Teacher Assaults Student / ಮಲೆನಾಡು ಟುಡೆ ಸುದ್ದಿ / ಜಿಲ್ಲೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬನ ಮೇಲೆ ಶಾಲೆಯ ಕಂಪ್ಯೂಟರ್ ಶಿಕ್ಷಕನೊಬ್ಬ ಅಮಾನವೀಯವಾಗಿ ದೈಹಿಕ ಹಲ್ಲೆ ನಡೆಸಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ.
ಈ ಪ್ರಕರಣದಲ್ಲಿ ವಿದ್ಯಾರ್ಥಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ವಿದ್ಯಾರ್ಥಿಯ ಪೋಷಕರು ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಶಿಕ್ಷಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವಿದ್ಯಾರ್ಥಿಯ ಪೋಷಕರ ಆರೋಪವೇನು?
ವಸತಿ ಶಾಲೆ ಆವರಣದಲ್ಲಿ ವಿದ್ಯಾರ್ಥಿಯು ಕಸದ ಬುಟ್ಟಿಗೆ ಕಾಗದವೊಂದನ್ನು ಎಸೆಯುವಾಗ ಆಕಸ್ಮಿಕವಾಗಿ ಅದು ಅಲ್ಲೇ ಇದ್ದ ಸಹಪಾಠಿಯ ಮೇಲೆ ಬಿದ್ದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಸಹಪಾಠಿಯು ಶಾಲೆಯ ಶಿಕ್ಷಕರ ಬಳಿ ದೂರು ನೀಡಿದ್ದರು.. ಈ ದೂರನ್ನು ಆಧರಿಸಿ, ಶಾಲೆಯ ಶಿಕ್ಷಕರೊಬ್ಬರು ಯಾವುದೇ ವಿಚಾರಣೆ ನಡೆಸದೆ, ವಿದ್ಯಾರ್ಥಿಯನ್ನು ವಸತಿ ಶಾಲೆಯ ಕೊಠಡಿಯೊಂದಕ್ಕೆ ಕರೆದೊಯ್ದು ಮನಬಂದಂತೆ ಥಳಿಸಿದ್ದಾನೆ ಎಂಬುದು ಪೋಷಕರ ಆರೋಪ. ಶಿಕ್ಷಕರ ಏಟಿನಿಂದಾಗಿ ವಿದ್ಯಾರ್ಥಿಯ ದೇಹದ ಮೇಲೆ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದೆ
ಈ ಘಟನೆ ಬೆನ್ನಲ್ಲೆ ವಿದ್ಯಾರ್ಥಿಯು ವಿಪರೀತ ಜ್ವರದಿಂದ ಬಳಲಲಾರಂಭಿಸಿದ್ದಾನೆ. ನೋವು ತಾಳಲಾರದೆ ಆತ ತನ್ನ ಪೋಷಕರಿಗೆ ದೂರವಾಣಿ ಕರೆ ಮಾಡಿ, ತಾನು ಇನ್ನು ಮುಂದೆ ವಸತಿ ಶಾಲೆಯಲ್ಲಿ ಇರುವುದಿಲ್ಲ, ದಯವಿಟ್ಟು ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಕಣ್ಣೀರು ಹಾಕಿದ್ದಾನೆ. ಮಗನ ಕರೆಯಿಂದ ಆತಂಕಗೊಂಡ ಪೋಷಕರು ತಕ್ಷಣವೇ ವಸತಿ ಶಾಲೆಗೆ ಧಾವಿಸಿ ಬಂದಿದ್ದಾರೆ. ಅಲ್ಲಿ ಅವರಿಗೆ ನಡೆದ ವಿಷಯ ತಿಳಿದುಬಂದಿದೆ. ಈ ಬಗ್ಗೆ ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದ ಪೋಷಕರು ಬಳಿಕ ಮಗನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಈ ಸಂಬಂದ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮಧ್ಯಪ್ರವೇಶಿಸಿ ತಪ್ಪಿತಸ್ಥ ಶಿಕ್ಷಕನ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಒತ್ತಾಯಿಸಿದ್ದಾರೆ.
(ವಿಶೇಷ ಸೂಚನೆ : ಈ ಪ್ರಕರಣದಲ್ಲಿ ಯಾವುದೇ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿಲ್ಲ )
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz
