ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಅವರ ಹುಟ್ಟುಹಬ್ಬದ ದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಸಂದೇಶದೊಂದಿಗೆ ಶುಭಾಶಯ ತಲುಪಲಿದೆ. (CM DK Shivakumar on WhatsApp) ರಾಜ್ಯದ 98 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಈ ಕಾರ್ಯಕ್ರಮದ ವ್ಯಾಪ್ತಿಗೆ ತರಲಾಗಿದೆ. ವಿದ್ಯಾರ್ಥಿಗಳು ಶಾಲೆಗೆ ನೋಂದಣಿ ಮಾಡಿಸುವ ಸಂದರ್ಭದಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗೆ ಅವರ ಹುಟ್ಟುಹಬ್ಬದ ದಿನ ವಾಟ್ಸಾಪ್ ಮೂಲಕ ಮುಖ್ಯಮಂತ್ರಿ ಅವರ ಫೋಟೋ ಸಹಿತ ವಿಶೇಷ ಹುಟ್ಟುಹಬ್ಬದ ಶುಭಾಶಯ ಸಂದೇಶ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ಶಿಕ್ಷಣ ಇಲಾಖೆಯ ಮೂಲಕ ಈ ಶುಭಾಶಯ ಸಂದೇಶ ವಿದ್ಯಾರ್ಥಿಗಳಿಗೆ ತಲುಪಲಿದೆ. ಹೀಗಾಗಿ ವಿದ್ಯಾರ್ಥಿಯ ಜನ್ಮದಿನದಂದು ಶಾಲಾ ದಾಖಲಾತಿಯಲ್ಲಿರುವ ಮೊಬೈಲ್ ಸಂಖ್ಯೆಗೆ ನೇರವಾಗಿ ವಾಟ್ಸಾಪ್ ಗ್ರೀಟಿಂಗ್ಸ್ ಬರಲಿದೆ. ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (EDCS) ಮೂಲಕ ಶಿಕ್ಷಣ ಇಲಾಖೆ ಈ ವ್ಯವಸ್ಥೆಯನ್ನು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ನಡೆಸಿತ್ತು. ಆ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗಿದೆ.
ಈ ವ್ಯವಸ್ಥೆಯ ಮೂಲಕ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅವರವರ ಹುಟ್ಟುಹಬ್ಬದ ದಿನ ಮುಖ್ಯಮಂತ್ರಿ ಅವರ ಫೋಟೋ ಮತ್ತು ವಿಶೇಷ ಸಂದೇಶ ಒಳಗೊಂಡ ಜನ್ಮದಿನದ ಹಾರ್ದಿಕ ಶುಭಾಶಯಗಳು ಎಂಬ ಗ್ರೀಟಿಂಗ್ಸ್ ವಾಟ್ಸಾಪ್ ಮೂಲಕ ತಲುಪಲಿದೆ ಎಂದು ತಿಳಿದುಬಂದಿದೆ.
