ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪ ಆಶ್ರಯ ಬಡಾವಣೆ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಮನೆಗಳನ್ನು ಹಸ್ತಾಂತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ, ಅಕ್ಟೋಬರ್ 27 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದ ಅವರು , ಆಶ್ರಯ ಯೋಜನೆಯಡಿ ಮನೆ ಪಡೆಯಲು ಬಡಜನರು ತ ಪಾತ್ರೆ-ಪಗಡೆಗಳನ್ನು ಮಾರಿ ಸುಮಾರು 85, ಸಾವಿರ ಹಣ ಕಟ್ಟಿ 9 ವರ್ಷಗಳು ಕಳೆದಿವೆ. ಆದರೆ, ಇದುವರೆಗೆ ಕೇವಲ 464 ಜನರಿಗೆ ಮಾತ್ರ ಸಂಪೂರ್ಣ ಮನೆಗಳ ಕೀ ಹಸ್ತಾಂತರಿಸಲಾಗಿದೆ. ಬಡವರ ಬದುಕಿನ ಬಗ್ಗೆ ರಾಜಕೀಯ ಮಾಡುತ್ತೇನೆ ಎಂದು ಹೇಳುವ ಮುಖ್ಯಮಂತ್ರಿಗಳೇ, ಈ ಆಶ್ರಯ ಯೋಜನೆಗೆ ಸಂಬಂಧಿಸಿದಂತೆ ವಸತಿ ಸಚಿವರು ಇದ್ದಾರೋ ಅಥವಾ ಸತ್ತಿದ್ದಾರೋ ತಿಳಿಯುತ್ತಿಲ್ಲ. ರಾಜ್ಯ ಸರ್ಕಾರ ಇದುವರೆಗೆ ಯೋಜನೆಗೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಗೋವಿಂದಾಪುರ ಆಶ್ರಯ ಬಡಾವಣೆಯ 3,000 ಮನೆಗಳ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಗೆ 15 ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದರಿಂದ, ಅವರು ಕಾಮಗಾರಿ ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನು ಗೋಪಿಶೆಟ್ಟಿಕೊಪ್ಪದಲ್ಲಿ 1,296 ಮನೆಗಳ ನಿರ್ಮಾಣವಾಗಬೇಕಿದೆ. ಅಲ್ಲಿ ಕಾಂಟ್ರಾಕ್ಟರ್ ಹಣ ಪಡೆದುಕೊಂಡು ಕೆಲಸ ಮುಗಿಸದೆ ಹೋಗಿದ್ದಾರೆ. ಈ ಕಾಂಟ್ರಾಕ್ಟರ್‌ಗಳಿಗೂ ಮುಖ್ಯಮಂತ್ರಿಗಳಿಗೂ ಏನಾದರೂ ಒಳಸಂಬಂಧ ಇದೆಯೋ ಗೊತ್ತಿಲ್ಲ. ತಕ್ಷಣವೇ ಅಂತಹ ಕಾಂಟ್ರಾಕ್ಟರ್‌ಗಳನ್ನು ಬ್ಲಾಕ್ ಲೀಸ್ಟ್ಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ನಾವು ಪ್ರತಿಯೊಬ್ಬ ಬಡ ಫಲಾನುಭವಿಗಳನ್ನು ಸಂಪರ್ಕಿಸಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ತಕ್ಷಣವೇ ಶಿವಮೊಗ್ಗಕ್ಕೆ ಆಗಮಿಸಿ, ಕೆಲವೇ ದಿನಗಳಲ್ಲಿ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಬೇಕು. ಯಾರೂ ಇಲ್ಲಿ ಸರ್ಕಾರದ ಭಿಕ್ಷೆ ಕೇಳುತ್ತಿಲ್ಲ. ಆಡಳಿತ ನಡೆಸಲು ಹಣವಿಲ್ಲದೆ ಸರ್ಕಾರ ಪಾಪರ್ ಆಗಿದೆ ಎಂದು ಆಕ್ರೋಶ ಹೊರಹಾಕಿದ ಅವರು, ಬಡವರಿಗೆ ನ್ಯಾಯ ದೊರಕುವವರೆಗೂ ಸಂಘರ್ಷ ಮುಂದುವರಿಯಲಿದ್ದು, ಅಕ್ಟೋಬರ್ 27 ರಂದು 4,300 ಫಲಾನುಭವಿಗಳನ್ನು ಒಗ್ಗೂಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
