- ದಟ್ಟ ಅರಣ್ಯದಲ್ಲಿ 12ನೇ ಶತಮಾನದ ಶಾಸನ ಶೋಧ
- ಮಲೆನಾಡು ಇತಿಹಾಸ ಅಧ್ಯಯನ ವೇದಿಕೆ ಸಾಧನೆ
- ಭೂದಾನದ ವಿವರಗಳನ್ನೊಳಗೊಂಡ ಬಳಪದ ಕಲ್ಲಿನ ಅಪ್ರಕಟಿತ ಶಾಸನ
ಜಿಲ್ಲೆಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಮಲೆನಾಡು ಇತಿಹಾಸ ಅಧ್ಯಯನ ವೇದಿಕೆಯ ಸದಸ್ಯರು ನಡೆಸುತ್ತಿರುವ ಸಂಶೋಧನೆಯ ಫಲವಾಗಿ, ಉಂಬ್ಳೆಬೈಲು ಸಮೀಪದ ಹುರಳಿಹಳ್ಳಿ ಬಳಿಯ ಬೆಚಿರಾಕ್ ಗ್ರಾಮದ ದಟ್ಟ ಅರಣ್ಯದಲ್ಲಿ ಅಪರೂಪದ ಶಾಸನವೊಂದು ಪತ್ತೆಯಾಗಿದೆ.
ಪೌರಾಣಿಕ ಹಿನ್ನೆಲೆಯುಳ್ಳ ಕೆಳದಿ ಕಾಲದ ಹೆಬ್ಬಂಡೆ ವೀರಭದ್ರ ದೇವಾಲಯದ ಆವರಣದಲ್ಲಿ ಹೊಯ್ಸಳ ಚಕ್ರವರ್ತಿ ವೀರಬಲ್ಲಾಳನ ಕಾಲದ (12ನೇ ಶತಮಾನ) ಶಾಸನವನ್ನು ಶೋಧಿಸಲಾಗಿದೆ. ಈ ಶಾಸನವನ್ನು ಮೃದುವಾದ ‘ಬಳಪದ ಕಲ್ಲಿನ’ (Soapstone) ಮೇಲೆ ಸುಂದರವಾಗಿ ಕೆತ್ತಲಾಗಿದೆ. ಸುಮಾರು 62 ಸೆಂಟಿಮೀಟರ್ ಉದ್ದವಿರುವ ಶಾಸನವು, ಒಟ್ಟು 24 ಸಾಲುಗಳನ್ನು ಒಳಗೊಂಡಿದೆ. ಆದರೆ, ಶಾಸನದ ಬಹುಪಾಲು ಭಾಗವು ಹಾನಿಗೊಳಗಾಗಿದೆ.
ಮಲೆನಾಡು ಇತಿಹಾಸ ಅಧ್ಯಯನ ವೇದಿಕೆ ಸಾಧನೆ
ಶಾಸನದ ಅರ್ಧದಷ್ಟು ಭಾಗವು ಮಣ್ಣಿನಲ್ಲಿ ಹೂತುಹೋಗಿತ್ತು. ಮಲೆನಾಡು ಇತಿಹಾಸ ಅಧ್ಯಯನ ವೇದಿಕೆಯ ಸದಸ್ಯರು ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಶಾಸನವನ್ನು ಅತ್ಯಂತ ಎಚ್ಚರಿಕೆಯಿಂದ ಮೇಲಕ್ಕೆತ್ತಿದ್ದಾರೆ. ತದನಂತರ, ಕಲ್ಲಿನ ಮೇಲಿದ್ದ ಮಣ್ಣು ಹಾಗೂ ಪಾಚಿಯನ್ನು ಸ್ವಚ್ಛಗೊಳಿಸಿ. ವೈಜ್ಞಾನಿಕ ವಿಧಾನಗಳನ್ನು ಬಳಸಿ ಶಾಸನದ ಪ್ರತಿಯನ್ನು ತೆಗೆಯಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಶಾಸನವು ವೀರೇಶ್ವರ ದೇವರಿಗೆ ಭೂದಾನ ನೀಡಿದ ವಿವರಣೆಯನ್ನು ಒಳಗೊಂಡಿದೆ.
ಹೋಯ್ಸಳರ ಕಾಲದ ಅಮೂಲ್ಯ ವಸ್ತು
ಶಾಸನದ ಕುರಿತು ಹೆಚ್ಚಿನ ಅಧ್ಯಯನ ನಡೆಯುತ್ತಿದೆ ಎಂದು ವೇದಿಕೆಯ ಅಧ್ಯಕ್ಷ ಡಾ. ಎಸ್.ಜಿ. ಸಾಮಕ್ ಮಾಹಿತಿ ನೀಡಿದ್ದಾರೆ. ಈ ಐತಿಹಾಸಿಕ ಶೋಧನೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಆದಿತ್ಯ ನಂಜವಳ್ಳಿ, ವೇದಿಕೆಯ ಕಾರ್ಯದರ್ಶಿ ದಿಲೀಪ್ ನಾಡಿಗ್, ಆದಿತ್ಯ ಪ್ರಸಾದ್ ಹಾಗೂ ಸ್ಥಳೀಯರಾದ ರೋಹಿತ್, ಹಿರಿಯಣ್ಣ ಮತ್ತಿತರರು ಸಹಕರಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw