ತೀರ್ಥಹಳ್ಳಿ; ಪಟ್ಟಣದ ಮೀನು ಮಾರುಕಟ್ಟೆಯ ಸಾರ್ವಜನಿಕ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಾ, ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಯುವಕನೊಬ್ಬನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಯುವಕನ ವೈದ್ಯಕೀಯ ತಪಾಸಣೆಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು, ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Youth Arrested ಘಟನೆ ವಿವರ
ಜೂನ್ 2 ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ತೀರ್ಥಹಳ್ಳಿ ಟೌನ್ ವ್ಯಾಪ್ತಿಯಲ್ಲಿ ಪೊಲೀಸರು ಕರ್ತವ್ಯದಲ್ಲಿ ನಿರತರಾಗಿದ್ದರು. ಮಧ್ಯಾಹ್ನ 12:15 ರ ವೇಳೆಗೆ ಮೀನು ಮಾರುಕಟ್ಟೆ ರಸ್ತೆಯ ಬಳಿ ವ್ಯಕ್ತಿಯೊಬ್ಬ ಜೋರಾಗಿ ಕಿರುಚಾಡುತ್ತಾ, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದು ಕಂಡುಬಂದಿದೆ. ಆ ಸಮಯದಲ್ಲಿ ಪೊಲೀಸರನ್ನು ನೋಡಿದ ತಕ್ಷಣವೇ ಆತ ಗಾಬರಿಯಿಂದ ಅಲ್ಲಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದ್ದಾರೆ. ಮೇಲಿನ ಕುರುವಳ್ಳಿಯ ನಿವಾಸಿಯಾದ 21 ವರ್ಷದ ಈ ಯುವಕ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದೆ ತಡಬಡಾಯಿಸಿದ್ದಾನೆ. ನಂತರ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ಠಾಣೆಗೆ ಕರೆತಂದಿದ್ದಾರೆ.
ಬಳಿಕ ಆರೋಪಿಯು ಗಾಂಜಾ ಸೇವಿಸಿದ್ದಾನೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ. ಯುವಕನನ್ನು ಪರೀಕ್ಷಿಸಿದ ಕರ್ತವ್ಯ ನಿರತ ವೈದ್ಯರು ಆತ ಗಾಂಜಾ ಸೇವಿಸಿರುವುದನ್ನು ಖಚಿತಪಡಿಸಿ ವರದಿ ನೀಡಿದ್ದಾರೆ. ವೈದ್ಯಕೀಯ ವರದಿ ಲಭ್ಯವಾದ ತಕ್ಷಣ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
