ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿಯ ಯಡೆಹಳ್ಳಿ ಗ್ರಾಮದಲ್ಲಿ ಅಡಿಕೆ ತೋಟವೊಂದರ ಬೇಲಿಗೆ ಡೈರಕ್ಟ್ ಆಗಿ ನೀಡಲಾಗಿದ್ದ, (Illegal Electric Fence) ಕರೆಂಟ್ನಿಂದ ಕರಡಿಯೊಂದು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಈ ಘಟನೆಯಲ್ಲಿ ಜಮೀನು ಮಾಲೀಕನ ವಿರುದ್ಧ ಕೇಸ್ ದಾಖಲಿಸಿರುವ ಅರಣ್ಯ ಇಲಾಖೆ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಯಡೆಹಳ್ಳಿ ಗ್ರಾಮದ ಸರ್ವೆ ನಂ.54ರಲ್ಲಿರುವ, ದೊಡ್ಡಸಿಗೆ ವಾಸಿ ಗೋವಿಂದಪ್ಪ ಎಂಬವರಿಗೆ ಸೇರಿದ ಅಡಿಕೆ ತೋಟದಲ್ಲಿ ಈ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಜಮೀನಿನ ಮಾಲೀಕ ಗೋವಿಂದಪ್ಪ, ತಮ್ಮ ತೋಟದ ಸುತ್ತಲೂ ತಂತಿ ಅಳವಡಿಸಿ ಅದಕ್ಕೆ ಡೈರಕ್ಟ್ ಆಗಿ ಕರೆಂಟ್ ಕೊಟ್ಟಿದ್ದರು. ಈ ವಿದ್ಯುತ್ ತಂತಿಗೆ ಸಿಲುಕಿ ಅಂದಾಜು 3 ವರ್ಷದ ಗಂಡು ಕರಡಿ ಮೃತಪಟ್ಟಿದೆ. ಘಟನೆ ಬೆನ್ನಲ್ಲೆ ಕರಡಿ ಕಳೆಬರವನ್ನ ತೋಟದ ಕಾಲುವೆಯಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ವೇಳೆ ಕರಡಿಯ ಕಳೆಬರ ಸಿಕ್ಕಿದೆ.ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 9, 39 ಜೊತೆಗೆ 2(16), 36, 50 ಮತ್ತು 51ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಭದ್ರಾವತಿಯ 3ನೇ ಹೆಚ್ಚುವರಿ ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಅವರ ನೇತೃತ್ವದಲ್ಲಿ ಹಾಗೂ ಚನ್ನಗಿರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ತೆಗ್ಗಿನಮನೆ ಅವರ ಮಾರ್ಗದರ್ಶನದಲ್ಲಿ ಶಾಂತಿಸಾಗರ ವಲಯ ಅರಣ್ಯಾಧಿಕಾರಿ ಲಕ್ಷ್ಮಣ್ ನಾಯ್ಕ್ ಟಿ. ಚೌಹಾಣ್ ಮತ್ತು ಸಿಬ್ಬಂದಿಯ ತಂಡ ಈ ಕಾರ್ಯಾಚರಣೆ ನಡೆಸಿತ್ತು. ಪ್ರಕರಣ ಪತ್ತೆ ಕಾರ್ಯದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಮನೋಹರ್ ವಿ.ಎಸ್., ಮನು ಎಂ., ಶಿವಕುಮಾರ್, ಗಸ್ತು ಅರಣ್ಯ ಪಾಲಕರಾದ ಶಿವನಗೌಡ ಬಿರಾದರ್, ರಂಗನಾಥ್, ಹನುಮಂತಪ್ಪ, ಮಹಮದ್ ಖಾಲಿದ್ ನಯಾಜ್, ಭೀಮಾಶಂಕರ ನಾವಿ, ಅನಿಲ್, ಬಸವರಾಜ, ಶಿವು, ಲಕ್ಷ್ಮಣ, ರಂಗಪ್ಪ ಸೇರಿದಂತೆ ಇತರ ಸಿಬ್ಬಂದಿ ಭಾಗಿಯಾಗಿದ್ದರು.

