ಹೊಸದಾಗಿ ಹುಟ್ತು ದಿಮಾಗಿ ನಕ್ಸಲ್​ ಜನತಾ ಪಾರ್ಟಿ,  3 ದಿನದಲ್ಲಿ 5.7 ಲಕ್ಷ ಫಾಲೋವರ್ಸ್​​​, ಏನಿದರ ಅಜೇಂಡ, ಪಾರ್ಟಿ ಹೊಟ್ಟೋಕೆ ಕಾರಣವೇನು ?

ಹಂಚಿಕೊಳ್ಳಿ
WhatsApp Facebook X Telegram
Dimagi Naxal Party Hits 5.7L Followers
Dimagi Naxal Party Hits 5.7L Followers

ಮಲೆನಾಡು ಟುಡೆ ನ್ಯೂಸ್​ ಶಿವಮೊಗ್ಗ : ಇತ್ತೀಚೆಗೆ CJP ಕಾಕ್ರೋಚ್​ ಜನತಾ ಪಾರ್ಟಿ ಎಂಬ ಹೆಸರು ಜೆನ್-ಜಿ ಯುವಕರ ಸೇರಿದಂತೆ ಎಲ್ಲಾ ವರ್ಗದ ಜನರ ಬಾಯಲ್ಲೂ ಗುನುಗುಡುತ್ತಿತ್ತು. ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯೊಬ್ಬರು​​ ಉಪಯೋಗಿಸಿದ ಒಂದು ಪದವನ್ನು ಹಿಡಿದುಕೊಂಡು ವಿಡಂಬನಾತ್ಮಕವಾಗಿ ಸೃಷ್ಟಿಸಿದ ಈ ಪಕ್ಷ, ನೀಟ್​ ಪರೀಕ್ಷೆಯ ವಿರುದ್ಧ ಹೋರಾಟ ಮಾಡಿ ಕೇಂದ್ರ ಶಿಕ್ಷಣ ಮಂತ್ರಿಯನ್ನೇ ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ಈ ವಿಚಾರವನ್ನು ನೆನಪಿಸಿಕೊಳ್ಳಲು ಕಾರಣ ಏನಿರಬಹುದು ಎಂದು ನೀವು ಯೋಚಿಸುತ್ತಿದ್ದರೆ, ಖಂಡಿತ ಅದಕ್ಕೊಂದು ಕಾರಣವಿದೆ. ಅದೇನೆಂದರೆ, ಅದೇ ಹಾದಿಯಲ್ಲಿ ಇದೀಗ ಹೊಸದಾಗಿ ದಿಮಾಗಿ ನಕ್ಸಲ್​ ಜನತಾ ಪಾರ್ಟಿ ಜಾರಿಗೆ ಬಂದಿದೆ.

ಏನಿದು ದಿಮಾಗಿ ನಕ್ಸಲ್​ ಜನತಾ ಪಾರ್ಟಿ? ಈ ಪಾರ್ಟಿ ಹುಟ್ಟಲು ಕಾರಣವೇನು?

ಆಗಸ್ಟ್​ 15ರಂದು ದೇಶದ ಎಲ್ಲಾ ಭಾರತೀಯರನ್ನು ಉದ್ದೇಶಿಸಿ ಕೆಂಪು ಕೋಟೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಬಳಸಿದ ಒಂದು ಪದ ದಿಮಾಗಿ ನಕ್ಸಲ್​​ ಪಾರ್ಟಿಯ ಉದಯಕ್ಕೆ ಕಾರಣವಾಯಿತು. ಹೌದು, ನರೇಂದ್ರ ಮೋದಿಯವರು ಭಾಷಣ ಮಾಡುತ್ತಾ, ನಾವೀಗ ಹೊರಗಿನ ನಕ್ಸಲ್​​​ಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ. ಆದರೆ ತಲೆಯಲ್ಲಿ ನಕ್ಸಲ್​​ ಮನಸ್ಥಿತಿ ಹೊಂದಿರುವವರು, ಅಂದರೆ ದಿಮಾಗಿ ನಕ್ಸಲರು ನಮ್ಮ ದೇಶದಲ್ಲಿದ್ದಾರೆ. ಅವರನ್ನು ಮೂಲೆಗುಂಪು ಮಾಡಬೇಕಿದೆ,” ಎಂಬ ಪದವನ್ನು ಉಪಯೋಗಿಸಿದ್ದರು. ಇದರ ನಡುವೆ ಕಾಂಗ್ರೆಸ್​​ನ ಮುಖಂಡರೊಬ್ಬರು ಸಹ ಅದನ್ನು ಸಮರ್ಥಿಸಿಕೊಂಡು ನಾವು ದಿಮಾಗಿ ನಕ್ಸಲರು ಎಂಬ ಹೇಳಿಕೆಯನ್ನು ನೀಡಿದ್ದರು. ಇದಾದ ಬಳಿಕವೇ ಸೋಶಿಯಲ್​ ಮೀಡಿಯಾದಲ್ಲಿ, ಅಂದರೆ ಇನ್ಸ್ಟಾಗ್ರಾಮ್​​​​ನಲ್ಲಿ ದಿಮಾಗಿ ನಕ್ಸಲ್​​ ಜನತಾ ಪಾರ್ಟಿಯ ಉದಯವಾಯಿತು.

ಇನ್ಸ್ಟಾಗ್ರಾಮ್​​​ನಲ್ಲಿ 5.74 ಲಕ್ಷ ಫಾಲೋವರ್ಸ್​; ಏನಿದರ ಅಜೆಂಡಾ?

ದಿಮಾಗಿ ನಕ್ಸಲ್​ ಜನತಾ ಪಾರ್ಟಿ ಆರಂಭವಾಗಿ 4 ದಿನ ಆಗಿರಬಹುದು, ಪ್ರಸ್ತುತ ಇದರ ಫಾಲೋವರ್ಸ್​ ಸಂಖ್ಯೆ 5.74 ಲಕ್ಷಕ್ಕಿಂತ ಹೆಚ್ಚಾಗಿದೆ. ಮೆದುಳು ಕಾಣಿಸುವ ವ್ಯಕ್ತಿಯೊಬ್ಬ ಗ್ಲಾಸ್​​ ಹಾಕಿಕೊಂಡು ತ್ರಿವರ್ಣ ಧ್ವಜದ ಬಣ್ಣವಿರುವ ಮಾಸ್ಕ್​​​ ಧರಿಸಿರುವ ರೀತಿಯಲ್ಲಿದ್ದ ಡಿಪಿಯನ್ನು ಹಾಕಿಕೊಳ್ಳಲಾಗಿದೆ. ಇನ್ನು ಇದರ ಬಯೋ ನೋಡಿದರೆ, ಫೌಂಡರ್​ ಹೆಸರನ್ನು ದಿಮಾಗಿ ನಕ್ಸಲ್​ ಎಂದು, ಕೋ-ಫೌಂಡರ್​​ 56 ಇಂಚ್​​ ಕಾ ಎಂಬಂತೆ ವ್ಯಂಗ್ಯಾತ್ಮಕವಾಗಿ ಬರೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, 10 ಲಕ್ಷ ಫಾಲೋವರ್ಸ್​ ಆದ ನಂತರ ಫೌಂಡರ್​ ಹೆಸರನ್ನು ರಿವೀಲ್​ ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಯೋಚಿಸಿ, ಸಂಶೋಧಿಸಿ, ಪ್ರತಿಭಟಿಸಿ ಎಂಬ ಟ್ಯಾಗ್​​ಲೈನ್​​ ಅನ್ನು ಸಹ ನೀಡಲಾಗಿದೆ.

ಇನ್ನು ದಿಮಾಗಿ ನಕ್ಸಲ್​ ಪಾರ್ಟಿಯ ಮೂಲ ಉದ್ದೇಶದ ಕುರಿತಾಗಿ, ಅದರ ಫೌಂಡರ್ ಭಗತ್​ ಸಿಂಗ್​ ಫೋಟೋವನ್ನು ಬಳಸಿ ತಮ್ಮ ಪಕ್ಷದ ಉದ್ದೇಶವೇನು ಎಂಬುದನ್ನು ತಿಳಿಸಿದ್ದಾರೆ. ನಮ್ಮ ಪಕ್ಷದ ಕೆಲಸ ಭಗತ್ ಸಿಂಗ್ ಅವರ ವಿಚಾರಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ಯುವಜನತೆಯಲ್ಲಿ ಸ್ವತಂತ್ರ ಆಲೋಚನೆಯನ್ನು ಬೆಳೆಸುವುದಾಗಿದೆ. ಭಗತ್ ಸಿಂಗ್ ಅವರು ಹೇಗೆ ಯಾರನ್ನೂ ಕುರುಡಾಗಿ ಹಿಂಬಾಲಿಸದೆ, ಸತ್ಯ ಮತ್ತು ನ್ಯಾಯಕ್ಕಾಗಿ ಪ್ರಶ್ನೆ ಮಾಡುತ್ತಿದ್ದರೊ, ಅದೇ ರೀತಿ ಪ್ರತಿಯೊಬ್ಬ ಭಾರತೀಯನೂ ಪ್ರಚಲಿತ ವಿಷಯಗಳನ್ನು ಪ್ರಶ್ನಿಸಬೇಕು ಮತ್ತು ವಿಮರ್ಶಾತ್ಮಕವಾಗಿ ಯೋಚಿಸಬೇಕು, ಎಂದು ಇದು ಹೇಳುತ್ತದೆ. ಇದು ದೇಶದ ವಿರುದ್ಧವಾದ ಸಿದ್ಧಾಂತವಲ್ಲ; ಬದಲಿಗೆ ದೇಶದ ಒಳಿತಿಗಾಗಿ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ.

ಇದರ ಮುಖ್ಯ ಅಜೆಂಡಾ ಏನೆಂದರೆ ದೇಶದಲ್ಲಿ ಸತ್ಯಾಂಶಗಳಿಗೆ, ತಾರ್ಕಿಕ ಆಲೋಚನೆಗೆ, ಒಗ್ಗಟ್ಟಿಗೆ ಮತ್ತು ಸಂವಿಧಾನಕ್ಕೆ ಆದ್ಯತೆ ಸಿಗಬೇಕು. ಹಾಗೆಯೇ ರಾಜಕೀಯ ಲಾಭಕ್ಕಾಗಿ ಹರಡುವ ಅಪಪ್ರಚಾರ, ದ್ವೇಷ, ಸುಳ್ಳು ಸುದ್ದಿಗಳು, ಕುರುಡು ಅನುಸರಣೆ ಹಾಗೂ ಜನರನ್ನು ವಿಭಜಿಸುವ ತಂತ್ರಗಳನ್ನು ಸಂಪೂರ್ಣವಾಗಿ ವಿರೋಧಿಸಬೇಕು. ಪ್ರತಿಯೊಬ್ಬ ಪ್ರಜೆಯೂ ಭಯವಿಲ್ಲದೆ ಸ್ವತಂತ್ರವಾಗಿ ಯೋಚಿಸಿ, ಪ್ರಶ್ನಿಸುತ್ತಾ ಸಂವಿಧಾನದ ಹಾದಿಯಲ್ಲಿ ನಡೆಯುವಂತಹ ವಾತಾವರಣ ನಿರ್ಮಾಣವಾಗಬೇಕು ಎಂಬುದೇ ಈ ಪೋಸ್ಟರ್‌ನಲ್ಲಿರುವ ಸಂಪೂರ್ಣ ಸಂದೇಶವಾಗಿದೆ.

ಸೋಷಿಯಲ್ ಮೀಡಿಯಾ ಯುಗದಲ್ಲಿ ಯುವಜನತೆ ಕೇವಲ ರಾಜಕೀಯ ಹೇಳಿಕೆಗಳನ್ನು ಕೇಳಿ ಸುಮ್ಮನಾಗದೆ, ವಿಡಂಬನೆ ಹಾಗೂ ಡಿಜಿಟಲ್ ಪ್ರತಿಭಟನೆಗಳ ಮೂಲಕ ತಮ್ಮ ಧ್ವನಿಯನ್ನು ಎತ್ತುತ್ತಿದ್ದಾರೆ ಎಂಬುದಕ್ಕೆ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಈಗಿನ ದಿಮಾಗಿ ನಕ್ಸಲ್ ಜನತಾ ಪಾರ್ಟಿಗಳೇ ಸಾಕ್ಷಿ. ರಾಜಕಾರಣಿಗಳು ಬಳಸುವ ಪ್ರತಿಯೊಂದು ವಾಗ್ದಾಳಿಯನ್ನೂ ತಮ್ಮದೇ ಶೈಲಿಯಲ್ಲಿ ಅಸ್ತ್ರವನ್ನಾಗಿಸಿಕೊಂಡು, ಪ್ರಚಲಿತ ವಿದ್ಯಮಾನಗಳನ್ನು ಪ್ರಶ್ನಿಸುವ ಮತ್ತು ತಾರ್ಕಿಕವಾಗಿ ಆಲೋಚಿಸುವ ಜಾಗೃತಿಯನ್ನು ಯುವಮನಸ್ಸುಗಳಲ್ಲಿ ಮೂಡಿಸುತ್ತಿವೆ. ಈ ಕುರಿತಾಗಿ ಇದೀಗ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. 

ವರದಿ : ಪ್ರತಾಪ್​ ತೀರ್ಥಹಳ್ಳಿ

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor