ಇಂದು ಕರಡು ಮತದಾರರ ಪಟ್ಟಿ ಪ್ರಕಟ! ಮತಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಪರಿಶೀಲಿಸಿ! ವಿವರ ಹೀಗಿದೆ!

ಹಂಚಿಕೊಳ್ಳಿ
WhatsApp Facebook X Telegram
ಕರ್ನಾಟಕ ಎಸ್‌ಐಆರ್ ಬಳಿಕ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿಕೊಳ್ಳಿ ಚಿತ್ರ @ಎಐ ಚಿತ್ರ

ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೊದಲ ಹಂತ ಪೂರ್ಣಗೊಂಡಿದೆ. ಈ ನಿಟ್ಟಿನಲ್ಲಿ ಇಂದು ಕರಡು ಮತದಾರರ ಪಟ್ಟಿ (Karnataka Draft Voter List 2026) ಪ್ರಕಟವಾಗಲಿದೆ. ಎಸ್‌ಐಆರ್‌ಗೂ ಮುನ್ನ ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರಿದ್ದು, ಈ ಪೈಕಿ 4.46 ಕೋಟಿ ಮತದಾರರ ಹೆಸರು ಮಾತ್ರ ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗಲಿದೆ. ಉಳಿದ ಸುಮಾರು 1.08 ಕೋಟಿ ಮತದಾರರ ಹೆಸರು ಸದ್ಯದ ಕರಡು ಪಟ್ಟಿಯಲ್ಲಿ ಇರುವುದಿಲ್ಲ ಎಂದು ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನೂ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಮತದಾರರು ಪರಿಶೀಲಿಸಿಕೊಳ್ಳಬಹುದಾಗಿದೆ. ಮತದಾರರ ಪಟ್ಟಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯ ceo.karnataka.gov.in ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಕರಡು ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಅವಕಾಶವಿದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟವಾಗಲಿದೆ ಎಂದು ತಿಳಿಸಲಾಗಿದೆ.

ಹಾಗೊಂದು ವೇಳೆ ಕರಡು ಪಟ್ಟಿಯಿಂದ ಹೆಸರು ಹೊರಗುಳಿದಿದೆ ಎಂದ ಮಾತ್ರಕ್ಕೆ ಅಂತಿಮವಾಗಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿದೆ ಎಂದರ್ಥವಲ್ಲ. ಸಂಬಂಧಿಸಿದ ಮತದಾರರಿಗೆ ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಹೆಸರು ಸೇರ್ಪಡೆಗೆ ಅವಕಾಶ ಇರಲಿದೆ. ಎಸ್‌ಐಆರ್‌ನಲ್ಲಿ ASDDO ವರ್ಗಕ್ಕೆ ಸೇರಿಸಲಾದ ಮತದಾರರಿಗೆ ಹಕ್ಕು ಮತ್ತು ಆಕ್ಷೇಪಣೆ ಪ್ರಕ್ರಿಯೆಯಲ್ಲಿ ಮತ್ತೆ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆ ಎಂದು ಸಹ ವಿವರಿಸಲಾಗಿದೆ.

ಇದಷ್ಟೆ ಅಲ್ಲದೆ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗಲಿರುವ 4.46 ಕೋಟಿ ಮತದಾರರ ಪೈಕಿ ಮ್ಯಾಪಿಂಗ್ ಆಗದ 23.45 ಲಕ್ಷ ಮತದಾರರು ಹಾಗೂ ಮಾಹಿತಿಯಲ್ಲಿ ದೋಷ ಅಥವಾ ವ್ಯತ್ಯಾಸ ಕಂಡುಬಂದಿರುವ 20.35 ಲಕ್ಷ ಮತದಾರರು ಸೇರಿದಂತೆ ಒಟ್ಟು 43.80 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ಈ ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ವಿವರಗಳನ್ನು ದೃಢಪಡಿಸಬೇಕಾಗುತ್ತದೆ. ಆಗಸ್ಟ್ 31ರ ನಂತರ ನೋಟಿಸ್‌ಗಳನ್ನು ಸಂಬಂಧಿಸಿದ ಮತದಾರರಿಗೆ ನೀಡಲಾಗುತ್ತದೆ. ಕರಡು ಪಟ್ಟಿಯಲ್ಲಿ ಹೆಸರು ಇದ್ದರೂ ಮ್ಯಾಪಿಂಗ್ ಆಗದವರು ಅಥವಾ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದವರು ಪರಿಶೀಲನಾ ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ.

ಎಸ್‌ಐಆರ್ ಪ್ರಕ್ರಿಯೆಯ ವೇಳೆ ‘ಎಎಸ್‌ಡಿಡಿಒ’ ವರ್ಗಕ್ಕೆ ಸೇರಿಕೊಂಡವರ ಪೈಕಿ, ಗೈರುಹಾಜರಾಗಿರುವ ಅಥವಾ ಸ್ಥಳಾಂತರಗೊಂಡಿರುವ ಅರ್ಹ ಮತದಾರರು ನಿಗದಿತ ದಾಖಲೆಗಳೊಂದಿಗೆ ಹೊಸದಾಗಿ ಫಾರ್ಮ್ 6 ಸಲ್ಲಿಸಬೇಕಾಗುತ್ತದೆ. ಮತಗಟ್ಟೆ ಅಧಿಕಾರಿಗಳ ಪರಿಶೀಲನೆಯ ನಂತರ ಅರ್ಹತೆ ದೃಢಪಟ್ಟರೆ ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಲಿದೆ.

ಉಳಿದಂತೆ ಅಕ್ಟೋಬರ್ 1ಕ್ಕೆ 18 ವರ್ಷ ಪೂರ್ಣಗೊಳಿಸುವ ಯುವ ಮತದಾರರು ಸಹ ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 6 ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಅರ್ಜಿಗಳನ್ನು ಮತಗಟ್ಟೆ ಅಧಿಕಾರಿಗಳು ಪರಿಶೀಲಿಸಲಿದ್ದು, ಅರ್ಹತೆ ದೃಢಪಟ್ಟ ನಂತರ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗಲಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor