Sa Re Ga Ma Pa / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ 2026ರ ರಿಯಾಲಿಟಿ ಶೋನಲ್ಲಿ ನಮ್ಮ ಸೊರಬ ತಾಲೂಕಿನ ಹರೀಶಿ ಗ್ರಾಮದ ಹುಡುಗಿ ಕೀರ್ತಿ ಎಸ್. ವಿಶೇಷವಾಗಿ ಮಿಂಚುತ್ತಿರುವುದು ನೋಡೆ ಇದ್ದೇವೆ. ಇದೀಗ ಈ ವಿದ್ಯಾರ್ಥಿನಿಯನ್ನು ಮಾಜಿ ಸಚಿವ ಎಸ್ ಮಧು ಬಂಗಾರಪ್ಪರವರು ತಮ್ಮ ಮನೆಗೆ ಆಹ್ವಾನಿಸಿದ್ದಷ್ಟೆ ಅಲ್ಲದೆ ಆಕೆಯ ಜೊತೆಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಆತಿಥ್ಯ ನೀಡಿದ್ದಾರೆ. ಈ ಬಗ್ಗೆ ಖುದ್ದು ಮಧು ಬಂಗಾರಪ್ಪರವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಬರೆದುಕೊಂಡಿದ್ದಾರೆ.
ಗಾಯಕಿ ಕೀರ್ತಿ ಎಸ್. ಅವರು ತಮ್ಮ ಗಾಯನದ ಮೂಲಕ ರಾಜ್ಯದ ಗಮನ ಸೆಳೆದಿದ್ದು, ಸಂಗೀತ ಆಸಕ್ತರ ಮೆಚ್ಚುಗೆ ಪಡೆದಿದ್ದಾರೆ. ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬಂದಿರುವ ಈಕೆಯ ಪ್ರತಿಭೆಯನ್ನು ಗಮನಿಸಿ ತಮಗೆ ಅತೀವ ಆನಂದವಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ ಅವರು ಸಂಗೀತ ಪ್ರಿಯರಾಗಿದ್ದು, ಸ್ವತಃ ಸಂಗೀತ ಕಲಿತು ಹಾಡುತ್ತಿದ್ದರು. ಅವರು ಇಂದು ಜೀವಂತವಾಗಿದ್ದರೆ ಈ ಹೆಮ್ಮೆಯ ಪ್ರತಿಭೆಯನ್ನು ಕಂಡು ತೀವ್ರ ಸಂತಸಪಡುತ್ತಿದ್ದರು ಎಂದು ಸಚಿವ ಮಧು ಬಂಗಾರಪ್ಪರವರು ಸ್ಮರಿಸಿದ್ದಾರೆ. ಅಷ್ಟೆ ಅಲ್ಲದೆ ಕ್ಷೇತ್ರದ ಜನರ ಪಾದದ ಧೂಳು ಸದಾ ತಮ್ಮ ಮನೆಯಲ್ಲಿರಬೇಕು ಎಂಬ ಎಸ್. ಬಂಗಾರಪ್ಪ ಅವರ ಆಶಯದಂತೆ ಹರೀಶಿ ಗ್ರಾಮದ ಮಕ್ಕಳ ಆಗಮನದಿಂದ ಆ ಮಾತು ಸಾರ್ಥಕವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Sa Re Ga Ma Pa / ಮಧು ಬಂಗಾರಪ್ಪನವರ ಫೇಸ್ಬುಕ್ನ ಬರಹ ಯಥಾವತ್ತಾಗಿ ಇಲ್ಲಿದೆ
ಜೀ ಕನ್ನಡ ವಾಹಿನಿಯ ಪ್ರತಿಷ್ಠಿತ ‘ಸರಿಗಮಪ ಲಿಟಲ್ ಚಾಂಪ್ಸ್ – 2026 (Sa Re Ga Ma Pa Li’l Champs – 2026) ರಿಯಾಲಿಟಿ ಶೋನಲ್ಲಿ ನನ್ನ ಮತಕ್ಷೇತ್ರ ಸೊರಬ ತಾಲೂಕಿನ ಹರೀಶಿ ಗ್ರಾಮದ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕೀರ್ತಿ ಎಸ್. ಮಿಂಚುತ್ತಿರುವುದು ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿಯಾಗಿದೆ.
ಕೀರ್ತಿ ಎಸ್. ಅದ್ಭುತ ಗಾಯನದ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ನಮ್ಮ ಗ್ರಾಮೀಣ ಭಾಗದ ಕಡುಬಡತನ ಕುಟುಂಬದಿಂದ ಬಂದ ಈ ಗಾಯಕಿಯ ಪ್ರತಿಭೆಯನ್ನು ಕಂಡು, ಅತೀವ ಆನಂದವಾಗಿದೆ, ನನ್ನ ಹೃದಯ ತುಂಬಿ ಬಂದಿದೆ.
ನನ್ನ ತಂದೆ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ಬಂಗಾರಪ್ಪಜೀ ಅವರು ಸಂಗೀತ ಪ್ರಿಯರಾಗಿದ್ದರು, ಸ್ವತಃ ಸಂಗೀತ ಕಲಿತು ಹಾಡುತ್ತಿದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಇಂದು ಇದ್ದಿದ್ದರೆ, ನಮ್ಮ ನೆಲದ ಈ ಹೆಮ್ಮೆಯ ಪ್ರತಿಭೆಯನ್ನು ಕಂಡು ಎಷ್ಟು ಹಿರಿ ಹಿರಿ ಹಿಗ್ಗುತ್ತಿದ್ದರೋ…!
“ನಮ್ಮ ಕ್ಷೇತ್ರದ ಜನರ ಪಾದದ ಧೂಳು ಸದಾ ನಮ್ಮ ಮನೆಯಲ್ಲಿರಬೇಕು” ಎಂಬ ಮಾತನ್ನು ಅಪ್ಪಾಜಿ ಸದಾ ಹೇಳುತ್ತಿದ್ದರು. ಅವರ ಆಶಯದಂತೆ ಇಂದು ನಮ್ಮೂರಿನ ಮಕ್ಕಳ ಪಾದದ ಧೂಳು ನಮ್ಮನೆಯನ್ನು ಆವರಿಸಿತ್ತು. ಬೆಂಗಳೂರಿನ ಸದಾಶಿವನಗರದ ನಮ್ಮ ನಿವಾಸಕ್ಕೆ ಪ್ರತಿಭಾವಂತ ಗಾಯಕಿ ಕುಮಾರಿ ಕೀರ್ತಿ ಎಸ್ ಮತ್ತು ಆಕೆ ಓದುತ್ತಿರುವ ಶಾಲೆಯ ಮಕ್ಕಳು ಆಗಮಿಸಿ, ನನ್ನ ಪ್ರೀತಿಯ ಆತಿಥ್ಯ ಸ್ವೀಕರಿಸಿದರು.
ಜೊತೆಗೆ ಕೀರ್ತಿ ಅವರ ಪೋಷಕರು ಹಾಗೂ ಶಿಕ್ಷಕರು ಕೂಡ ಆಗಮಿಸಿದ್ದು ನನಗೆ ಖುಷಿ ತಂದಿತ್ತು. ಅವರೆಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಂಡು ಆತಿಥ್ಯ ನೀಡಿ ಗೌರವಿಸುವ ಸೌಭಾಗ್ಯ ನಮ್ಮದಾಯಿತು.
ಈ ಸಂದರ್ಭದಲ್ಲಿ ಕುಮಾರಿ ಕೀರ್ತಿಯವರ ಯಶೋಗಾಧೆಯನ್ನು ಆಕೆಯ ಮಾತುಗಳಲ್ಲಿಯೇ ಕೇಳಿದೆ. ಆಕೆಯನ್ನು ಗೌರವಿಸಿ, ಪ್ರೇರಣೆ-ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದೆ.
ನಮ್ಮ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ಸಂಗೀತ ಲೋಕದ ಪರಿಚಯವಾಗಲಿ ಎಂಬ ಉದ್ದೇಶದಿಂದ ನಮ್ಮ ಒಡೆತನದ “ಆಕಾಶ್ ಆಡಿಯೋ” ಸ್ಟುಡಿಯೋ ತೋರಿಸುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ಲೈವ್ ರೆಕಾರ್ಡಿಂಗ್ ಹಾಗೂ ತಾಂತ್ರಿಕ ಪ್ರಕ್ರಿಯೆಗಳ ಪ್ರತ್ಯಕ್ಷ ಅನುಭವ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. ಮಕ್ಕಳೆಲ್ಲರೂ ಸ್ಟುಡಿಯೋ ಒಳಗಿನ ಪ್ರಪಂಚವನ್ನು ನೋಡಿ ಅಪಾರ ಸಂತಸ ವ್ಯಕ್ತಪಡಿಸದ್ದಲ್ಲದೆ, ಹೊಸ ವಿಷಯಗಳನ್ನು ಕುತೂಹಲದಿಂದ ತಿಳಿದುಕೊಂಡರು.
ಸೌಲಭ್ಯಗಳ ಕೊರತೆಯ ನಡುವೆಯೂ ಅರಳಿದ ಈ ನಮ್ಮ ಪ್ರತಿಭೆ ದೊಡ್ಡ ವೇದಿಕೆಯಲ್ಲಿ ಮಿಂಚುತ್ತಿರುವುದನ್ನು ನೋಡುವುದೇ ಚೆಂದ. ಈಕೆಯ ಸಾಧನೆ ಗ್ರಾಮೀಣ ಭಾಗದ ಮಕ್ಕಳಿಗೆ ದೊಡ್ಡ ಪ್ರೇರಣೆ. ಕೀರ್ತಿ ಅವರ ಸುಮಧುರ ಗಾಯನವು ಇಡೀ ಕನ್ನಡಿಗರ ಮನ ಗೆಲ್ಲಲಿ. ಈ ಮಹಾನ್ ವೇದಿಕೆಯಲ್ಲಿ ಅವರು ವಿಜಯಶಾಲಿಯಾಗಿ ಹೊರಹೊಮ್ಮಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ.
ಶುಭವಾಗಲಿ ಕೀರ್ತಿ.. ಆಲ್ ದಿ ಬೆಸ್ಟ್..! :
ಮಧು ಬಂಗಾರಪ್ಪ, ಮಾಜಿ ಸಚಿವರು
ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಗ್ರಾಮೀಣ ಪ್ರತಿಭೆಯೊಂದು ದೊಡ್ಡ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಸಾಧನೆಯ ನಡುವೆ ಮಾಜಿ ಸಚಿವರು ತಮ್ಮೂರ ವಿದ್ಯಾರ್ಥಿನಿಯ ಸಾಧನೆಯನ್ನ ತಮ್ಮ ಜೊತೆಗೆ ಹಂಚಿಕೊಂಡಿರುವುದು ಇನ್ನಷ್ಟು ಸಂತಸದ ಸಂಗತಿಯಾಗಿದೆ.
