SHIVAMOGGA NEWS TODAY

ಜಿಲ್ಲಾ ಗ್ರಾಹಕ ಆಯೋಗದ ಕಡಕ್ ತೀರ್ಪು: ಗ್ರಾಹಕನಿಗೆ ಬಡ್ಡಿ ಸಮೇತ ದಂಡ ಪಾವತಿಸಲು ಆದೇಶ!

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shivamogga Court ಶಿವಮೊಗ್ಗ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿ ಶೈಕ್ಷಣಿಕ ಸಾಲ ಪಡೆದ ಗ್ರಾಹಕರೊಬ್ಬರಿಂದ ನಿಯಮಬಾಹಿರವಾಗಿ ಹೆಚ್ಚುವರಿ ಬಡ್ಡಿ ವಸೂಲಿ ಮಾಡಿ, ಸೇವಾ ನ್ಯೂನತೆ ಎಸಗಿದ್ದ ರಾಷ್ಟ್ರೀಕೃತ ಬ್ಯಾಂಕ್ ಒಂದರ ಹೊಸನಗರ ಶಾಖೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಭಾರಿ ದಂಡ ವಿಧಿಸಿದೆ.

ಸಾಗರ ತಾಲೂಕಿನ ನಿವಾಸಿಯೊಬ್ಬರು ಕಳೆದ 2013 ರಲ್ಲಿ ಹೊಸನಗರದ ಸದರಿ ಬ್ಯಾಂಕ್ ಶಾಖೆಯಲ್ಲಿ ಕೇಂದ್ರ ವಲಯ ಬಡ್ಡಿ ರಿಯಾಯಿತಿ ಯೋಜನೆ-2009 ರ ಅಡಿಯಲ್ಲಿ 4 ವರ್ಷದ ಪದವಿ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಪಡೆದುಕೊಂಡಿದ್ದರು. ನಿಯಮಗಳ ಪ್ರಕಾರ, ಸಾಲದ ಅವಧಿ ಮುಕ್ತಾಯಗೊಳ್ಳುವವರೆಗೆ (30/05/2018) ಅನ್ವಯವಾಗುವ ಸಂಪೂರ್ಣ ಬಡ್ಡ ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿತ್ತು.

ಆದರೆ, ಬ್ಯಾಂಕ್ ಅಧಿಕಾರಿಗಳು ಸಾಲದ ಅವಧಿ ಮುಗಿದ ನಂತರ ನಿಯಮಗಳನ್ನು ಗಾಳಿಗೆ ತೂರಿ ಗ್ರಾಹಕರಿಂದ ನಿಯಮಬಾಹಿರವಾಗಿ ಒಟ್ಟು 41,199 ರೂ.ಗಳಷ್ಟು ಹೆಚ್ಚುವರಿ ಬಡ್ಡಿಯನ್ನು ಬಲವಂತವಾಗಿ ವಸೂಲಿ ಮಾಡಿದ್ದರು. ಈ ಅನ್ಯಾಯದ ವಿರುದ್ಧ ಗ್ರಾಹಕರು ಬ್ಯಾಂಕ್‌ಗೆ ಖುದ್ದಾಗಿ ಭೇಟಿ ನೀಡಿ ಹಾಗೂ ಇ-ಮೇಲ್ ಮೂಲಕ ಹಲವು ಬಾರಿ ಮನವಿ ಸಲ್ಲಿಸಿದರೂ, ಬ್ಯಾಂಕ್ ಸಿಬ್ಬಂದಿ ಯಾವುದೇ ಸೂಕ್ತ ಸ್ಪಂದನೆ ನೀಡದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದರು. ಇದರಿಂದ ನೊಂದ ಗ್ರಾಹಕರು ನ್ಯಾಯಕ್ಕಾಗಿ ಶಿವಮೊಗ್ಗ ಜಿಲ್ಲಾ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.

ಪ್ರಕರಣದ ಉಭಯ ಪಕ್ಷಕಾರರ ಸುದೀರ್ಘ ವಾದ-ವಿವಾದ ಹಾಗೂ ಸಲ್ಲಿಕೆಯಾದ ಅಧಿಕೃತ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು, ಬ್ಯಾಂಕ್ ಸ್ಪಷ್ಟವಾಗಿ ಸೇವಾ ನ್ಯೂನತೆ ಎಸಗಿದೆ ಎಂದು ಆದೇಶಿಸಿದೆ. ಗ್ರಾಹಕರ ದೂರನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಾಲಯವು, ಬ್ಯಾಂಕ್ ಕಾನೂನುಬಾಹಿರವಾಗಿ ವಸೂಲಿ ಮಾಡಿದ್ದ 41,199 ರೂ. ಮೊತ್ತವನ್ನು ದಿನಾಂಕ: 31/07/2024 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 7 ರಷ್ಟು ಬಡ್ಡಿಯೊಂದಿಗೆ ತೀರ್ಪು ಬಂದ 45 ದಿನಗಳ ಒಳಗೆ ಪಾವತಿಸಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಪಾವತಿಸಲು ವಿಫಲವಾದರೆ, ಪೂರ್ತಿ ಮೊತ್ತಕ್ಕೆ ಶೇ. 10 ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದೆ.

ಇದರೊಂದಿಗೆ ಗ್ರಾಹಕರಿಗೆ ಉಂಟುಮಾಡಿದ ಮಾನಸಿಕ ಹಿಂಸೆ ಮತ್ತು ಅಲೆದಾಟಕ್ಕಾಗಿ 25,000 ರೂ. ಪರಿಹಾರ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 10,000 ರೂ.ಗಳನ್ನು ಗ್ರಾಹಕರಿಗೆ ನೀಡುವಂತೆ ಕಡಕ್ ಆದೇಶ ಹೊರಡಿಸಿದೆ. ಈ ದಂಡದ ಮೊತ್ತವನ್ನು 45 ದಿನಗಳ ಒಳಗಾಗಿ ಪಾವತಿಸದಿದ್ದರೆ, ಅದಕ್ಕೂ ವಾರ್ಷಿಕ ಶೇ. 10 ರಷ್ಟು ಬಡ್ಡಿಯನ್ನು ಸೇರಿಸಿ ನೀಡಬೇಕಾಗುತ್ತದೆ ಎಂದು ಆಯೋಗವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.