Medical Shops Closed ಶಿವಮೊಗ್ಗ: ಆನ್‌ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆಪ್‍ಗಳ ಮೂಲಕ ನಿಯಮಬಾಹಿರವಾಗಿ ಔಷಧ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ (AIOCD) ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ದೇಶಾದ್ಯಂತ ಪ್ರತಿಭಟನೆಯ ಬಿಸಿ ಇದೀಗ ಶಿವಮೊಗ್ಗಕ್ಕೂ ತಟ್ಟಿದೆ.
Medical Shops Closed ಶಿವಮೊಗ್ಗ ಜಿಲ್ಲಾ ಸಗಟು ಮತ್ತು ಚಿಲ್ಲರೆ ಔಷಧಿ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿ ಇಂದು ಜಿಲ್ಲೆಯಾದ್ಯಂತ 24 ಗಂಟೆಗಳ ಕಾಲಮೆಡಿಕಲ್ ಶಾಪ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ, ಮಾಲೀಕರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ನೂರಾರು ಮೆಡಿಕಲ್ ಶಾಪ್ ಮಾಲೀಕರು, ಕೇಂದ್ರ ಸರ್ಕಾರದ ತಪ್ಪು ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರು ತಕ್ಷಣವೇ ಆನ್‌ಲೈನ್ ಔಷಧ ಮಾರಾಟ ಜಾಲವನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇಂಟರ್ನೆಟ್ ಹಾಗೂ ಮೊಬೈಲ್ ಆಪ್‌ಗಳ ಮೂಲಕ ಕಾನೂನುಬಾಹಿರವಾಗಿ ನಡೆಯುತ್ತಿರುವ ಔಷಧಿಗಳ ಆನ್‌ಲೈನ್ ಮಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ಇವರ ಪ್ರಮುಖ ಆಗ್ರಹವಾಗಿದೆ. ಇದರೊಂದಿಗೆ ದೈತ್ಯ ಕಾರ್ಪೊರೇಟ್ ಮೆಡಿಕಲ್ ಶಾಪ್‌ಗಳು ಹಾಗೂ ಆನ್‌ಲೈನ್ ನೆಟ್‌ವರ್ಕ್‌ಗಳು ಗ್ರಾಹಕರನ್ನು ಸೆಳೆಯಲು ನೀಡುತ್ತಿರುವ ಭಾರಿ ರಿಯಾಯಿತಿಗಳಿಂದಾಗಿ ವರ್ಷಗಳಿಂದ ನಂಬಿ ಬದುಕುತ್ತಿರುವ ಸಾಂಪ್ರದಾಯಿಕ ಹಾಗೂ ಸ್ಥಳೀಯ ಔಷಧಿ ವ್ಯಾಪಾರಿಗಳ ವ್ಯವಹಾರ ನೆಲಕಚ್ಚುತ್ತಿದ್ದು, ಇದಕ್ಕೆ ತಕ್ಷಣ ಬ್ರೇಕ್ ಹಾಕಬೇಕಿದೆ. ಆನ್‌ಲೈನ್‌ನಲ್ಲಿ ಮನಬಂದಂತೆ ಸಿಗುವ ರಿಯಾಯಿತಿಗಳ ಆಮಿಷದಿಂದಾಗಿ ಮಾರುಕಟ್ಟೆಗೆ ಗುಣಮಟ್ಟವಿಲ್ಲದ ಹಾಗೂ ನಕಲಿ ಔಷಧಿಗಳು ಸುಲಭವಾಗಿ ಸರಬರಾಜು ಆಗುತ್ತಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಈ ನಮ್ಮ ಪ್ರತಿಭಟನೆಯು ಯಾವುದೇ ಕಾರಣಕ್ಕೂ ರೋಗಿಗಳ ಅಥವಾ ಸಾರ್ವಜನಿಕರ ವಿರುದ್ಧವಾದುದಲ್ಲ. ಕಾರ್ಪೊರೇಟ್ ಕಂಪನಿಗಳ ಅಬ್ಬರದ ಮಧ್ಯೆ ಸಾಂಪ್ರದಾಯಿಕ ವ್ಯಾಪಾರಿಗಳ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಸರ್ಕಾರದ ತಪ್ಪು ನೀತಿಗಳ ವಿರುದ್ಧ ನಾವು ನಡೆಸುತ್ತಿರುವ ಅನಿವಾರ್ಯ ಹೋರಾಟವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಮಧುಕರ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ವಿವೇಕಾನಂದ ನಾಯಕ್ ಅವರು, ಆನ್‌ಲೈನ್ ಮುಕ್ತ ಮಾರುಕಟ್ಟೆಯಿಂದಾಗಿ ವೈದ್ಯರ ಚೀಟಿ ಇಲ್ಲದೆಯೂ ನಿದ್ರೆ ಬರಿಸುವ ಮಾತ್ರೆಗಳು ಹಾಗೂ ಅಪಾಯಕಾರಿ ಕಾಫ್ ಸಿರಪ್‌ಗಳು ಯುವಜನತೆಯ ಕೈಗೆ ಅತ್ಯಂತ ಸುಲಭವಾಗಿ ಸಿಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಇವುಗಳಿಂದಾಗಿ ಯುವ ಸಮೂಹದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದ್ದು, ಇಡೀ ಯುವ ಪೀಳಿಗೆಯೇ ಹಾದಿ ತಪ್ಪುವಂತಾಗಿದೆ, ಹೀಗಾಗಿ ತಕ್ಷಣವೇ ಇ-ಫಾರ್ಮಸಿ ವ್ಯವಹಾರಕ್ಕೆ ತಡೆಯೊಡ್ಡಬೇಕು ಎಂದು ಅವರು ಒತ್ತಾಯಿಸಿದರು.
ಶಿವಮೊಗ್ಗ ಜಿಲ್ಲೆಯಾದ್ಯಂತ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳಿದ್ದು, ಈ ಪೈಕಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲೇ 600ಕ್ಕೂ ಹೆಚ್ಚು ಅಂಗಡಿಗಳಿವೆ. ಇಂದು ಮುಷ್ಕರದ ಹಿನ್ನೆಲೆಯಲ್ಲಿ ಈ ಎಲ್ಲಾ ಸಾಂಪ್ರದಾಯಿಕ ಅಂಗಡಿಗಳು ಮತ್ತು ಅಪೋಲೊ ಮೆಡಿಕಲ್ ಶಾಪ್‌ಗಳು ಬಂದ್‌ಗೆ ಬೆಂಬಲ ಸೂಚಿಸಿ ಬಾಗಿಲು ಮುಚ್ಚಿದ್ದವು. ಆದಾಗ್ಯೂ, ರೋಗಿಗಳ ತುರ್ತು ಪರಿಸ್ಥಿತಿಯನ್ನು ಪರಿಗಣಿಸಿ ಮೆಡ್ ಪ್ಲಸ್ ಮೆಡಿಕಲ್ ಶಾಪ್‌ಗಳು ಎಂದಿನಂತೆ ತೆರೆದು ಗ್ರಾಹಕರಿಗೆ ಸೇವೆ ನೀಡಿದವು. ಇದರೊಂದಿಗೆ ಸರ್ಕಾರದ ಉಚಿತ ಹಾಗೂ ಕಡಿಮೆ ದರದ ಜನೌಷಧ ಕೇಂದ್ರಗಳು ಮತ್ತು ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಒಳಗಿರುವ ಔಷಧಿ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದರಿಂದ ತುರ್ತು ಅಗತ್ಯ ಇರುವವರು ಈ ಔಷಧ ಕೇಂದ್ರಗಳನ್ನು ಅವಲಂಬಿಸುವಂತಾಯಿತು.
Medical Shops Closed Against E-Pharmacies
