ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಇತ್ತೀಚೆಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾಗಿ ನೇಮಕಗೊಂಡಿರುವ ಸಿ.ಜೆ. ಮಧುಸೂದನ್ ಅವರನ್ನು ಭೇಟಿಯಾಗಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶುಭ ಹಾರೈಸಿ ಮಾತನಾಡಿದ ಸಚಿವರು, ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳು ಸುಸಂಘಟಿತ ನಗರಾಭಿವೃದ್ಧಿ, ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಸಮಗ್ರ ಪ್ರಗತಿಯ ಮೂಲಕ ಹೊಸ ಎತ್ತರ ತಲುಪಲಿ” ಎಂದು ಆಶಿಸಿದರು. ಮುಂದುವರಿದು, ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎಷ್ಟು ಬಲವಾಗಿ ಸಂಘಟಿಸುತ್ತೀರೋ, ಅಷ್ಟು ಪಕ್ಷದ ಶಕ್ತಿ ವೃದ್ಧಿಯಾಗುತ್ತದೆ. ರಾಹುಲ್ ಗಾಂಧಿ ಅವರು ಎಸ್‌ಐಆರ್ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಯುವಜನರು ಹೆಚ್ಚಿನ ಶಕ್ತಿ ತುಂಬಬೇಕು. ಯುವಕರಿಗೆ ಅಧಿಕಾರ ಮತ್ತು ಜವಾಬ್ದಾರಿಗಳನ್ನು ನೀಡಬೇಕು ಎಂಬುದು ರಾಹುಲ್ ಗಾಂಧಿ ಅವರ ಆಶಯವಾಗಿದೆ. ಈ ಆಶಯಕ್ಕೆ ತಕ್ಕಂತೆ ಯುವ ನಾಯಕರು ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ, ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ಸಿ.ಜೆ. ಮಧುಸೂದನ್ ಅವರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನ ಕುಮಾರ್, ಕರ್ನಾಟಕ ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಚೇತನ್ ಗೌಡ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.
