ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಆಯ್ಕೆ ಪ್ರಕ್ರಿಯೆಯ ಮೊದಲ ಮೂರು ಹಂತಗಳಲ್ಲಿ ಶಿವಮೊಗ್ಗ ಜಿಲ್ಲೆಯ ಒಂದೇ ಒಂದು ತಾಲೂಕಿಗೂ ಸ್ಥಾನ ಸಿಕ್ಕಿರಲಿಲ್ಲ. ಇದೀಗ ಸರ್ಕಾರ ಹೊಸದಾಗಿ 29 ತಾಲೂಕುಗಳನ್ನು ಬರದ ವಾಸ್ತವ ಸ್ಥಿತಿ ಪರಿಶೀಲನೆಗೆ ಆಯ್ಕೆ ಮಾಡಿದ್ದು, ಈ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬ ಮತ್ತು ತೀರ್ಥಹಳ್ಳಿ ತಾಲೂಕುಗಳು ಸೇರ್ಪಡೆಯಾಗಿವೆ.
ಮಲೆನಾಡು ಭಾಗದಲ್ಲಿಯೂ ಮಳೆ ಕೊರತೆಯಿಂದಾಗಿ ನಾನಾ ಸಮಸ್ಯೆಯಾಗಿದೆ. ಆದರೆ ಸರ್ಕಾರ ಇದುವರೆಗೂ ಬರಪಟ್ಟಿಗೆ ಜಿಲ್ಲೆಯನ್ನ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಇದು ಆಕ್ರೋಶಕ್ಕೂ ಕಾರಣವಾಗಿತ್ತು, ಇದೀಗ ಜಿಲ್ಲೆಯ ಐದು ತಾಲೂಕುಗಳು ಹೊಸ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆದರೆ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲೂಕುಗಳು ಈ 29 ತಾಲೂಕುಗಳ ಪಟ್ಟಿಯಲ್ಲಿ ಇಲ್ಲ. ಒಟ್ಟು ಏಳು ತಾಲೂಕುಗಳ ಪೈಕಿ, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ ತಾಲೂಕುಗಳು ಪಟ್ಟಿಗೆ ಸೇರ್ಪಡೆಯಾಗಿದೆ
ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಹಾಗೂ ಎರಡನೇ ಹಂತದಲ್ಲಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ನಂತರ ಮೂರನೇ ಹಂತದಲ್ಲಿ ಮತ್ತೆ 53 ತಾಲೂಕುಗಳನ್ನು ಸೇರಿಸಿ ರಾಜ್ಯದ ಬರಪೀಡಿತ ತಾಲೂಕುಗಳ ಸಂಖ್ಯೆಯನ್ನು 177ಕ್ಕೆ ಹೆಚ್ಚಿಸಲಾಗಿತ್ತು.
ಆಗಸ್ಟ್ 27ರಂದು ಮೊದಲ ಹಂತದ ಪಟ್ಟಿಯನ್ನು ಪ್ರಕಟಿಸಿದಾಗಲೂ ಮಲೆನಾಡಿನಲ್ಲಿ ಮಳೆ ಕೊರತೆ ಶೇ.35ರಷ್ಟಿದೆ ಎಂದು ವರದಿಯಾಗಿತ್ತು! ಆದಾಗ್ಯು ಶಿವಮೊಗ್ಗ ಜಿಲ್ಲೆಯ ತಾಲೂಕುಗಳು ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ನಂತರ ಎರಡನೇ ಹಂತದಲ್ಲಿ 23 ಹಾಗೂ ಮೂರನೇ ಹಂತದಲ್ಲಿ 53 ತಾಲೂಕುಗಳನ್ನು ಸೇರಿಸಿದಾಗಲೂ ಜಿಲ್ಲೆಯ ತಾಲೂಕುಗಳಿಗೆ ಅವಕಾಶ ದೊರೆತಿರಲಿಲ್ಲ.
ಇದೀಗ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಯಲ್ಲಿ ಒಟ್ಟು 29 ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್, ಅಂದರೆ ಬರದ ವಾಸ್ತವ ಸ್ಥಿತಿಯನ್ನು ಸ್ಥಳಮಟ್ಟದಲ್ಲಿ ಪರಿಶೀಲಿಸುವ ಪ್ರಕ್ರಿಯೆಗೆ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಐದು ತಾಲೂಕುಗಳ ಜೊತೆಗೆ ಬೀದರ್ ಜಿಲ್ಲೆಯ ಔರಾದ್, ಬೆಳಗಾವಿ ಜಿಲ್ಲೆಯ ಗೋಕಾಕ್, ರಾಮದುರ್ಗ, ಸವದತ್ತಿ ಮತ್ತು ಕಾಗವಾಡ, ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ಸೇರಿದಂತೆ ವಿವಿಧ ಜಿಲ್ಲೆಗಳ ತಾಲೂಕುಗಳು ಸೇರಿವೆ. ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಹಿಂದಿನ ಬರ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಇಂಡಿ ಮತ್ತು ಚಡಚಣ ತಾಲೂಕುಗಳನ್ನೂ ಹೊಸ ಗ್ರೌಂಡ್ ಟ್ರೂಥಿಂಗ್ ಪಟ್ಟಿಯಲ್ಲಿ ಸೇರಿಸಲಾಗಿದೆ.
ಹೊಸದಾಗಿ ಸೇರ್ಪಡೆಯಾದ 29 ತಾಲೂಕುಗಳ ವಿಚಾರದಲ್ಲಿ ಇನ್ನೂ ಒಂದು ಮುಖ್ಯ ಅಂಶವಿದೆ. ಇವುಗಳನ್ನು ಈಗ ಬರದ ವಾಸ್ತವ ಸ್ಥಿತಿ ಪರಿಶೀಲನೆಗೆ ಆಯ್ಕೆ ಮಾಡಲಾಗಿದೆ. ಸ್ಥಳ ಪರಿಶೀಲನೆ, ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ನಿಗದಿತ ಮಾನದಂಡಗಳನ್ನು ಪರಿಶೀಲಿಸಿದ ಬಳಿಕ ಅಧಿಕೃತ ಬರ ಘೋಷಣೆಯ ಮುಂದಿನ ಕ್ರಮ ನಡೆಯಲಿದೆ.
