ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ:ಸುಡಾ ಅಧ್ಯಕ್ಷರಾದ ಎಚ್.ಎಸ್. ಸುಂದರೇಶ್ರವರು ನನ್ನನ್ನು ದಡ್ಡ ಕುರುಬ ಎಂದು ಕರೆದಿದ್ದಾರೆ. ಇದರಿಂದ ನನ್ನ ಸಮಾಜದವರಿಗೆ ನೋವಾಗಿದ್ದು, ಆತ್ಮಸಾಕ್ಷಿಯಾಗಿ ಎಚ್.ಎಸ್. ಸುಂದರೇಶ್ ಸಮಾಜದವರ ಬಳಿ ಕ್ಷಮೆ ಕೇಳಬೇಕು ಎಂದು ಮಾಜಿ ಶಾಸಕ ಆರ್. ಪ್ರಸನ್ನಕುಮಾರ್ ಆಗ್ರಹಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಎಚ್.ಎಸ್. ಸುಂದರೇಶ್ ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ನನ್ನ ಬಗ್ಗೆ ಏನೇ ಮಾತನಾಡಿದ್ದರೂ ಬೇಸರವಿಲ್ಲ, ಅದನ್ನು ಪಕ್ಷ ನೋಡಿಕೊಳ್ಳುತ್ತದೆ. ಆದರೆ ನನ್ನ ವಿಚಾರ ಪ್ರಸ್ತಾಪಿಸುವ ವೇಳೆ ನಮ್ಮ ಸಮಾಜದ ‘ಕುರುಬ’ ಎಂಬ ಹೆಸರನ್ನು ಬಳಸಿ, ಆತ ದಡ್ಡ ಕುರುಬ ಎಂಬ ಮಾತನ್ನಾಡಿದ್ದಾರೆ. ಇದರಿಂದ ನನ್ನ ಸಮಾಜದವರಿಗೆ ಬಹಳ ಬೇಸರವುಂಟಾಗಿದೆ. ಆದ್ದರಿಂದ ನನ್ನ ಸಮಾಜದವರ ಬಳಿ ಎಚ್.ಎಸ್. ಸುಂದರೇಶ್ ಆತ್ಮಸಾಕ್ಷಿಯಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸೂಕ್ತ ಸಮಯದಲ್ಲಿ ನನ್ನ ಸಮಾಜದವರು ಉತ್ತರ ನೀಡಲಿದ್ದಾರೆ, ಎಂದರು.
ಅವರೂ ಹೆಚ್ ಎಸ್ ಸುಂದರೇಶ್ ನನ್ನ ಸ್ನೇಹಿತರೇ ಆಗಿದ್ದಾರೆ, ಆದರೆ ಏಕೆ ಹೀಗೆ ಮಾತನಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಅದೇ ರೀತಿ ಪಕ್ಷದ ವ್ಯವಸ್ಥೆಯ ಬಗ್ಗೆಯೂ ಮಾತನಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದಂತೆ ನಾನು ಕೇಳುತ್ತೇನೆ ಎಂದು ಹೇಳಿದ್ದಾರೆ. ಆದರೆ ಅವರೊಬ್ಬ ಸಚಿವರು, ಅವರೊಂದಿಗೆ ಸೇರಿ ಕೆಲಸ ಮಾಡಬೇಕಾದದ್ದು ನನ್ನ ಕರ್ತವ್ಯ, ಅದರ ಹೊರತಾಗಿ ಬೇರೇನೂ ಇಲ್ಲ. ಅಷ್ಟಕ್ಕೂ ತಾವು ಅನುಭವಿಸಿದ ಹುದ್ದೆಯನ್ನು ಕಿತ್ತು ಹೋದ ಹುದ್ದೆ ಎಂದಿದ್ದಾರೆ. ಮೂರುವರೆ ವರ್ಷದಿಂದ ಸುಡಾ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರಲ್ಲ? ಅಧ್ಯಕ್ಷರಾಗಿ ಏನೇನು ಮಾಡಿದ್ದಾರೆ ಎಂದು ಗೊತ್ತಿದೆ. ಪಕ್ಷದ ಹಿರಿಯರಾದ ಬಿ.ವಿ. ಶ್ರೀನಿವಾಸ್, ಮಂಜುನಾಥ ಭಂಡಾರಿ, ಕಿಮ್ಮನೆ ರತ್ನಾಕರ್ ಸೇರಿದಂತೆ ಅನೇಕರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಈ ಮೂಲಕ ಪಕ್ಷದಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷ ಈಗಾಗಲೇ ಅವರಿಗೆ ನೋಟಿಸ್ ನೀಡಿದೆ, ಎಂದು ತಿಳಿಸಿದರು.
