ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದಲ್ಲಿ ದಸರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರಕಿದ್ದು, ಅಕ್ಟೋಬರ್ 21ರಂದು ನಡೆಯುವ ಜಂಬೂ ಸವಾರಿಗೆ ಮಹಾನಗರ ಪಾಲಿಕೆಯು ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ 3 ಆನೆಗಳನ್ನು ಇಂದು ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ.
ಹೌದು, ಅಕ್ಟೋಬರ್ 21ರಂದು ವೈಭವಯುತವಾಗಿ ಜಂಬೂ ಸವಾರಿ ನೆರವೇರಲಿದೆ. 450 ಕೆ.ಜಿ.ಯ ಬೆಳ್ಳಿ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಆನೆ ಹೊತ್ತು ಸಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆನೆಗಳಿಗೂ ತಾಲೀಮು ನಡೆಸಲಾಗಿದೆ.
ಈ ಹಿಂದೆ ಸುಮಾರು ವರ್ಷಗಳ ಕಾಲ ಅಂಬಾರಿಯನ್ನು ಹೊತ್ತ ಅನುಭವ ಹೊಂದಿರುವ ಸಾಗರ್ ಆನೆ ಈ ಬಾರಿಯೂ ಸಹ ಮೆರವವಣಿಗೆಯಲ್ಲಿ ಭಾಗಿಯಾಗಲಿದ್ದಾನೆ. ಅದರೊಡನೆ ಬಹದ್ದೂರ್ ಹಾಗೂ ಸೋಮಣ್ಣ ಆನೆಗಳು ಸಹ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಆದರೆ ಸಾಗರ್ ಆನೆಯೇ ಈ ಬಾರಿಯೂ ಅಂಬಾರಿ ಹೊರುತ್ತದೆಯೇ ಅಥವಾ ಇನ್ನುಳಿದ ಆನೆಗಳು ಅಂಬಾರಿ ಹೊರುತ್ತವೆಯೇ ಎನ್ನುವುದು ಇನ್ನೂ ಫೈನಲ್ ಆಗಿಲ್ಲ. ಈ ಹಿಂದೆ ಪಾಲಿಕೆ ಸಿಬ್ಬಂದಿ ಹಾಗೆಯೇ ಆನೆ ಮಾವುತರು ಸಕ್ರೆಬೈಲಿನ ರಸ್ತೆಗಳಲ್ಲಿ ಮೂರು ಆನೆಗಳಿಗೂ ಸಹ ತಾಲೀಮು ನಡೆಸಿದ್ದರು. ಇದೀಗ ಆನೆಗಳಿಗೆ ಪೂಜೆ ಮಾಡಿ ಲಾರಿಯ ಮೂಲಕ ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ. ಇನ್ನೇನು ಜಂಬೂ ಸವಾರಿಗೆ 6 ದಿನಗಳು ಬಾಕಿ ಇದ್ದು, ಶಿವಮೊಗ್ಗದಲ್ಲಿ ಆನೆಗಳನ್ನು ಕರೆತಂದು ಇಲ್ಲಿ ತಾಲೀಮು ನಡೆಸಲಾಗುತ್ತದೆ.
ಕಳೆದ ಬಾರಿ ಜಂಬೂ ಸವಾರಿಯಲ್ಲಿ ಬಾಲಣ್ಣ ಆನೆ ಪಾಲ್ಗೊಂಡಿತ್ತು. ಆದರೆ ಬಾಲಣ್ಣ ಆನೆಗೆ ಆರೋಗ್ಯ ಸಮಸ್ಯೆ ಉಂಟಾಗಿ ಕಿವಿ ಗಾಯಗೊಂಡಿದ್ದರಿಂದ, ಈ ಬಾರಿ ಬಾಲಣ್ಣನ ಬದಲಿಗೆ ಸೋಮಣ್ಣ ಆನೆಯ ಎಂಟ್ರಿಯಾಗಿದೆ. ಇಂದಿನಿಂದ 6 ದಿನಗಳ ಕಾಲ ಶಿವಮೊಗ್ಗದಲ್ಲಿ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ.
