ಆಯನೂರಿನಿಂದ ಅಮೃತಸರಕ್ಕೆ ಹೋಗಿದ್ದ ಶುಂಠಿ ಲಾರಿ ನಾಪತ್ತೆ! ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಬಂತು ವಿಡಿಯೋ! ವ್ಯಾಪಾರಸ್ಥರೇ ಎಚ್ಚರ!

SHIVAMOGGA NEWS / Malenadu today/ Nov 27, 2023 | Malenadutoday.com  

SHIVAMOGGA   |  ಜಿಲ್ಲೆಯಲ್ಲಿ ಶುಂಠಿ ಹಾಗೂ ಅಡಿಕೆ ಯನ್ನು ಮಾರಾಟ ಮಾಡಿ ಲಾಭಗಳಿಸುವಷ್ಟರಲ್ಲಿ ಜನರು ಕೆಲವೊಮ್ಮೆ ಹೈರಾಣಾಗುತ್ತಾರೆ. ಒಂದೋ ತೋಟದಲ್ಲಿರುವ ಮರದಿಂದಲೇ ಹಸಿ ಅಡಿಕೆಯನ್ನ ಕದ್ದೊಯ್ದ ಘಟನೆಗಳು ನಡೆಯುತ್ತವೆ. ಇಲ್ಲವೇ ಸಂಗ್ರಹಿಸಿಟ್ಟ ಶುಂಠಿ ಚೀಲಗಳು ಇದ್ದಕ್ಕಿದ್ದ ಹಾಗೆ ಕಳ್ಳತನವಾಗುತ್ತವೆ. ಇಂತಹ ಘಟನೆಗಳು ಈ ಸಮಯದಲ್ಲಿ ಮಾಮೂಲಿನಂತಾಗಿದ್ದು, ಶುಂಠಿ ಹಾಗೂ ಅಡಿಕೆಯನ್ನು ಕಾಯವುದೇ ಭಯಂಕರ ಕೆಲಸವಾಗಿದೆ. 

ಇದಕ್ಕೆ ಸಾಕ್ಷಿ ಎಂಬಂತೆ ಶುಂಠಿಯನ್ನ ಲಾರಿಯಲ್ಲಿ ತುಂಬಿಸಿ ಅಮೃತಸರಕ್ಕೆ ಕಳುಹಿಸಿಟ್ಟ ವ್ಯಕ್ತಿಗೆ ಅಲ್ಲಿಂದ ವಾಟ್ಸ್ಯಾಪ್​ನಲ್ಲೊಂದು ಶಾಕಿಂಗ್ ನ್ಯೂಸ್ ಬಂದ ಘಟನೆ ನಡೆದಿದೆ. ಘಟನೆ ಬಗ್ಗೆ ತಡವಾಗಿ ವಿಚಾರ ಬೆಳಕಿಗೆ ಬಂದಿದೆ. ಆಯನೂರು ಮೂಲದ ಶುಂಠಿ ವ್ಯಾಪಾರಸ್ಥರೊಬ್ಬರು ಎಲ್ಲಾ ಕಡೆಗಳಿಂದ ಶುಂಠಿ ಖರೀದಿಸಿ ಸುಮಾರು 180 ಕ್ವಿಂಟಾಲ್ ಒಟ್ಟು ಮಾಡಿದ್ದರು. ಅದನ್ನು ಅವರು ಪಂಜಾಬ್​ ನ ಸಂಸ್ಥೆಯೊಂದಕ್ಕೆ ಮಾರುವವರಿದ್ದರು. 

READ :ಬಂಡೀಪುರದಲ್ಲಿ ಹುಲಿ ಹಿಡಿಯಲು ಶಿವಮೊಗ್ಗದಿಂದ ಟ್ರ್ಯಾಪ್​ ಕೇಜ್ ಶಿಫ್ಟ್ | ಉಂಬ್ಳೆ ಬೈಲ್​ನಲ್ಲಿ ಶುರುವಾಯ್ತು ವ್ಯಾಘ್ರ ಆತಂಕ!

ಇದಕ್ಕಾಗಿ ಬೆಂಗಳೂರು ಮೂಲದ ಟ್ರಾನ್ಸಫೋರ್ಟ್ ಕಂಪನಿಯೊಂದರಲ್ಲಿ ಲಾರಿ ಬುಕ್ ಮಾಡಿದ್ದರು. ನಿಗದಿಯಂತೆ ಶಿವಮೊಗ್ಗದಿಂದ ಶುಂಠಿ ತುಂಬಿಕೊಂಡು ಹೊರಟ ಲಾರಿ ಅಮೃತಸರಕ್ಕೆ ಹೋಗುವವರೆಗೂ ಎಲ್ಲವೂ ನೀಟಾಗಿತ್ತು. ಅಲ್ಲಿಯವರೆಗೂ ಫೋನ್ ಸಂಪರ್ಕದಲ್ಲಿದ್ದ ಲಾರಿ ಚಾಲಕ,ಆನಂತರ ಸ್ವಿಚ್ ಆಫ್ ಮಾಡಿಕೊಂಡಿದ್ದ.. 

ಈ ಮಧ್ಯೆ ಶುಂಠಿ ವರ್ತಕರ ಗ್ರೂಪ್​ಗೆ ಪಂಜಾಬ್​ನಲ್ಲಿ ಕೆಜಿಗೆ 50 ರೂಪಾಯಿಯಂತೆ ಲಾರಿಯಿಂದ ಶುಂಠಿ ಮಾರುತ್ತಿರುವ ಬಗ್ಗೆ ವಾಟ್ಸ್ಯಾಪ್​ ವಿಡಿಯೋ ವೊಂದು ಶೇರ್ ಆಗಿದೆ. ಇದನ್ನ ನೋಡಿ ಗಾಬರಿಬಿದ್ದ ಶುಂಠಿ ವರ್ತಕ ನೇರವಾಗಿ ಕುಂಸಿ ಪೊಲೀಸ್ ಸ್ಟೇಷನ್​ಗೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು IPC 1860 (U/s-34,407,409) ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ 

Leave a Comment