ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಅಬಕಾರಿ ಅಧಿಕಾರಿಗಳು ಇಂದು ಜಿಲ್ಲೆಯ ಮಂಡಗದ್ದೆ ಮತ್ತು ಸಕ್ರೆಬೈಲು ಭಾಗದ ಹೋಟೆಲ್ಗಳ ಮೇಲೆ ದಿಡೀರ್ ದಾಳಿ ನಡೆಸಿ, ಹೋಟೆಲ್ ಮಾಲೀಕರಿಗೆ ಗಡಸು ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಡಾ. ಕೆ.ಎಸ್. ಮುರಳಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಒಟ್ಟು 7 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ, ಅಬಕಾರಿ ಅಧಿಕಾರಿಗಳ ಈ ದಿಡೀರ್ ದಾಳಿಯು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಕ್ರೆಬೈಲು ಹಾಗೂ ಮಂಡಗದ್ದೆಯ ಅನೇಕ ಹೋಟೆಲ್ಗಳು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಅನಧಿಕೃತವಾಗಿ ಮದ್ಯ ಪೂರೈಸುತ್ತಲೇ ಬಂದಿವೆ. ದಿನದಿಂದ ದಿನಕ್ಕೆ ಅಲ್ಲಿನ ಹೋಟೆಲ್ಗಳು ಯಾವುದೇ ಪಬ್ಗಳಿಗೂ ಕಮ್ಮಿ ಇಲ್ಲದಂತೆ ವಹಿವಾಟು ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಈ ಕುರಿತು ಸಾರ್ವಜನಿಕ ಹಿತದೃಷ್ಟಿಯಿಂದ ಅನೇಕ ಮಾಧ್ಯಮಗಳು ಕಳೆದ 10 ವರ್ಷಗಳಿಂದ ನಿರಂತರವಾಗಿ ವರದಿ ಮಾಡುತ್ತಲೇ ಬಂದಿದ್ದವು. ಆದರೂ ಮಾಧ್ಯಮಗಳ ಸುದ್ದಿಗೆ ಕವಡೆ ಕಿಮ್ಮತ್ತು ನೀಡದ ಅಧಿಕಾರಿಗಳು, ಒಳಗೊಳಗೆ ಹೊಂದಾಣಿಕೆ ಮಾಡಿಕೊಂಡು ಅಕ್ರಮ ಸಾರಾಯಿ ಮಾರಾಟಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡಿದ್ದರು ಎಂಬ ಆರೋಪವಿತ್ತು.
ಕೆಲವು ಬಾರ್ ಮಾಲೀಕರು ಇಂತಿಷ್ಟು ಪ್ರಮಾಣದಲ್ಲಿ ಆಲ್ಕೋಹಾಲ್ ಮಾರಾಟ ಮಾಡಿ ಟಾರ್ಗೆಟ್ ತಲುಪಬೇಕು ಎಂಬ ಉದ್ದೇಶದಿಂದ ಕಾನೂನನ್ನು ಗಾಳಿಗೆತೂರಿ ಹೋಟೆಲ್ಗಳಿಗೆ ಮದ್ಯ ಪೂರೈಸುತ್ತಿದ್ದರು. ಇದು ಅಬಕಾರಿ ಅಧಿಕಾರಿಗಳಿಗೆ ತಿಳಿಯದ ವಿಷಯವೇನಲ್ಲ. ಆದರೆ, ಈಗ ಹಬ್ಬದ ಸಂದರ್ಭದಲ್ಲೇ ಅಬಕಾರಿ ಅಧಿಕಾರಿಗಳು ದಿಡೀರ್ ದಾಳಿ ನಡೆಸಿರುವುದು, ಅಧಿಕಾರಿಗಳಿಗೆ ಈ ಬಾರಿ ಕಮಿಷನ್ ಸಿಗುತ್ತಿಲ್ಲವೇ? ಎಂಬ ಗಂಭೀರ ಅನುಮಾನ ಸಾರ್ವಜನಿಕರಲ್ಲಿ ಮೂಡುವಂತೆ ಮಾಡಿದೆ.
ಸಕ್ರೆಬೈಲು-ಮಂಡಗದ್ದೆ ಮಾರ್ಗಮಧ್ಯದಲ್ಲಿ ಸೂಕ್ತ ತನಿಖೆ ನಡೆಸಿದರೆ ನೂರಕ್ಕೂ ಹೆಚ್ಚು ಅಕ್ರಮ ಪ್ರಕರಣಗಳು ಬೆಳಕಿಗೆ ಬರುತ್ತವೆ. ಆದರೆ, ಅಧಿಕಾರಿಗಳು ಕೇವಲ 7 ಪ್ರಕರಣಗಳನ್ನು ಮಾತ್ರ ದಾಖಲಿಸಿರುವುದು, ಯಾವುದೋ ಕೆಲ ಹೋಟೆಲ್ಗಳನ್ನು ಟಾರ್ಗೆಟ್ ಮಾಡಿ ರೇಡ್ ಮಾಡಲಾಗಿದೆಯೇ ಎಂಬ ಸಂಶಯವನ್ನು ಹುಟ್ಟುಹಾಕಿದೆ.
ಒಟ್ಟಾರೆಯಾಗಿ, ಹಿಂದೆ ಮಾಧ್ಯಮಗಳು ಎಷ್ಟೇ ಧ್ವನಿ ಎತ್ತಿದರೂ ಯಾವುದೇ ಪ್ರತಿಕ್ರಿಯೆ ನೀಡದ ಅಧಿಕಾರಿಗಳು, ಈಗ ಅಚಾನಕ್ ಆಗಿ ಹೋಟೆಲ್ಗಳ ಮೇಲೆ ದಾಳಿ ಮಾಡಿದ್ದೇಕೆ? ಇಷ್ಟು ದಿನ ಎಲ್ಲವೂ ಗೊತ್ತಿದ್ದರೂ ಸುಮ್ಮನಿದ್ದು, ಈಗ ಕೆಲವೇ ಕೆಲವು ವ್ಯಕ್ತಿಗಳ ಮೇಲೆ ಮಾತ್ರ ಕಾನೂನು ಕ್ರಮ ಜರುಗಿಸುವುದರ ಹಿಂದಿನ ಮರ್ಮವೇನು ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಬೇಕಿದೆ. ಅಷ್ಟೇ ಅಲ್ಲದೆ, ಈ ದಾಳಿಯು ಕೇವಲ ಒಂದೆರಡು ದಿನಗಳಿಗೆ ಸೀಮಿತವಾಗದೆ, ನಿರಂತರವಾಗಿ ಮುಂದುವರಿದು ಸಾರ್ವಜನಿಕರ ಹಿತ ಕಾಯಬೇಕಿದೆ.
