ನಾವು ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ವಸ್ತುಗಳನ್ನು ಖರೀದಿಸಲು ನೂರಾರು ರೂಪಾಯಿಗಳ ವಹಿವಾಟು ನಡೆಸುತ್ತೇವೆ. ನಮ್ಮ ಪರ್ಸ್ನಲ್ಲಿರುವ 100, 200 ಅಥವಾ 500 ರೂಪಾಯಿಗಳ ನೋಟುಗಳನ್ನು ನಾವು ಸಾವಿರಾರು ಬಾರಿ ನೋಡಿರುತ್ತೇವೆ. ಆದರೆ, ಈ ನೋಟುಗಳ ಅಂಚಿನಲ್ಲಿರುವ ಆ ಓರೆಯಾದ ಗೆರೆಗಳನ್ನು ಎಂದಾದರೂ ಗಮನಿಸಿದ್ದೀರಾ? ಅವುಗಳನ್ನು ಸುಮ್ಮನೆ ಡಿಸೈನ್ಗಾಗಿ ಮಾಡಿಲ್ಲ ಅದರ ಹಿಂದೆ ಒಂದು ಪ್ರಮುಖವಾದ ಉದ್ದೇಶವಿದೆ.
ಒಮ್ಮೆ ನಿಮ್ಮ ಬಳಿ ಇರುವ 100 ರೂಪಾಯಿ ನೋಟನ್ನು ತೆಗೆದು ನೋಡಿ ಅದರ ಎರಡು ಬದಿಗಳಲ್ಲಿ ನಾಲ್ಕು ಓರೆ ಗೆರೆಗಳು ಕಾಣಿಸುತ್ತವೆ. ಅದೇ ರೀತಿ 200 ರೂಪಾಯಿ ನೋಟಿನಲ್ಲಿ ನಾಲ್ಕು ಗೆರೆಗಳ ನಡುವೆ ಎರಡು ಸಣ್ಣ ವೃತ್ತಗಳಿವೆ. ಇನ್ನು 500 ರೂಪಾಯಿ ನೋಟನ್ನು ಗಮನಿಸಿದರೆ, ಅದರ ಅಂಚಿನಲ್ಲಿ ಐದು ಓರೆ ಗೆರೆಗಳಿರುವುದನ್ನು ನೀವು ಕಾಣಬಹುದು. ಇಂದಿನವರೆಗೂ ನಾವು ಇವುಗಳನ್ನು ಕೇವಲ ಒಂದು ಡಿಸೈನ್ ಎಂದು ಭಾವಿಸಿರಬಹುದು.
ಈ ಗೆರೆಗಳು ಏಕೆ ಇವೆ?
ನೋಟುಗಳ ಮೇಲಿರುವ ಈ ವಿಶೇಷ ಗೆರೆಗಳನ್ನು ಬ್ಲೀಡ್ ಮಾರ್ಕ್ಸ್ ಎಂದು ಕರೆಯಲಾಗುತ್ತದೆ. ಇವುಗಳನ್ನು ಮುಖ್ಯವಾಗಿ ದೃಷ್ಟಿಹೀನರಿಗಾಗಿ ವಿನ್ಯಾಸಗೊಳಿಸಲಾಗಿದೆ. ದೃಷ್ಟಿ ದೋಷವುಳ್ಳವರು ನೋಟುಗಳನ್ನು ನೋಡಲು ಸಾಧ್ಯವಾಗದಿದ್ದರೂ, ಅಂಚಿನಲ್ಲಿರುವ ಈ ಗೆರೆಗಳನ್ನು ಸ್ಪರ್ಶಿಸುವ (Touch) ಮೂಲಕ ಅದು ಎಷ್ಟು ರೂಪಾಯಿಯ ನೋಟು ಎಂಬುದನ್ನು ಸುಲಭವಾಗಿ ಗುರುತಿಸಬಹುದು. ಹಣದ ವ್ಯವಹಾರದಲ್ಲಿ ದೃಷ್ಟಿಹೀನರು ವಂಚನೆಗೆ ಒಳಗಾಗಬಾರದು ಎಂಬ ಮಾನವೀಯ ಕಾಳಜಿಯಿಂದ ಆರ್ ಬಿ ಐ (RBI) ಈ ವಿಶೇಷ ವ್ಯವಸ್ಥೆಯನ್ನು ಜಾರಿಗೆ ತಂದಿದೆ
ನಮ್ಮ ದೈನಂದಿನ ಜೀವನದಲ್ಲಿ ನಾವು ಪ್ರತಿದಿನ ನೋಡುವ ಇಂತಹ ಸಣ್ಣ ಸಂಗತಿಗಳ ಹಿಂದೆಯೇ ದೊಡ್ಡ ಅರ್ಥವಿರುತ್ತದೆ.

Secret of Slant Lines on Indian Currency Notes
