ಬಗ್ಗೆ ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ. ನಮ್ಮ ಸಮಾಜದಲ್ಲಿ ಕಾವಿಗಳು, ಖಾದಿಗಳು ಹಾಗೂ ಸಾಮಾಜಿಕ ನ್ಯಾಯದಲ್ಲಿ ಬದ್ಧತೆ ಇರುವವರು ಸಮಾಜದ ಬಗ್ಗೆ ಧ್ವನಿ ಎತ್ತಬೇಕು ಎಂಬ ರೀತಿಯಲ್ಲಿ ಮಾತನಾಡಿದ್ದು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.
ಈ ಹಿಂದೆ ಚಿತ್ರದುರ್ಗದಲ್ಲಿ ಮದಕರಿ ನಾಯಕರ ಜಯಂತೋತ್ಸವದ ವೇಳೆ ಕಿಚ್ಚ ಸುದೀಪ್ಗೆ ದಮ್ಮು, ತಾಕತ್ತು ಇದ್ದರೆ ಮೀಸಲಾತಿ ವಿಚಾರವಾಗಿ ಹೋರಾಟಕ್ಕೆ ಬನ್ನಿ ಎಂಬ ಈ ಹಿಂದಿನ ಹೇಳಿಕೆಯ ವಿಚಾರವಾಗಿ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾನು ಆ ರೀತಿ ಹೇಳಿದ್ದು ಯಾರೋ ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಿ ಅಲ್ಲ. ಕಿಚ್ಚ ಸುದೀಪ್ ಕುಟುಂಬ ನನಗೆ ಬಹಳ ಆತ್ಮೀಯರು. 2003ರಲ್ಲಿ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನರ ನಡುವೆ ಸುದೀಪ್ ನಮ್ಮ ಸಮುದಾಯದ ಹುಡುಗ ಎಂದು ನಾವೇ ಪರಿಚಯ ಮಾಡಿಸಿದ್ದು. ಈ ಹಿಂದೆ ಗೋಕಾಕ್ ಚಳುವಳಿಯಲ್ಲಿ ಡಾ. ರಾಜ್ಕುಮಾರ್ ಭಾಗವಹಿಸಿದಂತೆ, ಕಾವೇರಿ ಗಲಾಟೆಯಲ್ಲಿ ನಟ ಅಂಬರೀಶ್ ಭಾಗವಹಿಸಿದಂತೆ ಸುದೀಪ್ ಭಾಗವಹಿಸಬೇಕು ಎಂಬ ರೀತಿಯಲ್ಲಿ ಹೇಳಿದ್ದೆ. ನಾನು ಸುದೀಪ್ ಅವರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿಲ್ಲ. ನಮ್ಮ ಸಮಾಜ ತೊಂದರೆಯಲ್ಲಿದ್ದಾಗ ನಮ್ಮ ಸಮಾಜದಲ್ಲಿರುವ ರಾಜಕಾರಣಿಗಳು, ಕಾವಿ-ಖಾದಿ ಧಾರಿಗಳು ಹಾಗೂ ಸಾಮಾಜಿಕ ನ್ಯಾಯದಲ್ಲಿ ಬದ್ಧತೆ ಇರುವವರು ಬರಬೇಕು ಎಂದು ಮಾತ್ರ ಹೇಳಿದ್ದೆ, ಅದನ್ನು ತಪ್ಪಾಗಿ ತಿಳಿದುಕೊಳ್ಳಬಾರದು ಎಂದು ಹೇಳಿದರು.
