ಬೆಂಗಳೂರಿನಿಂದ ಬಂದ ಕರೆ ಮೇಲಿತ್ತು ಸಂಶಯ! ಆಂಧ್ರದ ವ್ಯಕ್ತಿ ಶಿವಮೊಗ್ಗದಲ್ಲಿ ಬಂಧನ

Fake Lokayukta officer / ಮಲೆನಾಡು ಟುಡೆ ಶಿವಮೊಗ್ಗ / ಶಿವಮೊಗ್ಗದ ಅಧಿಕಾರಿಯನ್ನೆ ಲೋಕಾಯುಕ್ತ ಅಂತಾ ಹೆದರಿಸಿ ಹಣ ವಸೂಲಿ ಮಾಡಲು ಮುಂದಾಗಿದ್ದ ಯುವಕನ್ನ ಶಿವಮೊಗ್ಗ ಪೊಲೀಸರು ಆಂಧ್ರಪ್ರದೇಶಕ್ಕೆ ಹೋಗಿ ಕರೆದುಕೊಂಡು ಬಂದಿದ್ದಾರೆ. ಕುತೂಹಲಕಾರಿಯಾದ ಈ ಪ್ರಕರಣ ಸಂಬಂಧ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ನಡೆದ ಘಟನೆ ವಿವರ ಹೀಗಿದೆ.

ಶಿವಮೊಗ್ಗ ಪೊಲೀಸ್ ಇಲಾಖೆಯು ಈ ಕುರಿತಾಗಿ ನೀಡಿರುವ ಪ್ರಕಟಣೆಯ ಪ್ರಕಾರ, ತಾನು ಲೋಕಾಯುಕ್ತ ಕಚೇರಿಯಲ್ಲಿ ಹಿರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ಮೂಲತಃ ಆಂಧ್ರಪ್ರದೇಶದ ನಲ್ಲಗುತ್ತಲಾಪಲ್ಲಿಯ ಟಿ. ಧನಂಜಯ್ (33) ನನ್ನು ಬಂಧಿಸಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಿತ್ರದುರ್ಗ ಪ್ರಶಾಂತ್ ನಗರ ನಿವಾಸಿ ತಿಪ್ಪೇಸ್ವಾಮಿ ಅವರು ಶಿವಮೊಗ್ಗದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಲೋಕಾಯುಕ್ತ ಬೆಂಗಳೂರು ಮುಖ್ಯ ಕಚೇರಿಯ ಅಧಿಕಾರಿ ದಯಾನಂದ್ ಎಂದು ತನನ್ನು ಧನಂಜಯ್​ ಪರಿಚಯಿಸಿಕೊಂಡಿದ್ದ. ಅಲ್ಲದೆ ನಿಮ್ಮ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಮಾಡಲು ಆನ್‌ಲೈನ್ ಮೂಲಕ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದ.

ಈ ಕುರಿತು ತಿಪ್ಪೇಸ್ವಾಮಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಎಸ್‌ಪಿ ಬಿ.ನಿಖಿಲ್ ಮಾರ್ಗದರ್ಶನದಲ್ಲಿ ಸೈಬರ್ ಕೈಂ ಠಾಣೆಯ ಪಿಐ ಮಂಜುನಾಥ್ ನೇತೃತ್ವದಲ್ಲಿ ಎಎಸ್‌ಐ ಪ್ರಕಾಶ್, ಸಿಬ್ಬಂದಿ ಶರತ್, ಕಿರಣ್ ಕುಮಾರ್, ಸಂಗಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಇದೀಗ ಆರೋಪಿ ಸೆರೆ ಸಿಕ್ಕಿದ್ದಾನೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw