ದಿನಗೂಲಿಗೆ ಹೋದಾಗ, ನೆಲೆಯನ್ನೆ ಉರುಳಿಸಿದ್ರು! ಮಲ್ನಾಡ್​ನಲ್ಲಿ ಮತ್ತೆ ಶುರುವಾಯಿತೆ ಕಾಡಿನ ಕ್ರೌರ್ಯ!?

ಮಲೆನಾಡು ಟುಡೆ ಸುದ್ದಿ / ಹೊಸನಗರ / ಶಿವಮೊಗ್ಗದಲ್ಲಿ ಅರಣ್ಯ ಇಲಾಖೆಗೆ ಅಂಕೆ ಇಲ್ಲವೆ? ಅಥವಾ ಅರಣ್ಯ ವಿಚಾರದಲ್ಲಿಯೇ ದ್ವೇಷ ಮೂಡುತ್ತಿದೆಯೇ? ಗೊತ್ತಿಲ್ಲ. ಆದರೆ ಕಾಡಿನ ಹೆಸರಲ್ಲಿ ಕಡೆಗಣನೆ ಆಗ್ರಿದ್ದ ಬಡವರ ಸೂರನ್ನ ಕಿತ್ತು ಹಾಕುವ ಮನುಷ್ಯನ ಹೃದಯವೊಪ್ಪದ ಕೆಲಸ ಈಗೀಗ ಮತ್ತೆ ಶಿವಮೊಗ್ಗದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತಃ ಘಟನೆಯೊಂದು ವರದಿಯಾಗಿದೆ.

ಮಲ್ನಾಡ್​ನಲ್ಲಿ ಮತ್ತೆ ಶುರುವಾಯಿತೆ ಕಾಡಿನ ಕ್ರೌರ್ಯ!?

ಯಾವುದೇ ಮುನ್ಸೂಚನೆ ನೀಡದೆ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅರಗೋಡಿ ಗ್ರಾಮದ ನಿವಾಸಿ ನಾಗರಾಜ ಎಂಬುವವರಿಗೆ ಸೇರಿದ ಮನೆಯನ್ನು ಅರಣ್ಯ ಅಧಿಕಾರಿಗಳು ಮೇ 28ರಂದು ಸಂಪೂರ್ಣವಾಗಿ ನೆಲಸಮಗೊಳಿಸಿದ್ದಾರೆ. ಒಂದು ಸಣ್​ ಕಾಗದದ ಚೂರು ಸಹ ನೀಡದೇ ಅಡಿಮೇಲು ಮಾಡಿದ್ದಾರೆ ಅನ್ನೋದೇ ಇಲ್ಲಿ ಸಿಟ್ಟಿಗೆ ಕಾರಣ! ಶಿವಮೊಗ್ಗದ ರಾಜಕೀಯ ಜನಪ್ರತಿನಿಧಿಗಳಿಂದ ಹಿಡಿದು, ಸ್ಥಳೀಯ ಪಂಚಾಯಿತಿ ಪುಡಿ ರಾಜಕಾರಣಿಯವರೆಗು ಅರಣ್ಯ ಇಲಾಖೆಯನ್ನು ಜೇಬಿನಲ್ಲಿಟ್ಟುಕೊಂಡೆ ಕಾಡು ಕಡಿದು ಹರಾಜಿಗಿಡುತ್ತಿದ್ದಾರೆ. ಹೀಗಂದ್ರೆ ಹೌದಂತಾ ನಮಗೆ ಕಾಣ್ಲಿಲ್ಲ ಎನ್ನುವ ಅರಣ್ಯ ಇಲಾಖೆಗೆ, ಎರಡು ಕಾಡು ಮರದ ಗಳ ಹಿರಿದು ತಾಡಪಲ್​ ಹಾಕಿ ನೆಲಕ್ಕೆ ಕಾವಿ ಹಾಕಿಕೊಂಡು ನೆರಳು ಆಸರೆ ಅಂತಾ ಮಾಡಿಕೊಂಡರೆ ಕೆಂಡದಂತೆ ಕೋಪ ಬರುತ್ತಿದೆಯಾ?

ವಿಶೇಷ ಅಂದರೆ, ಎಂದಿನಂಥೆ ಈ ಪ್ರಕರಣದಲ್ಲಿಯು ಸಂತ್ರಸ್ತನ ಪರವಾಗಿ ಹೆಚ್ಚು ಜನರು ಬಂದಿಲ್ಲ, ಸಂತ್ರಸ್ತ ಕುಟುಂಬದವರೇ ಸೇರಿಕೊಂಡು ಏಕಾಏಕಿ ವಾಸದ ಮನೆಯನ್ನು ತೆರವುಗೊಳಿಸಿರುವ ಅರಣ್ಯ ಇಲಾಖೆ ವಿರುದ್ಧ ಹೊಸನಗರದ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಕುಳಿತಿದ್ರು. ದಿನವಿಡಿ ದಿಕ್ಕಾರ ಕೂಗಿದ್ರು! ಕೊನೆಗೆ ದಿನದ ಕೂಲಿ ನಡೀಬೇಕು, ಹೊಟ್ಟೆ ಕೂಗು ಆಲಿಸಬೇಕು ಎಂದು ಪ್ರತಿಭಟನೆ ಬರ್ಖಾಸ್ತು ಮಾಡಿದ್ರು.

ಇನ್ನೂ ಸಿಕ್ಕಿರುವ ಮಾಹಿತಿ ಪ್ರಕಾರ, ಸಂತ್ರಸ್ತ ನಾಗರಾಜ, ತಾವು ಕಳೆದ ಹಲವು ದಶಕಗಳಿಂದ ಅರಗೋಡಿ ಗ್ರಾಮದ ಸರ್ವೆ ನಂಬರ್ 7ರ ಸರ್ಕಾರಿ ಜಾಗದಲ್ಲಿ ನೆಲೆಸಿದ್ದೇವೆ ಎನ್ನುತ್ತಾನೆ.. ಗ್ರಾಮ ಪಂಚಾಯಿತಿ ಆಡಳಿತಕ್ಕೆ ನಿಯಮಾನುಸಾರ ಕಂದಾಯ ಪಾವತಿಸುತ್ತಿರುವ ಬಗ್ಗೆ ತಮ್ಮ ಬಳಿ ಅಗತ್ಯ ದಾಖಲೆಗಳಿವೆ. ಅಂದು ತಾವು ನೆಟ್ಟಿದ್ದ ತೆಂಗಿನ ಮರಗಳು ಇಂದು ಫಸಲು ನೀಡುತ್ತಿದ್ದು, ಇದು ತಮ್ಮ ದೀರ್ಘಕಾಲದ ವಾಸಕ್ಕೆ ಪ್ರಬಲ ಸಾಕ್ಷಿಯಾಗಿದೆ. ತಾವು ಯಾವುದೇ ರೀತಿಯ ಹೊಸ ಒತ್ತುವರಿ ಅಥವಾ ಭೂ ಅತಿಕ್ರಮಣವನ್ನು ಮಾಡಿಲ್ಲ ಎನ್ನುತ್ತಿದ್ದಾನೆ.

ದಿನಗೂಲಿಗೆ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡ ಅರಣ್ಯ ಇಲಾಖೆಯ ಸಿಬ್ಬಂದಿ, ಮನೆಯೊಳಗಿದ್ದ ದಿನಬಳಕೆ ವಸ್ತುಗಳು ಹಾಗೂ ಪಾತ್ರೆಗಳನ್ನು ಹೊರಕ್ಕೆ ಬಿಸಾಡಿ ಇಡೀ ಮನೆಯನ್ನು ನೆಲಸಮ ಮಾಡಿದ್ದಾರೆ. ಒಂದು ನೋಟಿಸ್ ನೀಡದೆ, ಯಾವುದೇ ಪೂರ್ವ ಮಾಹಿತಿ ಒದಗಿಸದೆ ಸರ್ಕಾರಿ ರಜಾ ದಿನದಂದು ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಅನ್ಯಾಯದ ಬಗ್ಗೆ ಪ್ರಶ್ನಿಸಲು ಹೋದರೆ ಅರಣ್ಯಾಧಿಕಾರಿಗಳು ತಮ್ಮ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ದಬ್ಬಾಳಿಕೆ ನಡೆಸುತ್ತಿರುವ ಅಧಿಕಾರಿಗಳು ಮಾನವೀಯತೆಯನ್ನೇ ಮರೆತಿದ್ದು, ಮನೆ ಕಳೆದುಕೊಂಡಿರುವ ತಾವು ಬೀದಿಪಾಲಾಗುವಂತಾಗಿದೆ.

ನಾಗರಾಜ್​ , ಮನೆ ಕಳೆದುಕೊಂಡವರು

ಅರಣ್ಯ ಇಲಾಖೆಯ ಈ ಕ್ರಮವನ್ನು ಖಂಡಿಸುವ ಧ್ವನಿಗಳು ಹೆಚ್ಚಾಗಿ ಮಲ್ನಾಡ್​ನಲ್ಲಿ ಕೇಳುತ್ತಿಲ್ಲ. ಇಲ್ಲಿ ಕಾಡಿನ ಕಿವಿಗಳು ಮಾತ್ರ ಮೌನದಲ್ಲಿಯೇ ಪ್ರತಿಭಟಿಸುತ್ತಿವೆ. ಬಾಯಿಮಾತಿನ ಭರವಸೆಗಷ್ಟೆ ನಾಡಿನ ನರನಾಡಿ ಸೀಮಿತವಾಗಿದೆ ಎನ್ನುವುದು ದುರಂತದ ವಿಚಾರ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw