ಶಿವಮೊಗ್ಗ: ಶಿವಮೊಗ್ಗ: ಶಿವಮೊಗ್ಗದ ಕೋಟೆ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಜಾತ್ರೆಯು ಫೆಬ್ರವರಿ 24 ರಿಂದ 28 ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ ಎಂದು ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಹಾಗೂ ಕಾರ್ಯದರ್ಶಿ ಎನ್. ಮಂಜುನಾಥ್ ಮಾಹಿತಿ ನೀಡಿದ್ದಾರೆ.
Kote Marikamba Jathre ಚಿನ್ನದ ಮುಖವಾಡ ಮತ್ತು ವಿಶೇಷ ಅಲಂಕಾರ
ಈ ಬಾರಿಯ ಜಾತ್ರೆಯ ವಿಶೇಷ ಆಕರ್ಷಣೆಯಾಗಿ ದೇವಿಗೆ ಸುಮಾರು 1.6 ಕೆಜಿ ತೂಕದ ನೂತನ ಬಂಗಾರದ ಮುಖಕವಚವನ್ನು ಮಾಡಿಸಲಾಗಿದೆ. ಇದರೊಂದಿಗೆ 16 ಕೆಜಿ ತೂಕದ ಬೆಳ್ಳಿಗೌರಿ ವಿಗ್ರಹ ಮತ್ತು 20 ಅಡಿ ಎತ್ತರದ ಭವ್ಯ ಕಾಳಿ ಅಲಂಕಾರ ಭಕ್ತರ ಕಣ್ಮನ ಸೆಳೆಯಲಿದೆ. ಬಿ.ಎಚ್. ರಸ್ತೆ ಮತ್ತು ಗಾಂಧಿ ಬಜಾರ್ನಲ್ಲಿ ಸುಸಜ್ಜಿತ ಜರ್ಮನ್ ಟೆಂಟ್ಗಳು ಹಾಗೂ ಆಕರ್ಷಕ ಮಹಾದ್ವಾರಗಳನ್ನು ನಿರ್ಮಿಸಲಾಗುತ್ತಿದ್ದು, ನಗರವಿಡೀ ವಿದ್ಯುತ್ ದೀಪಗಳಿಂದ ಝಗಮಗಿಸಲಿದೆ.
ಜಾತ್ರೆಯ ಪ್ರಮುಖ ವಿಧಿವಿಧಾನಗಳು
ಫೆಬ್ರವರಿ 24 : ಮುಂಜಾನೆ 5 ಗಂಟೆಗೆ ಗಾಂಧಿ ಬಜಾರ್ನಲ್ಲಿ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ನಾಡಿಗರ ಕುಟುಂಬದವರಿಂದ ಪೂಜೆ ಮತ್ತು ವಿಶ್ವಕರ್ಮ ಸಮಾಜದವರಿಂದ ಮಾಂಗಲ್ಯ ಧಾರಣೆ ನಡೆದ ಬಳಿಕ ಸಾರ್ವಜನಿಕ ದರ್ಶನ ಆರಂಭವಾಗಲಿದೆ.
ರಾತ್ರಿ 9 ಗಂಟೆಗೆ ಉಪ್ಪಾರ ಸಮಾಜದವರಿಂದ ರಥೋತ್ಸವ, ಬುಧವಾರ ಮುಂಜಾನೆ ಹರಿಜನ ಸಮಾಜದವರಿಂದ ಬೇವಿನುಡುಗೆ ಸೇವೆ, ನಂತರ ಕುರುಬ, ವಾಲ್ಮೀಕಿ ಮತ್ತು ಮಡಿವಾಳ ಸಮಾಜದವರಿಂದ ನಿಗದಿತ ಸಮಯದಲ್ಲಿ ವಿಶೇಷ ಪೂಜೆಗಳು ಸಲ್ಲಿಕೆಯಾಗಲಿವೆ.
ಫೆಬ್ರವರಿ 28 ರಂದು : ಸಂಜೆ 6:30ಕ್ಕೆ ಮಹಾಮಂಗಳಾರತಿ ನಡೆದು, 7 ಗಂಟೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ದೇವಿಯ ಅದ್ದೂರಿ ರಾಜಬೀದಿ ಉತ್ಸವ ಜರುಗಲಿದೆ. ಮಧ್ಯರಾತ್ರಿ ಮಡಿವಾಳ ಸಮಾಜದವರಿಂದ ದೇವಿಯ ವನ ಪ್ರವೇಶದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ
ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಲು ಮಾರ್ಚ್ 6 ರಿಂದ 8 ರವರೆಗೆ ನೆಹರೂ ಕ್ರೀಡಾಂಗಣದಲ್ಲಿ ಬೃಹತ್ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ರಾಜ್ಯ ಮತ್ತು ಅಂತರರಾಜ್ಯ ಮಟ್ಟದ ಖ್ಯಾತ ಪೈಲ್ವಾನರು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ವಿಶೇಷವೆಂದರೆ, ಸಮಿತಿಯು ಸಾರ್ವಜನಿಕರಿಂದ ಯಾವುದೇ ಚಂದಾ ಅಥವಾ ವಂತಿಗೆ ಸಂಗ್ರಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
Kote Marikamba Jathre 2026 Schedule

