ಜಂಬೋ ಅನ್ನೋ ಹೆಸರು ಹೇಗೆ ಬಂತು..? 36 ವರ್ಷಗಳ ಹಿಂದೆ ಅನಿಲ್ ಕುಂಬ್ಳೆ ಹೇಗಿದ್ದರು..! ಸನತ್​ ರೈ ಆರ್ಟಿಕಲ್!

ಹಂಚಿಕೊಳ್ಳಿ
WhatsApp Facebook X Telegram
Anil Kumble Cricket Journey 10 Wickets and Jumbo Nickname
Anil Kumble Cricket Journey 10 Wickets and Jumbo Nickname

Anil Kumble Cricket Journey / ಜಂಬೋ ಅಂದ್ರೆ ಬರೀ ಅಡ್ಡ ಹೆಸರಲ್ಲ. ಅದು ಹೋರಾಟದ ಇನ್ನೊಂದು ಹೆಸರು..! ಅಷ್ಟಕ್ಕೂ ಅನಿಲ್ ಕುಂಬ್ಳೆಗೆ ಜಂಬೋ ಅಂತ ಹೆಸರಿಟ್ಟಿದ್ದು ಯಾರು..? ಜಂಬೋ ಅನ್ನೋ ಹೆಸರು ಹೇಗೆ ಬಂತು..? 36 ವರ್ಷಗಳ ಹಿಂದೆ ಅನಿಲ್ ಕುಂಬ್ಳೆ ಹೇಗಿದ್ದರು..!
ಅದು…1992ರ ಸೆಪ್ಟಂಬರ್ 27ರಿಂದ 30ರವರೆಗೆ ನಡೆದಿದ್ದ ಇರಾನಿ ಟ್ರೋಫಿ ಮ್ಯಾಚ್. ರೆಸ್ಟ್ ಆಫ್ ಇಂಡಿಯಾ ಮತ್ತು ದೆಹಲಿ ತಂಡಗಳ ನಡುವಿನ ಪಂದ್ಯ. ದೆಹಲಿಯ ಆಗಿನ ಫಿರೋಜ್ ಶಾ ಕೋಟ್ಲಾ ಅಂಗಣ. (ಈಗ ಅರುಣ್ ಜೇಟ್ಲಿ ಮೈದಾನ).ರೆಸ್ಟ್ ಆಫ್ ಇಂಡಿಯಾ ಪರ ಕನ್ನಡಕ ಧರಿಸಿದ್ದ ನೀಳಕಾಯದ ಬೌಲರ್, ಲೆಗ್ ಸ್ಪಿನ್ ಬೌಲಿಂಗ್ ಮಾಡುತ್ತಿದ್ದರು. ಹಾಗೇ ಅವರ ಒಂದು ಎಸೆತ ಊಹೆಗೂ ನಿಲುಕದ ರೀತಿಯಲ್ಲಿ ಎತ್ತರಕ್ಕೆ ಚಿಮ್ಮಿತ್ತು. ಆಗ ಮಿಡ್ ಆನ್‍ನಲ್ಲಿದ್ದ ಫೀಲ್ಡರ್…ವಾಹ್ಹ್.. ಜಂಬೋ ಜೆಟ್… ಅಂತ ಉದ್ಗರಿಸಿದ್ದರು.
ಅಷ್ಟೇ ಅಲ್ಲ, ಆ ಪಂದ್ಯದಲ್ಲಿ ಕೀರ್ತಿ ಅಜಾದ್ ವಿಕೆಟ್ ಪಡೆದಾಗ ಮೀಡ್ ಆನ್‍ನಲ್ಲಿದ್ದ ಆಟಗಾರ ಓಡೋಡಿ ಬಂದು ಕನ್ನಡಕ ಧರಿಸಿದ್ದ ಯುವ ಸ್ಪಿನ್ ಬೌಲರ್‍ಗೆ…
ವೆಲ್ ಡನ್ ಜಂಬೋ ಜೆಟ್..ಎಂದು ಹೇಳಿ ಬೆನ್ನುತಟ್ಟಿದ್ದರು. ಅಂದು ಕನ್ನಡಕ ಧರಿಸಿದ್ದ ಲೆಗ್ ಸ್ಪಿನ್ನರ್ ಮುಂದೆ ಜಂಬೋ ಜೆಟ್ ಬದಲಾಗಿ ಜಂಬೋ ಅಂತನೇ ವಿಶ್ವ ಕ್ರಿಕೆಟ್‍ಗೆ ಚಿರಪರಿಚಿತರಾದ್ರು.ಅಂದ ಹಾಗೇ, ಆ ಬೌಲರ್‍ಗೆ ಅಡ್ಡ ಹೆಸರಿಟ್ಟಿದ್ದು ನವಜೋತ್ ಸಿಂಗ್ ಸಿಧು…! ಆ ಕನ್ನಡಕ ಧರಿಸಿದ್ದ ಬೌಲರ್ ಹೆಸರು…ನಮ್ಮ ಹೆಮ್ಮೆಯ ಕರುನಾಡಿನ ಸ್ಪಿನ್ ಮಾಂತ್ರಿಕ..!ಅನಿಲ್ ಕುಂಬ್ಳೆ…
ಆಗಸ್ಟ್ 9, 1990, ಸರಿಯಾಗಿ 36 ವರ್ಷಗಳ ಹಿಂದೆ ಅನಿಲ್ ಕುಂಬ್ಳೆ ಚೊಚ್ಚಲ ಟೆಸ್ಟ್ ಕ್ಯಾಪ್ ಧರಿಸಿದ್ದರು. ಬಳಿಕ ಸಹ ಆಟಗಾರರು ಪ್ರೀತಿಯಿಂದ ಜಂಬೋ ಅಂತ ಕರೆಯುತ್ತಿದ್ದರು. ಸುಮಾರು 18 ವರ್ಷಗಳ ಕಾಲ ಅನಿಲ್ ಕುಂಬ್ಳೆ, ಟೀಮ್ ಇಂಡಿಯಾದ ಸರ್ಪಾಸ್ತ್ರವಾಗಿದ್ದರು. ಸರ್ಪದಂತೆ ನುಗ್ಗುವ ವೇಗ, ಭುಸುಗುಡುವಂತಹ ಬೌನ್ಸ್ ಎಸೆತಗಳಿಂದ ಎದುರಾಳಿ ಬ್ಯಾಟರ್‍ಗಳನ್ನು ತಬ್ಬಿಬ್ಬುಗೊಳಿಸುತ್ತಿದ್ದರು.ಮೂಲತಃ ಅನಿಲ್ ಕುಂಬ್ಳೆ ಲೆಗ್ ಸ್ಪಿನ್ ಬೌಲರ್. ಆದ್ರೆ ಸ್ಪಿನ್‍ಗಿಂತ ಹೆಚ್ಚಾಗಿ ಅವರ ಬೌಲಿಂಗ್‍ನಲ್ಲಿ ವೇಗ, ನಿಖರತೆ, ಬೌನ್ಸ್, ಸಾಮಥ್ರ್ಯ ಮತ್ತು ಯುಕ್ತಿಗಳೇ ಅವರ ಬೌಲಿಂಗ್‍ನ ಪಂಚಸೂತ್ರಗಳಾಗಿದ್ದವು.
ಮಾತು ಬೆಳ್ಳಿ.. ಮೌನ ಬಂಗಾರ ಅನ್ನೋ ಮಾತಿನಂತೆ, ಅನಿಲ್ ಮೈದಾನದಲ್ಲಿ ಹೆಚ್ಚು ಮಾತನಾಡುತ್ತಿರಲಿಲ್ಲ. ಆದ್ರೆ ಅವರ ಎಸೆತಗಳೇ ಸದ್ದು ಮಾಡುತ್ತಿದ್ದವು. ಹಾಗೇ ಮೌನವಾಗಿದ್ದುಕೊಂಡೇ ತನ್ನ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಸಮಯೋಚಿತವಾಗಿ ವಿಕೆಟ್ ಉರುಳಿಸುತ್ತಿದ್ದರು. ಒತ್ತಡದ ಸಂದರ್ಭದಲ್ಲಿ ನಾಯಕನ ನಂಬಿಕೆಯ ಬೌಲರ್ ಆಗಿ ನಿಲ್ಲುತ್ತಿದ್ದರು. ಕುಂಬ್ಳೆ ಬರೀ ತಂಡದ ವಿಕೆಟ್ ಟೇಕರ್ ಬೌಲರ್ ಆಗಿರಲಿಲ್ಲ. ಅವರು ಟೀಮ್ ಇಂಡಿಯಾದ ಗೋಲ್ಡನ್ ಹ್ಯಾಂಡ್ ಆಗಿದ್ದರು.

ಕುಂಬ್ಳೆ ಅಂದ್ರೆ ಹೋರಾಟ. ಹೋರಾಟ ಅಂದ್ರೆ ಕುಂಬ್ಳೆ.

ಹೋರಾಟದ ಮನೋಭಾವನೆಯೇ ಅವರ ವೃತ್ತಿ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಕೇವಲ ಎದುರಾಳಿ ತಂಡದ ವಿರುದ್ಧ ಮಾತ್ರ ಅವರು ಹೋರಾಡುತ್ತಿರಲಿಲ್ಲ. ತನ್ನ ವಿರುದ್ಧವೇ ಹಠಮಾರಿಯಂತೆ ಹೋರಾಟ ನಡೆಸುತ್ತಿದ್ದರು. ದವಡೆಗೆ ಪೆಟ್ಟು ಬಿದ್ದು ಮುಖಕ್ಕೆ ಬ್ಯಾಂಡೆಜ್ ಕಟ್ಟಿಕೊಂಡಾಗಲೂ ಅವರು ಹಿಂದೆ ಸರಿಯಲಿಲ್ಲ. ಕಿರು ಬೆರಳಿಗೆ 11 ಹೊಲಿಗೆಗಳನ್ನು ಹಾಕೊಂಡು ಬೌಲಿಂಗ್ ಮಾಡಿದ್ದಾಗಲೂ ಅವರು ನೋವಿಗೆ ಶರಣಾಗಲಿಲ್ಲ. ಆಗ ಅವರು ಸಮರ ಸಾರಿದ್ದು ಬರೀ ಎದುರಾಳಿ ಬ್ಯಾಟರ್‍ಗಳ ವಿರುದ್ಧ ಮಾತ್ರವಲ್ಲ. ಜೊತೆಗೆ ತನ್ನ ಗಾಯದ ವಿರುದ್ಧ, ತನ್ನ ನೋವಿನ ವಿರುದ್ಧ, ಘಾಸಿಗೊಂಡ ತನ್ನ ಮನಸ್ಸು ಮತ್ತು ದೇಹದ ವಿರುದ್ಧವೇ ಸಂಘರ್ಷ ನಡೆಸಿದ್ದರು.

10ಕ್ಕೆ 10 ವಿಕೆಟ್.. ಐತಿಹಾಸಿಕ ಸಾಧನೆಯನ್ನು ಮರೆಯುವುದುಂಟಾ..?

1999 ಫೆಬ್ರವರಿ 7… ಮತ್ತೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ. ಪಾಕಿಸ್ತಾನದ ವಿರುದ್ಧ ಎರಡನೇ ಇನಿಂಗ್ಸ್ ನಲ್ಲಿ 74 ರನ್ ನೀಡಿ 10 ವಿಕೆಟ್‍ಗಳನ್ನು ಉರುಳಿಸಿದ್ದರು. ಈ ಹತ್ತು ವಿಕೆಟ್ ಪಡೆಯುವಲ್ಲಿ ತನ್ನ ಒಡನಾಡಿ ಜಾವಗಲ್ ಶ್ರೀನಾಥ್ ಸೇರಿದಂತೆ ಉಳಿದ ಬೌಲರ್‍ಗಳು ಸಹಾಯ ಮಾಡಿದ್ದರು. ಆದ್ರೆ ವಿಕೆಟ್ ಪಡೆಯುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದ್ರೆ ಕುಂಬ್ಳೆ ಮಾಡಿ ತೋರಿಸಿದ್ದರು. ಟೆಸ್ಟ್ ಕ್ರಿಕೆಟ್‍ನ ಇನಿಂಗ್ಸ್‍ನಲ್ಲಿ 10 ವಿಕೆಟ್ ಪಡೆದ ವಿಶ್ವದ ಎರಡನೇ ಬೌಲರ್ ಆಗಿ ಹೊರಹೊಮ್ಮಿದ್ದರು. ಇಂಗ್ಲೆಂಡ್‍ನ ಜಿಮ್ ಲೇಕರ್ ಸಾಲಿಗೂ ಸೇರಿಕೊಂಡಿದ್ದರು.

ಮೈದಾನದಲ್ಲಿ ನಡೆಯುತ್ತಿದ್ದ ಆ ಮ್ಯಾಜಿಕ್‍ನ ಸೂತ್ರಧಾರಿ ಯಾರು..?

ಏತನ್ಮಧ್ಯೆ ಅಂದು ಅಂಗಣದಲ್ಲಿ ಕುಂಬ್ಳೆ ಬೌಲಿಂಗ್ ಮಾಡುವ ಮೊದಲು ಒಂದು ಮ್ಯಾಜಿಕ್ ಕೂಡ ನಡೆಯುತ್ತಿತ್ತು. ಆದ್ರೆ ಅದು ಪ್ರತಿ ಬಾರಿ ಬೌಲಿಂಗ್ ಮಾಡುವಾಗ ನಡೆಯುತ್ತಿರಲಿಲ್ಲ. ಅವರಿಗೆ ಮನಸ್ಸು ಬಂದಾಗ ಮಾತ್ರ ಅವರು ಕುಂಬ್ಳೆ ಬಳಿ ಹೋಗುತ್ತಿದ್ದರು. ಕುಂಬ್ಳೆಯವರ ಕ್ಯಾಪ್ ಮತ್ತು ಸ್ವೆಟರ್ ಅನ್ನು ತೆಗೆದುಕೊಂಡು ಅಂಪೈರ್‍ಗೆ ನೀಡುತ್ತಿದ್ದರು. ಅದೇ ಓವರ್‍ನಲ್ಲಿ ಕುಂಬ್ಳೆಯವರು ವಿಕೆಟ್ ಸಹ ಪಡೆಯುತ್ತಿದ್ದರು. ಅಷ್ಟಕ್ಕೂ ಈ ಮ್ಯಾಜಿಕ್‍ನ ಸೂತ್ರಧಾರ ಸಚಿನ್ ತೆಂಡುಲ್ಕರ್.

36 ವರ್ಷಗಳ ಹಿಂದೆ…!

ಭಾರತದ ಪರ ಅನಿಲ್ ಕುಂಬ್ಳೆಯವರು 192ನೇ ಟೆಸ್ಟ್ ಆಟಗಾರನಾಗಿ ಕಣಕ್ಕಿಳಿದಿದ್ದರು. ಮ್ಯಾಂಚೆಸ್ಟರ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಅಲನ್ ಲ್ಯಾಂಬ್ ವಿಕೆಟ್ ಉರುಳಿಸಿ, ತನ್ನ ವಿಕೆಟ್ ಬೇಟೆಗೆ ಮುನ್ನುಡಿ ಬರೆದಿದ್ರು. ಬಳಿಕ ಅನಿಲ್ ಹಿಂತಿರುಗಿ ನೋಡಲೇ ಇಲ್ಲ. ನೋಡ ನೋಡುತ್ತಲೇ ಸಾರ್ವಕಾಲಿಕ ಬೌಲರ್ ಆಗಿ ಹೊರಹೊಮ್ಮಿದ್ದು ಈಗ ಇತಿಹಾಸ. ಅಚ್ಚರಿ ಅಂದ್ರೆ ಯಾವ ಅಂಗಣದಲ್ಲಿ ಜಂಬೋ ಎಂಬ ಹೆಸರು ನಾಮಕರಣವಾಯ್ತೋ.. ಯಾವ ಅಂಗಣದಲ್ಲಿ ಹತ್ತಕ್ಕೆ ಹತ್ತು ವಿಕೆಟ್ ಪಡೆದು ಇತಿಹಾಸ ನಿರ್ಮಾಣವಾಯ್ತೋ.. ಅದೇ ಅಂಗಣದಲ್ಲಿ ನಾಯಕನಾಗಿ, ಗಾಯಗೊಂಡು ತನ್ನ ವೃತ್ತಿಬದುಕಿಗೆ ವಿದಾಯ ಹೇಳಬೇಕಾಯ್ತು. ಅದು ಆಸೀಸ್ ವಿರುದ್ದದ ಮೂರನೇ ಟೆಸ್ಟ್ ಪಂದ್ಯ. ಕ್ಯಾಚ್ ಹಿಡಿಯುವಾಗ ಎಡಗೈಯ ಕಿರು ಬೆರಳಿಗೆ ಗಂಭೀರವಾದ ಗಾಯವಾಯ್ತು. ಬೆರಳಿಗೆ ಸ್ಟಿಚ್ ಹಾಕೊಂಡು ಬೌಲಿಂಗ್ ಮಾಡಿದ್ದ ಕುಂಬ್ಳೆ ಟೆಸ್ಟ್ ಕ್ರಿಕೆಟ್‍ನಲ್ಲಿ ಕೊನೆಯದಾಗಿ ಮಿಚೆಲ್ ಜಾನ್ಸನ್ ವಿಕೆಟ್ ಪಡೆದಿದ್ರು. ಅಲ್ಲದೆ ಅವರು, ತನ್ನ ವರ್ಣರಜಿತ ಕ್ರಿಕೆಟ್ ಬದುಕಿಗೆ ನೋವಿನಿಂದಲೇ ಗುಡ್‍ಬೈ ಹೇಳಿದ್ದರು.

ಸ್ಪಿನ್ ಬೌಲರ್ ಆಗಿ ಎಂಟ್ರಿ.. ನಾಯಕನಾಗಿ ವಿದಾಯ..!

132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್. 269 ಏಕದಿನ ಪಂದ್ಯಗಳಲ್ಲಿ 337 ವಿಕೆಟ್. ಒಟ್ಟು 956 ಅಂತಾರಾಷ್ಟ್ರೀಯ ವಿಕೆಟ್‍ಗಳು. ಟೆಸ್ಟ್‍ನಲ್ಲಿ ಒಂದು ಬಾರಿ ಹತ್ತು ವಿಕೆಟ್‍ಗಳು. 35 ಬಾರಿ ಐದು ವಿಕೆಟ್‍ನ ಗೊಂಚಲುಗಳು. ಒಂದು ಟೆಸ್ಟ್ ಶತಕ. ಒಬ್ಬ ಸ್ಪಿನ್ ಬೌಲರ್ ಆಗಿ ತಂಡಕ್ಕೆ ಎಂಟ್ರಿಯಾಗಿ ಕೊನೆಗೆ ತಂಡದ ನಾಯಕನಾಗಿ ವೃತ್ತಿ ಬದುಕಿಗೆ ವಿದಾಯ ಹೇಳಿರುವ ಅಪರೂಪದ ಕ್ರಿಕೆಟಿಗರಲ್ಲಿ ಅನಿಲ್ ಕುಂಬ್ಳೆ ಕೂಡ ಒಬ್ಬರಾಗಿದ್ದಾರೆ.

ಬಹುಮುಖ ಪ್ರತಿಭೆಯ ಕುಂಬ್ಳೆಯವರ ಜಂಬೋ ಸವಾರಿ..!

ವೃತ್ತಿ ಬದುಕಿಗೆ ವಿದಾಯ ಹೇಳಿದ್ರೂ ಕುಂಬ್ಳೆ ಅವರಿಗೆ ಕ್ರಿಕೆಟ್ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ಐಪಿಎಲ್‍ನಲ್ಲಿ ಆರ್‍ಸಿಬಿ ತಂಡದ ನಾಯಕನಾಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದರು. ಬಳಿಕ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲ, ಆಡಳಿತಗಾರನಾಗಿ ಕೆಎಸ್‍ಸಿಎ ಚುಕ್ಕಾಣಿ ಕೂಡ ಹಿಡಿದಿದ್ದರು. ಇನ್ನು, ಅನಿಲ್ ಕುಂಬ್ಳೆ ಮೈದಾನದಲ್ಲಿ ಚೆಂಡನ್ನು ಮಾತ್ರ ತಿರುಗಿಸುತ್ತಿರಲಿಲ್ಲ. ಡ್ರೆಸಿಂಗ್ ರೂಮ್‍ನಲ್ಲಿ ಕುಳಿತುಕೊಂಡು ಕ್ಯಾಮೆರಾ ಲೆನ್ಸ್‍ಗಳನ್ನು ತಿರುಗಿಸುತ್ತಿದ್ದರು. ಪಂದ್ಯಗಳ ರೋಚಕ ಕ್ಷಣಗಳಿಗೆ ಅವರ ಕ್ಯಾಮೆರಾ ಸಾಕ್ಷಿಯಾಗುತ್ತಿತ್ತು. ಇನ್ನು ಬಿಡುವಿನ ವೇಳೆಯಲ್ಲಿ ಪ್ರಕೃತಿ ಹಾಗೂ ವನ್ಯ ಜೀವಿಗಳನ್ನು ಅವರ ಕ್ಯಾಮೆರಾ ಕಣ್ಣು ಸೆರೆ ಹಿಡಿಯುತ್ತಿತ್ತು.

ಮಾನವೀಯತೆಗೆ ಮಿಡಿಯುವ ಹೃದಯ..!

ಅದೊಂದು ದಿನ, ಅಸ್ವಸ್ಥನಾಗಿ ವೀಲ್‍ಚೇರ್‍ನಲ್ಲಿದ್ದ ಒಬ್ಬ ಹುಡುಗ ಇವರ ಕಣ್ಣಿಗೆ ಬಿದ್ದಿದ್ದ. ಆ ಹುಡುಗನ ತಾಯಿ ಬಂದು, ಕ್ರಿಕೆಟ್ ಮತ್ತು ನಿಮ್ಮನ್ನು ಟಿವಿಯಲ್ಲಿ ನೋಡಿದಾಗ ಮಾತ್ರ ನಗುತ್ತಾನೆ ಎಂದು ಹೇಳಿದ್ದರು. ಆ ಹುಡುಗನ ಪ್ರೀತಿಗೆ ಮಿಡಿದ ಕುಂಬ್ಳೆ, ಆತನ ಚಿಕಿತ್ಸೆಗಾಗಿ ಚೆನ್ನೈನ ಎನ್‍ಜಿಒ ಸಂಸ್ಥೆಯ ಜೊತೆ ಸೇರಿಕೊಂಡು ನಿಧಿ ಸಂಗ್ರಹಿಸಿದ್ದರು. ಬಳಿಕ ಅದೇ ಹುಡುಗ, ಕುಂಬ್ಳೆಯವರನ್ನು ತಂಡದಿಂದ ಕೈಬಿಟ್ಟಾಗ, ಚಿಂತೆ ಮಾಡಬೇಡಿ. ನೀವು ಮತ್ತೆ ತಂಡವನ್ನು ಸೇರಿಕೊಳ್ಳುತ್ತೀರಿ ಎಂದು ಧೈರ್ಯ ತುಂಬಿ ಪತ್ರ ಬರೆದಿದ್ದ. ಈ ವಿಷ್ಯವನ್ನು ಕುಂಬ್ಳೆಯವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇನ್ನು, ವನ್ಯ ಜೀವಿ ಸಂರಕ್ಷಣೆಯ ಬಗ್ಗೆಯೂ ಜಾಗೃತಿ ಮೂಡಿಸಿದ್ದರು. ಜಂಬೋ ಫಂಡ್ ಎಂಬ ಹೆಸರಿನಲ್ಲಿ ನಿಧಿಯನ್ನು ಆರಂಭಿಸಿದ್ದರು. ಅರಣ್ಯ ಸಿಬ್ಬಂದಿ, ಎನ್‍ಜಿಒಗಳು ಹಾಗೂ ವನ್ಯ ಜೀವಿ ಸಂರಕ್ಷಣೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿತ್ತು. ಒಟ್ಟಿನಲ್ಲಿ ಅನಿಲ್ ಕುಂಬ್ಳೆ ಅಂದ್ರೆ ಒಬ್ಬ ಹೋರಾಟಗಾರ. ನೋವು – ಗಾಯವನ್ನು ಲೆಕ್ಕಿಸದೇ ಹೋರಾಡಿದ್ದ ಧೀರ. ಸರ್ಪಾಸ್ತ್ರದ ಮೂಲಕ ತಂಡಕ್ಕೆ ಬೆನ್ನುಲೆಬಾಗಿದ್ದ ಛಲಗಾರ. ಗಾಂಭೀರ್ಯದಿಂದ ತಂಡವನ್ನು ಮುನ್ನಡೆಸಿದ್ಧ ರಣಬೇಟೆಗಾರ. ಶಿಸ್ತಿನ ಆಡಳಿತಗಾರ. ಅನುಭವವನ್ನು ಧಾರೆ ಎರೆಯುವ ತರಬೇತುದಾರ. ಮಾನವೀಯತೆಗೆ ಸ್ಪಂದಿಸುವ ಸರದಾರ. ಕೈಯಲ್ಲಿ ಕ್ಯಾಮೆರಾ ಹಿಡಿಯುವ ಛಾಯಾಚಿತ್ರಕಾರ..!
ಜಂಬೋ ಅಂದ್ರೆ ಬರೀ ಒಂದು ಅಡ್ಡ ಹೆಸರು ಅಲ್ಲ. ಕ್ರಿಕೆಟ್ ಜಗತ್ತಿನಲ್ಲಿ ಎಂದೆಂದಿಗೂ ನೆನಪಿನಲ್ಲಿರುವ ಹೆಸರು..! ಅದಕ್ಕಾಗಿಯೇ ಹೇಳುವುದು..ಅನಿಲ್ ಕುಂಬ್ಳೆ ಅಂದ್ರೆ ಹೋರಾಟ.. ಹೋರಾಟ ಅಂದ್ರೆ ಅನಿಲ್ ಕುಂಬ್ಳೆ.

ಬರಹ ಮೂಲ ಸನತ್​ ರೈ, ಹಿರಿಯ ಪತ್ರಕರ್ತರು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor