ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಕಾಲಿನ ಮೂಳೆ ಮುರಿದುಕೊಂಡಿದ್ದ ‘ದ್ರೋಣ’ ಆನೆಗೆ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಬೃಹತ್ ಆನೆಗೆ ಈ ರೀತಿಯ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ಚಿಕಿತ್ಸೆ ನೀಡಿರುವುದು ದೇಶದಲ್ಲೇ ಮೊದಲ ಪ್ರಯೋಗ ಎಂದು ಹೇಳಲಾಗಿದೆ.
ಹಾಸನ ಜಿಲ್ಲೆಯಲ್ಲಿ ಸೆರೆಹಿಡಿದು ತರಲಾಗಿದ್ದ ಈ ಆನೆಗೆ ‘ದ್ರೋಣ’ ಎಂದು ಹೆಸರಿಡಲಾಗಿತ್ತು. ಬಿಡಾರದಲ್ಲಿದ್ದಾಗ ಕಾಲು ಜಾರಿ ಬಿದ್ದು ಇದರ ಮುಂಗಾಲಿನ ಮೂಳೆ ಮುರಿದುಕೊಂಡಿತ್ತು. ಆನೆಯ ಅತಿಯಾದ ದೇಹದ ಭಾರಕ್ಕೆ ಸಾಮಾನ್ಯ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಕ್ಯಾಸ್ಟಿಂಗ್ ತಡೆಯುವುದಿಲ್ಲ ಹಾಗೂ ಪುಡಿಯಾಗುತ್ತದೆ ಎಂಬುದನ್ನು ಮನಗಂಡ ವೈದ್ಯರಾದ ಡಾ. ಮುರುಳಿ ಮನೋಹರ್ ಮತ್ತು ತಂಡ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದರು.
ಸುಮಾರು 30 ದಿನಗಳ ಕಾಲ ಕ್ಯಾಸ್ಟಿಂಗ್ ಹಾಕಿ, ನೀರಿನಲ್ಲಿ ಹೈಡ್ರೋ ಥೆರಪಿ ನೀಡಿ ಮೂಳೆ ಬೇಗ ಕೂಡಿಕೊಳ್ಳುವಂತೆ ಮಾಡಲಾಯಿತು. ಪ್ರಸ್ತುತ ದ್ರೋಣ ಸಂಪೂರ್ಣ ಚೇತರಿಸಿಕೊಂಡಿದ್ದು, ಇತರ ಆನೆಗಳೊಂದಿಗೆ ನಿತ್ಯ ಕಾಡಿಗೆ ಹೋಗಿ ಬರುತ್ತಿದೆ.
ಪಿಡಿಎಫ್ನಲ್ಲಿರುವ ಪ್ರಮುಖ ಸುದ್ದಿಗಳು
ಚುನಾವಣೆಯಲ್ಲಿ ಗೆದ್ದು ಬಂದಾದರೂ ಮತ್ತೆ ಬಿಜೆಪಿ ಸೇರ್ಪಡೆ:
ಕೆ.ಎಸ್. ಈಶ್ವರಪ್ಪ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು 100% ಖಚಿತ ಎಂದಿರುವ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ, ಆರ್ಎಸ್ಎಸ್ ಹಿರಿಯರು ಮತ್ತು ಬೆಂಬಲಿಗರ ಸಲಹೆಯಂತೆ ಮತ್ತೆ ಬಿಜೆಪಿ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ತೀರಾ ಬಿಜೆಪಿ ಸೇರ್ಪಡೆ ಸಾಧ್ಯವಾಗದಿದ್ದರೆ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದ ನಂತರ ಬಿಜೆಪಿಗೆ ಸೇರುವುದಾಗಿ ತಿಳಿಸಿದ್ದಾರೆ.
ಕಾರ್ಮಿಕರ ಆರೋಗ್ಯ ಯೋಜನೆಯಲ್ಲಿ ₹800 ಕೋಟಿ ಅವ್ಯವಹಾರ ಶಂಕೆ:
ಆರಗ ಜ್ಞಾನೇಂದ್ರ ಕಾರ್ಮಿಕರ ಕಲ್ಯಾಣಕ್ಕಾಗಿ ಸಂಗ್ರಹಿಸಲಾಗುವ ಸೆಸ್ ಹಣದಲ್ಲಿ ಕಾರ್ಮಿಕರ ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಸುಮಾರು ₹800 ಕೋಟಿ ರೂಪಾಯಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದು, ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ದಿನಕ್ಕೆ 7 ಗಂಟೆ ವಿದ್ಯುತ್ ನೀಡಿ:
ಎಚ್.ಆರ್. ಬಸವರಾಜಪ್ಪ ರಾಜ್ಯಾದ್ಯಂತ ಭೀಕರ ಬರ ಪರಿಸ್ಥಿತಿ ಎದುರಾಗಿರುವುದರಿಂದ ಸರ್ಕಾರ ಎಕರೆಗೆ ₹25,000 ಬೆಳೆ ನಷ್ಟ ಪರಿಹಾರ ನೀಡಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮತ್ತು ಕೃಷಿ ಪಂಪ್ಸೆಟ್ಗಳಿಗೆ ದಿನಕ್ಕೆ ಕನಿಷ್ಠ 7 ಗಂಟೆ ವಿದ್ಯುತ್ ಪೂರೈಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಆಗ್ರಹಿಸಿದ್ದಾರೆ.
ಮಾರುಕಟ್ಟೆಯಲ್ಲಿ ಅಕ್ಕಿ ದರ ನಿರಂತರ ಏರಿಕೆ:
4 ತಿಂಗಳಲ್ಲಿ 4ನೇ ಬಾರಿ ಹೆಚ್ಚಳ ರಾಜ್ಯದಲ್ಲಿ ಮುಂಗಾರು ಕೊರತೆ ಹಾಗೂ ಪ್ರಮುಖ ಭತ್ತ ಬೆಳೆಯುವ ಪ್ರದೇಶಗಳಲ್ಲಿ ನೀರಿನ ಅಭಾವದಿಂದಾಗಿ ಮಾರುಕಟ್ಟೆಗೆ ಅಕ್ಕಿ ಆವಕ ಕಡಿಮೆಯಾಗಿದೆ. ಇದರಿಂದಾಗಿ ಕಳೆದ 4 ತಿಂಗಳಲ್ಲಿ 4ನೇ ಬಾರಿಗೆ ಅಕ್ಕಿ ದರ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿ ಬೆಲೆ ಕೆಜಿಗೆ ₹70 ಗಡಿ ತಲುಪಿದೆ.
ಆಶ್ರಯ ಮನೆಗಳ ಹಸ್ತಾಂತರಕ್ಕೆ ವಿಳಂಬ:
ಅಕ್ಟೋಬರ್ 27ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳನ್ನು ಫಲಾನುಭವಿಗಳಿಗೆ ತ್ವರಿತವಾಗಿ ಹಸ್ತಾಂತರಿಸದಿದ್ದರೆ ಮತ್ತು ಕಾಮಗಾರಿ ಪೂರ್ಣಗೊಳಿಸದಿದ್ದರೆ ಅಕ್ಟೋಬರ್ 27ರಂದು 4,300 ಫಲಾನುಭವಿಗಳನ್ನು ಒಗ್ಗೂಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಷ್ಟ್ರಭಕ್ತರ ಬಳಗ ಎಚ್ಚರಿಸಿದೆ.
ಈ ಮೇಲಿನ ಎಲ್ಲಾ ಸುದ್ದಿಗಳ ಸಂಪೂರ್ಣ ವಿವರ (ಇ-ಲಿಂಕ್)ನಲ್ಲಿದೆ
