ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದ ಫ್ಲೈ91 (Fly91) ವಿಮಾನ, ನಿನ್ನೆ ದಿನದ ಪ್ರಯಾಣಿಕರ ಜೀವವನ್ನ ಬಾಯಿಗೆ ಬರಿಸಿತ್ತು. ಏಕೆಂದರೆ, ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ವಿಮಾನ ಬರೋಬ್ಬರಿ 4 ಗಂಟೆ ಆಕಾಶದಲ್ಲಿಯೇ ಗಿರಕಿ ಹೊಡೆದಿದೆ. ಅಂತಿಮವಾಗಿ ವಿಮಾನವನ್ನು ಬೆಂಗಳೂರಿಗೆ ತಿರುಗಿಸಿ, ಸುರಕ್ಷಿತವಾಗಿ ಇಳಿಸುವ ಮೂಲಕ ಸಂಭಾವ್ಯ ವಿಮಾನಯಾನ ದುರಂತವೊಂದನ್ನು ತಪ್ಪಿಸಲಾಗಿದೆ.
ಆಕಾಶದಲ್ಲೆ 4 ಗಂಟೆ ಸುತ್ತಿದ ವಿಮಾನ
ನಿನ್ನೆ ಭಾನುವಾರ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಫ್ಲೈ91 ಏರ್‌ಲೈನ್ಸ್‌ನ ಎಟಿಆರ್ ಟರ್ಬೊಪ್ರಾಪ್ (AT7) ಐಸಿ3401 (IC3401) ವಿಮಾನ ಸಂಜೆ 4:30 ರ ಸುಮಾರಿಗೆ ಹುಬ್ಬಳ್ಳಿಯನ್ನು ತಲುಪಬೇಕಿತ್ತು.
ಆದರೆ, ವಿಮಾನ ನಿಗದಿತ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಪೈಲಟ್‌ಗಳಿಗೆ ತಾಂತ್ರಿಕ ದೋಷವಿರುವುದು ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಮಾಡಬೇಕಿದ್ದ ಭೂಸ್ಪರ್ಶವನ್ನು ತಕ್ಷಣವೇ ರದ್ದುಗೊಳಿಸಲಾಯಿತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ವಿಮಾನವನ್ನ ಆಕಾಶದಲ್ಲಿಯೇ ಸುತ್ತಾಡಿಸಲಾಯ್ತು. ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿಯೇ ಓಡಾಡಿದ ವಿಮಾನ 4 ಗಂಟೆಗಳ ಕಾಲ ಆಗಸದಲ್ಲಿಯೇ ಸುತ್ತು ಹೊಡೆದಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
ಪರಿಣಾಮ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಭಯಭೀತರಾಗಿದ್ದರು. ಹಲವರು ಪ್ರಾರ್ಥನೆಯಲ್ಲಿ ತೊಡಗಿದರೆ, ಇನ್ನು ಕೆಲವರು ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು. ಅಂತಿಮವಾಗಿ ವಿಮಾನದ ರೂಟ್ ಬದಲಿಸಿ ಸಂಜೆ 7:30 ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು.
ಘಟನೆಯ ದೃಶ್ಯಗಳನ್ನು ಈ ಮಲೆನಾಡು ಟುಡೆಯ ವಿಡಿಯೊಗಳಲ್ಲಿ ನೋಡಬಹುದು : ಗಮನಿಸಿ
