ಮಲೆನಾಡು ಟುಡೆ ಸುದ್ದಿ / ಆನಂದಪುರಂ / ಯಡೇಹಳ್ಳಿ ಗ್ರಾಮದ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದ ರಥಬೀದಿ ನಿವಾಸಿ ಪ್ರದೀಶ್ ಎಂಬುವರ ಮನೆಯ ಬೀಗ ಮುರಿದು, ಸುಮಾರು ₹12 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ಕಳೆದ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಕಳ್ಳರು ಮನೆಯ ಕಿಟಕಿಯ ಮೂಲಕ ಮುಂದಿನ ಬಾಗಿಲಿನ ಚಿಲಕ ತೆಗೆದು ಮನೆಯೊಳಗೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಬಳಿಕ ಮನೆಯಲ್ಲಿದ್ದ ಗಾಡ್ರೆಜ್ ಬೀರು ತೆರೆದು ಅದರೊಳಗೆ ಇರಿಸಲಾಗಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಬೀರುವಿನಲ್ಲಿದ್ದ 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 32 ಗ್ರಾಂ ತೂಕದ ಐದು ಚಿನ್ನದ ಕಿವಿಯೋಲೆಗಳು, 3 ಗ್ರಾಂ ತೂಕದ ಒಂದು ಬ್ರಾಸ್ ಲೈಟ್, 30 ಗ್ರಾಂ ತೂಕದ ಒಂದು ಜತೆ ಬೆಳ್ಳಿ ಕಾಲು ಚೈನ್ ಹಾಗೂ 10 ಗ್ರಾಂ ತೂಕದ ಎರಡು ಜತೆ ಬೆಳ್ಳಿ ಕಾಲುಂಗುರಗಳನ್ನು ಕಳ್ಳರು ಕೊಂಡೊಯ್ದಿದ್ದಾರೆ.
ಒಟ್ಟಾರೆ 80 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 40 ಗ್ರಾಂ ಬೆಳ್ಳಿ ಆಭರಣಗಳು ಕಳವಾಗಿದ್ದು, ಅವುಗಳ ಮೌಲ್ಯ ಸುಮಾರು ₹12 ಲಕ್ಷ ಎಂದು ಅಂದಾಜಿಸಲಾಗಿದೆ.ಘಟನೆ ಸಂಬಂಧ ಆನಂದಪುರಂ ಪೊಲೀಸ್ ಠಾಣೆಯಲ್ಲಿ (Anandapuram Police station ) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
