ಶಿವಮೊಗ್ಗ: ಕಳೆದ 6 ತಿಂಗಳಲ್ಲಿ ಪೊಲೀಸ್​ ಇಲಾಖೆ ವಶಪಡಿಸಿಕೊಂಡ ಗಾಂಜಾ ಎಷ್ಟು ಕೆ ಜಿ ಗೊತ್ತಾ ? 

ಹಂಚಿಕೊಳ್ಳಿ
WhatsApp Facebook X Telegram
Shivamogga Drug Bust 59 KG Ganja Seized
Shivamogga Drug Bust 59 KG Ganja Seized

Shivamogga ಶಿವಮೊಗ್ಗ: ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿ ಇದುವರೆಗೂ ವಶಪಡಿಸಿಕೊಂಡಿದ್ದ ಮಾದಕ ದ್ರವ್ಯ ವಸ್ತುಗಳನ್ನು ನಾಶಪಡಿಸಲಾಯಿತು. ಮಾಚೇನಹಳ್ಳಿಯ ಶುಶ್ರುತಾ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿಯಲ್ಲಿ ಈ ಮಾದಕ ದ್ರವ್ಯಗಳನ್ನು ನಾಶಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದ್ದಾರೆ.

ಶಿವಮೊಗ್ಗ: ಪೊಲೀಸ್ ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿದೆ ನೋಡಿ ಸಿಹಿಸುದ್ದಿ

ನಗರದ ಡಿ.ಆರ್. ಮೈದಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಗಾಂಜಾ ನಿರ್ಮೂಲನೆಗಾಗಿ ಪೊಲೀಸ್ ಇಲಾಖೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಕಳೆದ ಜನವರಿಯಿಂದ ಜೂನ್ ತಿಂಗಳ ಅಂತ್ಯದವರೆಗೆ ಬರೋಬ್ಬರಿ 24,55,640 ರೂಪಾಯಿ ಮೌಲ್ಯದ 59.119 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಒಟ್ಟು 31 ಗಾಂಜಾ ಪ್ರಕರಣಗಳನ್ನು ದಾಖಲಿಸಿಕೊಂಡು, 63 ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ, ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ 102 ಹಳೇ ಆರೋಪಿಗಳನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಲಾಗಿದ್ದು, ಇದರಲ್ಲಿ ಕಳೆದ 4 ದಿನಗಳಲ್ಲೇ 17 ಜನರನ್ನು ಗುರುತಿಸಿ ಜೈಲಿಗಟ್ಟಲಾಗಿದೆ. ಕಾಡಂಚಿನ ಜಾಗಗಳಲ್ಲಿ ಗಾಂಜಾ ಪತ್ತೆ ಹಚ್ಚಲು ಹಾಗೂ ಪಬ್ಲಿಕ್ ಐ ಮೂಲಕ ಔಷಧಿ ಅಂಗಡಿಗಳ ಮೇಲೆ ನಿಗಾ ಇಡಲು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.

ಕೇವಲ ಜೈಲಿಗೆ ಕಳುಹಿಸುವುದು ಒಂದೇ ಇಲಾಖೆಯ ಗುರಿಯಲ್ಲ, ಬದಲಿಗೆ ಅವರನ್ನು ವ್ಯಸನಮುಕ್ತರನ್ನಾಗಿ ಮಾಡುವುದು ನಮ್ಮ ಉದ್ದೇಶ ಎಂದು ಎಸ್‌ಪಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಒಟ್ಟು 1426 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 152 ಜನರಿಗೆ ಕೌನ್ಸಿಲಿಂಗ್ ನೀಡಲಾಗಿದೆ. ಇವರಲ್ಲಿ 54 ಜನರು ಇದುವರೆಗೆ ವ್ಯಸನಮುಕ್ತರಾಗಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗ್ರಾಮ ಸಭೆ ಮತ್ತು ವಾರ್ಡ್ ಮೀಟಿಂಗ್‌ಗಳ ಮೂಲಕ ಇದುವರೆಗೆ 25,827 ಜನರಿಗೆ ಗಾಂಜಾ ಕುರಿತು ಅರಿವು ಮೂಡಿಸಲಾಗಿದೆ.

ಪೊಲೀಸ್ ಇಲಾಖೆಗೆ ಸಿಕ್ಕಿರುವ ಮಾಹಿತಿ ಪ್ರಕಾರ 17 ರಿಂದ 25 ವರ್ಷದೊಳಗಿನ ಯುವಕರು ಹೆಚ್ಚಾಗಿ ಗಾಂಜಾ ಸೇವನೆಗೆ ಒಳಗಾಗುತ್ತಿದ್ದಾರೆ ಮತ್ತು ಇವರಲ್ಲಿ ಹೆಚ್ಚು ಕೂಲಿ ಕೆಲಸ ಮಾಡುವ ವ್ಯಕ್ತಿಗಳಿದ್ದಾರೆ. ಆದಾಗ್ಯೂ, ಯುವ ಸಮುದಾಯವನ್ನು ರಕ್ಷಿಸಲು ಇಲಾಖೆಯು ಕಾಲೇಜುಗಳನ್ನು ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದೆ. ಈ ಹಿಂದೆ ವಿದ್ಯಾರ್ಥಿಗಳನ್ನು ಪೊಲೀಸ್ ಸ್ಟೇಷನ್‌ಗೆ ಕರೆತಂದು ಟೆಸ್ಟ್ ಮಾಡಿಸಲಾಗುತ್ತಿತ್ತು, ಆದರೆ ಇತ್ತೀಚೆಗೆ ಕಾಲೇಜುಗಳಿಗೇ ನೇರವಾಗಿ ತೆರಳಿ ಟೆಸ್ಟ್ ಮಾಡಿ ಅರಿವು ಮೂಡಿಸಲಾಗುತ್ತಿದೆ. ಕಾಲೇಜುಗಳಲ್ಲಿ ನಡೆಸಿದ 484 ಜನರ ತಪಾಸಣೆಯಲ್ಲಿ 3 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ಹೀಗೆ ಜಿಲ್ಲೆಯನ್ನು ಗಾಂಜಾ ಮುಕ್ತವನ್ನಾಗಿ ಮಾಡಲು ಪೊಲೀಸ್ ಇಲಾಖೆ ತೀವ್ರವಾಗಿ ಶ್ರಮಿಸುತ್ತಿದೆ ಎಂದು ಎಸ್‌ಪಿ ನಿಖಿಲ್ ಬಿ. ಅವರು ಮಾಹಿತಿ ನೀಡಿದ್ದಾರೆ.

Shivamogga Drug Bust 59 KG Ganja Seized

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor