ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಗಣೇಶೋತ್ಸವದ ವಿಸರ್ಜನಾ ಪೂರ್ವ ಮೆರವಣಿಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನಗರದ ಬಹುತೇಕ ವೃತ್ತಗಳಲ್ಲಿ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಪಾನಕ, ಫಲಾಹಾರ ಸೇರಿದಂತೆ ಪ್ರಸಾದ ವಿತರಿಸಲಾಗುತ್ತಿದೆ.
ಅದರಂತೆ ಇಂದು ರಾಜಬೀದಿ ಉತ್ಸವದ ಅಂಗವಾಗಿ ಸಂಜೆ 4 ಗಂಟೆಗೆ ಗೋಪಿ ವೃತ್ತದ ಗಣೇಶ್ ಜ್ಯುವೆಲರ್ಸ್ ಸಮೀಪ ಸಂಕಲ್ಪ ಶಿವಮೊಗ್ಗ ಸಂಘಟನೆ ಹಾಗೂ ಅದರೊಂದಿಗೆ 36ಕ್ಕೂ ಹೆಚ್ಚು ಸಂಘಟನೆಗಳು ಸೇರಿಕೊಂಡು, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದಲ್ಲಿ ಭಕ್ತಾದಿಗಳಿಗೆ 20 ಸಾವಿರ ಲಾಡುಗಳನ್ನು ಹಂಚಲು ಯೋಜನೆ ರೂಪಿಸಲಾಗಿದೆ ಎಂದು ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದ್ದಾರೆ.
