ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮುಂಬರುವ ಗೌರಿ-ಗಣೇಶ ಹಬ್ಬವನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಬಂದೋಬಸ್ತ್ ಸಿದ್ಧತೆ ಚುರುಕುಗೊಳಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಹಲ್ಲಾ ಸಭೆ, ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಸಭೆ, ಫುಟ್ ಪೆಟ್ರೋಲಿಂಗ್, ರೂಟ್ ಮಾರ್ಚ್ ಹಾಗೂ ಚೀತಾ ಗಸ್ತು ವ್ಯವಸ್ಥೆ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸಾಮಾನ್ಯವಾಗಿ ಪ್ರತಿವರ್ಷ ಹಬ್ಬದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಅಗತ್ಯ ಗುಪ್ತ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಗುಪ್ತ ಮಾಹಿತಿ ಸಂಗ್ರಹ ಸಿಬ್ಬಂದಿ ಹಾಗೂ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗ ಳ ಸಭೆ ನಡೆಸಲಾಗುತ್ತದೆ. ಅದೇ ರೀತಿಯ ಈ ವರ್ಷವೂ ಎಸ್ಪಿ ನಿಖಿಲ್ ಇಲಾಖೆ ಸಿಬ್ಬಂಧಿಯೊಂದಿಗೆ ಸರಣಿ ಸಭೆ ನಡೆಸಿದ್ದಾರೆ.
ಅಲ್ಲದೆ ಗೌರಿ ಗಣೇಶ ಬಂದೋಬಸ್ತ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳು ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ಸಿಬ್ಬಂದಿಗೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ. ಇನ್ನೊಂದೆಡೆ ಪ್ರತಿ ವರ್ಷಈದ್ ಮಿಲಾದ್ ಹಾಗೂ ಗಣಪತಿ ಹಬ್ಬ ಒಟ್ಟೊಟ್ಟಿಗೆ ಬರುತ್ತಿತ್ತು. ಇದು ಬಂದೋಬಸ್ತ್ಗೂ ಕಷ್ಟವಾಗುತ್ತಿತ್ತು. ಆದರೆ ಈ ಸಲ ಈದ್ ಮಿಲಾದ್ ಹಬ್ಬ ವಿಜ್ರಂಭಣೆಯಿಂದ ಯಶಸ್ವಿಯಾಗಿದೆ.
ಗೌರಿ ಗಣೇಶ ಬಂದೋಬಸ್ತ್ ಗೆ ಹೆಚ್ಚಿನ ಅವಕಾಶ
ಇದರಿಂದ ಎಸ್ಪಿ ನಿಖಿಲ್ ನೇತೃತ್ವದ ಪೊಲೀಸ್ ಇಲಾಖೆ ಚೂರು ಕೆಲಸ ಕಡಿಮೆಯಾಗಿದೆ. ಆದಾಗ್ಯು ಗಣೇಶ ಚರ್ತುರ್ಥಿ, ದಾವಣಗೆರೆ ವಲಯದಲ್ಲಿ ಶಿವಮೊಗ್ಗ ಹಾಗೂ ಚಿತ್ರುದರ್ಗ ಗಣೇಶೋತ್ಸವ ವಿಶೇಷ ಹಾಗೂ ಅತಿಸೂಕ್ಷ ಎನಿಸಿಕೊಂಢಿದೆ. ಈ ಕಾರಣಕ್ಕೆ ಜಾಗೃತೆ ಹೆಚ್ಚುವಹಿಸುವುದು ಅನಿವಾರ್ಯ.ಈ ಕಾರಣಕ್ಕೆ ಸರಣಿ ಸಭೆಗಳನ್ನ ನಡೆಸ್ತಿರುವ ಇಲಾಖೆ ಸಿಬ್ಬಂದಿ ಜನರೊಂದಿಗೆ ಹತ್ತರಿದಿಂದ ಸಂಪರ್ಕದಲ್ಲಿದ್ದಾರೆ. ಲೋಕಲ್ ಏರಿಯಾಗಳ ಆಗುಹೋಗುಗಳ ಜೊತೆಗೆ ಸಂಪರ್ಕದಲ್ಲಿರುವ ಅಧಿಕಾರಿಗಳು ನೇರವಾಗಿ ಎಸ್ಪಿಯುವರಿಗೆ ಈ ಕುರಿತಾಗಿ ಮಾಹಿತಿ ನೀಡುತ್ತಿದ್ದಾರೆ. ಅದನ್ನ ಆಧರಿಸಿ ಪ್ರತಿದಿನದ ಚಟುವಟಿಕೆಗಳನ್ನ ಪೊಲೀಸ್ ಇಲಾಖೆ ನಿರ್ವಹಿಸುತ್ತಿದೆ.
ಇನ್ನೂ ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ್ನ ಒಂದೊಂದಾಗಿ ಗಮನಿಸುವುದಾದರೆ, ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪಿಎಸ್ಐ ನೇತೃತ್ವದಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯುವ ಸ್ಥಳಗಳಲ್ಲಿ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮೊಹಲ್ಲಾ ಸಭೆಗಳನ್ನು ನಡೆಸಲಾಗಿದೆ. ಸಾರ್ವಜನಿಕರು ಹಾಗೂ ಗಣೇಶೋತ್ಸವ ಆಯೋಜಕರೊಂದಿಗೆ ಮಾತುಕತೆ ನಡೆಸಿ ಅಗತ್ಯ ಸೂಚನೆ ನೀಡಿರುವ ಪೊಲೀಸರು, ಠಾಣಾ ವ್ಯಾಪ್ತಿಯಲ್ಲಿ ಫುಟ್ ಪೆಟ್ರೋಲಿಂಗ್ ಕೂಡ ಕೈಗೊಂಡಿದ್ದಾರೆ.
ನ್ಯೂ ಟೌನ್ ವ್ಯಾಪ್ತಿಯ ಐಟಿಐ ಕಾಲೋನಿಯ ಜೈ ಭೀಮ್ ಕನ್ನಡ ಯುವಕರ ಸಂಘದ ವತಿಯಿಂದ ಗಣೇಶೋತ್ಸವ ನಡೆಯುವ ಹಿನ್ನೆಲೆಯಲ್ಲಿ ಅಲ್ಲಿಯೂ ಮೊಹಲ್ಲಾ ಸಭೆ ನಡೆಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯರಿಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿರಾಳಕೊಪ್ಪ ಪಟ್ಟಣದಲ್ಲಿಯೂ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ರೂಟ್ ಮಾರ್ಚ್ ನಡೆಸಲಾಗಿದೆ. ಹಬ್ಬದ ದಿನಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಸಿಬ್ಬಂದಿ ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚರಿಸಿ ಭದ್ರತಾ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಚೀತಾ ಗಸ್ತು ಪಡೆಯನ್ನು ನಿಯೋಜಿಸಲಾಗಿದೆ. ಈ ಪಡೆಯ ಸಿಬ್ಬಂದಿಗೆ ನಿರಂತರ ಬ್ರೀಫಿಂಗ್ ನಡೆಸಲಾಗುತ್ತಿದೆ. ಇತ್ತ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿಯೂ ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಸಭೆ ನಡೆಸಲಾಗಿದೆ.
ಆಲದಹಳ್ಳಿ, ಹಾಡೋನಹಳ್ಳಿ, ಸಿದ್ದೇಶ್ವರ ನಗರ, ಅಬ್ಬಲಗೆರೆ, ಸೋಮಿನಕೊಪ್ಪ ಹಾಗೂ ಕೋಟೆಗಂಗೂರು ಸೇರಿದಂತೆ ವಿವಿಧ ಪ್ರದೇಶಗಳ ಗಣೇಶೋತ್ಸವ ಸಮಿತಿಯವರೊಂದಿಗೆ ಸಭೆ ನಡೆಸಿ ಹಬ್ಬದ ವೇಳೆ ಪಾಲಿಸಬೇಕಾದ ಕ್ರಮಗಳ ಕುರಿತು ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಈ ನಡುವೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶಾಂತಿ ಸಭೆಯನ್ನೂ ಕೈಗೊಳ್ಳಲಾಗಿದ್ದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಲ್ಲಾ ಧರ್ಮದ ಮುಖಂಡರ ವಿಶ್ವಾಸವನ್ನು ಪಡೆದುಕೊಂಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಶಾಂತಿಯುತ ವಾತಾವರಣ ಕಾಪಾಡಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಸಾರ್ವಜನಿಕರು ಹಾಗೂ ಗಣೇಶೋತ್ಸವ ಆಯೋಜಕರ ಸಹಕಾರಕೋರಲಾಗಿದೆ.
ಇನ್ನೂ ವಿಶೇಷವಾಗಿ ದೊಡ್ಡಪೇಟೆ , ಕೋಟೆ, ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಹೆಚ್ಚು ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಇಲ್ಲಿನ ಸ್ಟೇಷನ್ ಸಿಬ್ಬಂದಿ ಫುಟ್ ಪೆಟ್ರೋಲಿಂಗ್ ನಡೆಸಿದ್ದಾರೆ. ಸ್ಥಳೀಯ ಪರಿಸ್ಥಿತಿ, ಗಣೇಶ ಪ್ರತಿಷ್ಠಾಪನೆ ನಡೆಯುವ ಪ್ರದೇಶಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳತ್ತ ಗಮನ ಹರಿಸಿ ಪೊಲೀಸ್ ಸಿಬ್ಬಂದಿ ಗಸ್ತು ಕೈಗೊಂಡಿದ್ದಾರೆ.
ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ಪ್ರತಿಷ್ಠಾಪನಾ ಮಂಡಳಿಗಳ ಪದಾಧಿಕಾರಿಗಳನ್ನು ಶಿವಾಲಯಕ್ಕೆ ಕರೆಯಿಸಿ ಸಭೆ ನಡೆಸಲಾಗಿದೆ. ಮುಂಬರುವ ಗಣೇಶ ಹಬ್ಬದ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳು ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಂಡಳಿಯವರಿಗೆ ಸೂಚನೆ ನೀಡಲಾಗಿದೆ. ರಾಗಿಗುಡ್ಡ, ಹರಿಗೆ ಹಾಗೂ ಕುವೆಂಪು ನಗರ ವ್ಯಾಪ್ತಿಯಲ್ಲಿಯೂ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮೊಹಲ್ಲಾ ಸಭೆಗಳನ್ನು ನಡೆಸಲಾಗಿದ್ದು, ಸ್ಥಳೀಯರೊಂದಿಗೆ ಪೊಲೀಸ್ ಇಲಾಖೆ ಸಂವಾದ ನಡೆಸಿದೆ. ಹಬ್ಬದ ಸಿದ್ಧತೆ, ಗಣೇಶ ಪ್ರತಿಷ್ಠಾಪನೆ ಕುರಿತು ಮಾಹಿತಿ ಪರಸ್ಪರ ವಿನಿಮಯ ಮಾಡಲಾಗಿದೆ.
ಶಿವಮೊಗ್ಗ ನಗರ, ಭದ್ರಾವತಿ, ಶಿರಾಳಕೊಪ್ಪ ಹಾಗೂ ಗ್ರಾಮಾಂತರ ಭಾಗಗಳ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗೌರಿ-ಗಣೇಶ ಹಬ್ಬದ ಬಂದೋಬಸ್ತ್‌ಗೆ ಪೂರ್ವಸಿದ್ಧತೆ ಕೈಗೊಳ್ಳಲಾಗಿದ್ದು, ಗುಪ್ತ ಮಾಹಿತಿ ಸಂಗ್ರಹದಿಂದ ಹಿಡಿದು ರಸ್ತೆ ಗಸ್ತು, ಮೊಹಲ್ಲಾ ಸಭೆ, ರೂಟ್ ಮಾರ್ಚ್ ಮತ್ತು ಚೀತಾ ಗಸ್ತಿನವರೆಗೆ ವಿವಿಧ ಹಂತಗಳಲ್ಲಿ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿದೆ. ಈ ಮಧ್ಯೆ ಅಪರಾಧ ಲೊಕದ ಮೇಲೂ ಕಣ್ಣಿಟ್ಟಿರುವ ಪೊಲೀಸ್ ಇಲಾಖೆಯ ಒಂದು ದೊಡ್ಡ ಟೀಂ, ಚಿಗುರಿಕೊಂಡಿರುವ ಆಸಾಮಿಗಳಿಗೆ ಗಡಿಪಾರಿನ ಟಿಕೆಟ್ ನೀಡುತ್ತಿದೆ. ಅಲ್ಲದೆ ಕಿರಿಕ್ ಆಸಾಮಿಗಳಿಗೆ ವಾರ್ನಿಂಗ್ ನೀಡಲಾಗಿದ್ದು, ಹಲವು ರೌಡಿಶೀಟರ್ಗಳ ಮೇಲೆ ನಿಗಾಗ ಇಡಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಚ್ಚರಿಕೆಯ ಹಾಗೂ ಜಾಗ್ರತೆಯ ಹೆಜ್ಜೆಯನ್ನ ಇಡುತ್ತಿರುವುದು ವಿಶೇಷ!.
ಒಟ್ಟಾರೆಯಾಗಿ ಗಣೇಶ ಚತುರ್ಥಿ ಆಚರಣೆಯಲ್ಲಿ ಜನರ ಸಂಭ್ರಮಕ್ಕೆ ಚ್ಯುತಿಯಾಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಕೈ ಜೋಡಿಸಲು ನಾಗಕರಿಂದಲೂ ನೆರವು ಕೋರಲಾಗಿದೆ. ಇನ್ನೂ ಶಿವಮೊಗ್ಗಕ್ಕೆ ವರ್ಗವಾದ ಮೇಲೆ ಎಸ್ಪಿ ನಿಖಿಲ್ರಿಗೆ ಇದು ಮೊದಲ ಗಣೇಶ ಚತುರ್ಥಿಯ ಬಂದೋಬಸ್ತ್. ಹೀಗಾಗಿಲ್ಲಿ ಅವರೂ ಸಹ ಖುದ್ದು ವಿಶೇಷ ಗಮನ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಮಕ್ಕಳ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಸಾಗಿದ್ದು, ಇಡೀ ಶಿವಮೊಗ್ಗದ ಗಮನಸೆಳೆದಿತ್ತಷ್ಟೆ ಅಲ್ಲದೆ ಈದ್ ಮಿಲಾದ್ ಮೆರವಣಿಗೆ ಯ ಯಶಸ್ಸಿಗೂ ಪೂರಕವಾಗಿತ್ತು. ಇದೀಗ ಅವರೆದುರು ಗಣಪತಿ ಉತ್ಸವವಿದ್ದು, ವಿಘ್ನಗಳಿಲ್ಲದ ಶಾಂತಿಯುತ ಹಾಗೂ ಸಂಭ್ರಮದ ಗಣೇಶೋತ್ಸವಕ್ಕೆ ಸಾಕ್ಷಿಯಾಗುವ ವಿಶ್ವಾಸವಿದೆ.
