Shrawana Somwara / ಮಲೆನಾಡು ಟುಡೆ ಸುದ್ದಿ / ಶಿವನ ಆರಾಧನೆಗೆ ಶ್ರಾವಣ ಮಾಸ ಅತ್ಯಂತ ಶ್ರೇಷ್ಠ. ಶ್ರಾವಣದ ಪ್ರತಿ ದಿನವೂ ಮಹಾದೇವನ ಪೂಜೆ ನಡೆಯುತ್ತದೆಯಾದರೂ, ಈ ಮಾಸದಲ್ಲಿ ಬರುವ ಸೋಮವಾರಗಳಿಗೆ ವಿಶೇಷವಾದ ಮಹತ್ವವಿದೆ. ಶ್ರಾವಣ ಸೋಮವಾರದಂದು ಶಿವನನ್ನು ಪೂಜಿಸಿ, ವ್ರತ ಆಚರಿಸಿ, ಜಲಾಭಿಷೇಕ ಮಾಡುವುದರಿಂದ ಶಿವನು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆಯಿದೆ.
ಶ್ರಾವಣದ ಸೋಮವಾರವೇಕೆ ಅಷ್ಟು ವಿಶೇಷ ಮತ್ತು ಈ ದಿನ ಯಾವ ಕ್ರಮ ಅನುಸರಿಸುವುದರಿಂದ ದೈವಿಕೃಪೆಯನ್ನು ಪಡೆಯುಬಹುದು ಎಂಬುದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಸ್ತೃತವಾಗಿ ಮಾಹಿತಿ ನೀಡಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೋಮವಾರ ಚಂದ್ರ ದೇವನಿಗೆ ಮೀಸಲಾದ ದಿನ. ಸ್ವತಃ ಶಿವನೇ ಚಂದ್ರನನ್ನು ಧಾರಣೆ ಮಾಡಿದ್ದಾನೆ. ಹಾಗಾಗಿ ಸೋಮವಾರವನ್ನು ಶಿವನ ಪೂಜೆಗೆ ಅತ್ಯಂತ ಪ್ರಶಸ್ತ್ಯ ಎನ್ನಲಾಗುತ್ತೆ. ಆ ದಿನದಂದು ಶಿವನಿಗೆ ಭಕ್ತಿಯಿಂದ ಜಲಾಭಿಷೇಕ ಮತ್ತು ದುಗ್ಧಾಭಿಷೇಕ ನೆರವೇರಿಸಿ ಉಪವಾಸ ಆಚರಿಸುವುದರಿಂದ, ಶಿವನ ಜೊತೆಗೆ ಚಂದ್ರ ದೇವನ ಸಂಪೂರ್ಣ ಆಶೀರ್ವಾದ ಲಭಿಸುತ್ತದೆ ಎಂಬುದು ಭಾವನೆ. ಚಂದ್ರ ಮನಸ್ಸಿಗೆ ಸಂಬಂಧಿಸಿದಾತ. ಈ ಕಾರಣಕ್ಕೆ ಸೋಮವಾರ ಕೈಗೊಳ್ಳುವ ಪೂಜಾ ಕೈಂಕರ್ಯ ಮಾನಸಿಕ ಶಾಂತಿ, ಏಕಾಗ್ರತೆ ಹಾಗೂ ದೇಹ ಮತ್ತು ಮನಸ್ಸಿನಲ್ಲಿ ಸಕಾರಾತ್ಮಕ ಶಕ್ತಿ ಸಂಚಾರವನ್ನ ಹೆಚ್ಚಿಸುತ್ತವೆ ಎನ್ನುತ್ತಾರೆ ಜ್ಯೋತಿಷ್ಯರು.
ಇನ್ನೂ ಶಿವನನ್ನು ಮೆಚ್ಚಿಸಲು ಇರುವ ಅತ್ಯಂತ ಸರಳ ಮಾರ್ಗವೆಂದರೆ ಅದು ಶ್ರಾವಣ ಸೋಮವಾರ ವ್ರತಾಚರಣೆ. ಬಹುತೇಕರು ಈ ದಿನ ಅತ್ಯಂತ ಶ್ರದ್ಧಾಭಕ್ತಿಯಿಂದ ಉಪವಾಸವಿದ್ದು ಮನೋಕಾಮನೆಗಳನ್ನ ಈಡೇರಿಸಿಕೊಳ್ಳುತ್ತಾರೆ. ಸ್ತ್ರೀ ಮತ್ತು ಪುರುಷರಿಬ್ಬರೂ ಈ ವ್ರತವನ್ನು ಆಚರಿಸುತ್ತಾರೆ.
ಇದರ ಜೊತೆಗೆ, ಶಾಸ್ತ್ರಗಳಲ್ಲಿ ಮಣ್ಣಿನಿಂದ ನಿರ್ಮಿಸಿದ ಶಿವಲಿಂಗದ ಪೂಜೆಗೆ ವಿಶೇಷ ಮಹತ್ವ ನೀಡಲಾಗಿದೆ. ಶುದ್ಧ ಮಣ್ಣಿನಿಂದ ಶಿವಲಿಂಗ ತಯಾರಿಸಿ, ವಿಧಿ-ವಿಧಾನಗಳೊಂದಿಗೆ ಪೂಜೆ ಮತ್ತು ಅಭಿಷೇಕ ಮಾಡುವುದರಿಂದ ಪರಮಶಿವ ಒಲಿಯುತ್ತಾನೆ ಎಂದು ನಂಬಲಾಗಿದೆ. ಗಂಗಾಜಲದಿಂದ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡುವುದು ಅತ್ಯಂತ ಶುಭದಾಯಕ ಫಲಿತಾಂಶಗಳನ್ನು ತಂದುಕೊಡುತ್ತದೆ ಅಂತಾ ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ.
