ಮಲೆನಾಡು ಟುಡೆ ಸುದ್ದಿ / ಸಾಗರ / ಸ್ವಂತ ನಿವೇಶನದಲ್ಲಿ ನಿರ್ಮಿಸಿದ್ದ ಮನೆಯನ್ನು ಯಾವುದೇ ನೋಟಿಸ್ ನೀಡದೆ ತೆರವುಗೊಳಿಸಿದ ಪ್ರಕರಣದಲ್ಲಿ ಮನೆ ಮಾಲೀಕ ಕಲ್ಲುಮುಟ್ಟಿ ಮಂಜಪ್ಪ ಅವರಿಗೆ ₹1.43 ಲಕ್ಷ ಪರಿಹಾರವನ್ನು ಶೇ.18ರ ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಸಾಗರದ ಪ್ರಧಾನ ಸಿವಿಲ್ ನ್ಯಾಯಾಲಯ (Sagar Court Orders) ಆದೇಶಿಸಿದೆ.
ಸಾಗರ ವರದಿಗಾರರ ಪ್ರಕಾರ ಪ್ರಕರಣದ ವಿವರ ಹೀಗಿದೆ. ತ್ಯಾಗರ್ತಿ ಗ್ರಾಮದ ಮಂಜಪ್ಪ ಅವರು 2009ರಲ್ಲಿ 20X50 ಅಡಿ ವಿಸ್ತೀರ್ಣದ ನಿವೇಶನ ಖರೀದಿಸಿದ್ದರು. ಬಳಿಕ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಆ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. 2020ರ ಜನವರಿ 8ರಂದು ಅಂದಿನ ತಹಶೀಲ್ದಾರ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ರಾಜಸ್ವ ನಿರೀಕ್ಷಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ತೆರಳಿ, ನಿವೇಶನ ಸರ್ಕಾರಿ ಜಾಗದಲ್ಲಿದೆ ಎಂದು ಹೇಳಿ ಮನೆ ತೆರವುಗೊಳಿಸಿದ್ದರು.
ಮನೆ ತೆರವುಗೊಳಿಸುವುದಕ್ಕೂ ಮೊದಲು ಅಧಿಕಾರಿಗಳು ಯಾವುದೇ ನೋಟಿಸ್ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಜಪ್ಪ ಅವರು ನ್ಯಾಯಾಲಯದ ಮೊರೆ ಹೋಗಿ ಪರಿಹಾರ ಕೋರಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಎಂ.ವಿ. ಮಹೇಶ್ ಅವರು, ಕಟ್ಟಡ ನಿರ್ಮಾಣಕ್ಕೆ ತಗುಲಿದ ವೆಚ್ಚ, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳಿಗೆ ಉಂಟಾದ ನಷ್ಟ ಹಾಗೂ ಮಾನಸಿಕ ಹಿಂಸೆ ಸೇರಿದಂತೆ ಒಟ್ಟು ₹1.43 ಲಕ್ಷ ಪರಿಹಾರವನ್ನು ನೀಡುವಂತೆ ಆದೇಶಿಸಿದ್ದಾರೆ. ಈ ಪರಿಹಾರದ ಮೊತ್ತವನ್ನು ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಜಂಟಿಯಾಗಿ ಹಾಗೂ ವೈಯಕ್ತಿಕವಾಗಿ ಭರಿಸಬೇಕು. ಆದೇಶ ಹೊರಬಿದ್ದ ದಿನದಿಂದ 45 ದಿನಗಳೊಳಗೆ, 2020ರ ಜನವರಿ 8ರಿಂದ ಅನ್ವಯವಾಗುವಂತೆ ಶೇ.18ರ ವಾರ್ಷಿಕ ಬಡ್ಡಿಯೊಂದಿಗೆ ಸಂಪೂರ್ಣ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
