ಶಿವಮೊಗ್ಗ : ಜಗಜ್ಯೋತಿಶ್ರೀ ಬಸವೇಶ್ವರರ ಜಯಂತಿಯ ಅಂಗವಾಗಿ ಏಪ್ರಿಲ್ 20 ರಂದು ಶಿವಮೊಗ್ಗ ನಗರದಲ್ಲಿ ಅದ್ಧೂರಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ಬಸವೇಶ್ವರ ವೀರಶೈವ ಲಿಂಗಾಯುತ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್ ತಿಳಿಸಿದ್ದಾರೆ. ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸರ್ಕಾರದ ಸಹಯೋಗದೊಂದಿಗೆ ಸಮಾಜವು ಅತ್ಯಂತ ಸಂಭ್ರಮದಿಂದ ಕಾರ್ಯಕ್ರಮ ರೂಪಿಸಿದೆ ಎಂದು ಮಾಹಿತಿ ನೀಡಿದರು.
ಇವತ್ತು ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು ಇ-ಪೇಪರ್ ಓದಿ
ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಬರುತ್ತಿದ್ದ ಬಸವ ಜಯಂತಿಯು ಈ ಬಾರಿ ಏಪ್ರಿಲ್‌ನಲ್ಲೇ ಬಂದಿದ್ದು, ಸಂಘಟನೆಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಂದು ಸಂಜೆ 4 ಗಂಟೆಗೆ ನಗರದ ಶ್ರೀ ಬಸವೇಶ್ವರ ದೇವಸ್ಥಾನದಿಂದ ರಾಜಬೀದಿ ಉತ್ಸವ ಆರಂಭವಾಗಲಿದೆ. ಈ ಮೆರವಣಿಗೆಯು ಗಾಂಧಿಬಜಾರ್, ನೆಹರೂ ರಸ್ತೆ, ಗೋಪಿ ವೃತ್ತ ಹಾಗೂ ಮಹಾವೀರ ವೃತ್ತದ ಮೂಲಕ ಸಾಗಿ ಬಸವೇಶ್ವರ ವೃತ್ತ ತಲುಪಲಿದೆ. ಅಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆಯು ಕುವೆಂಪು ರಂಗಮಂದಿರದಲ್ಲಿ ಅಂತ್ಯಗೊಳ್ಳಲಿದೆ.
ಈ ಬಾರಿಯ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿ 20ಕ್ಕೂ ಹೆಚ್ಚು ಅಲಂಕೃತ ಎತ್ತಿನ ಗಾಡಿಗಳು ಹಾಗೂ ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿವೆ. ಜಾನಪದ ಕಲೆಗಳ ವೈಭವದೊಂದಿಗೆ ಬಸವಣ್ಣನವರ ತತ್ವಗಳನ್ನು ಸಾರುವ ಈ ಉತ್ಸವವು ನಗರದ ಜನತೆಗೆ ವಿಶೇಷ ಅನುಭವ ನೀಡಲಿದೆ. ಸಮಾಜದ ಸರ್ವ ಸದಸ್ಯರು ಹಾಗೂ ಭಕ್ತಾದಿಗಳು ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮವನ್ನು ಚಿಕ್ಕಮಗಳೂರಿನ ಶ್ರೀ ಬಸವತತ್ವ ಪೀಠದ ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಸಿದ್ಧ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್ ವಹಿಸಲಿದ್ದು, ನಾಡಿನ ಗಣ್ಯರು ಹಾಗೂ ಬಸವಾನುಯಾಯಿಗಳು ಈ ಪವಿತ್ರ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
Basava Jayanti 2026 Grand Procession and Event

