SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 21, 2025
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೆಹಳ್ಳಿ ಗ್ರಾಮದ ಸುತ್ತಮುತ್ತಲ ಜನರಲ್ಲಿ ಭೀತಿ ಹುಟ್ಟಿಸಿದ ಕಾಡಾನೆ ವಿಕ್ರಾಂತ್, ರೈತರ ಹೊಲಗದ್ದೆಗಳಿಗೆ ಘೀಳಿಡುತ್ತಿತ್ತು. ಓರ್ವ ವೃದ್ದೆಯನ್ನು ಬಲಿಪಡೆದಿದ್ದ, ವಿಕ್ರಾಂತ್ ವಾಹನ ಸವಾರರಲ್ಲಿ ಆತಂಕ ಮೂಡಿಸಿತ್ತು. ಎರಡು ವರ್ಷಗಳಿಂದ ನಿರಂತರ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಸೆರೆ ಹಿಡಿಯಬೇಕೆಂದು ಸ್ಥಳಿಯರಿಂದ ಒತ್ತಡ ಹೆಚ್ಚಿತ್ತು. ಈ ಹಿನ್ನಲೆ ಸರ್ಕಾರ ಕಾಡಾನೆ ವಿಕ್ರಾಂತ್ ನನ್ನು ಸೆರೆಹಿಡಿಯಲು ಅನುಮತಿ ನೀಡಿತ್ತು. ಕುಮ್ಕಿ ಆನೆಗಳ ಸಹಾಯದಿಂದ ವಿಕ್ರಾಂತ್‌ನನ್ನು ಸೆರೆಹಿಡಿಯಲಾಯಿತು. ಸೆರೆಹಿಡಿದ ಕಾಡಾನೆ ಪುಂಡತನ ಹೊಂದಿದ್ದರಿಂದ ಪುನಃ ಕಾಡಿಗೆ ಬಿಟ್ಟರೆ ತೊಂದರೆ ಎನ್ನುವ ಕಾರಣಕ್ಕೆ ಶಿವಮೊಗ್ಗದ ಸಕ್ರೆಬೈಲಿಗೆ ಸ್ಥಳಾಂತರಿಸಲು ಅರಣ್ಯಾಧಿಕಾರಿಗಳು ನಿರ್ಧರಿಸಿದರು. ರಾತ್ರಿ ಸುಮಾರು 12 ಗಂಟೆಯ ಹೊತ್ತಿಗೆ ವಿಕ್ರಾಂತ್ ಹೊತ್ತ ಆನೆ ಕ್ಷಿಪ್ರ ಪಡೆ ವಾಹನ ಸಕ್ರೆಬೈಲಿನ ಕ್ರಾಲ್‌ಗೆ ಬಂದಿತು. ಈಗಾಗಲೇ ಕ್ರಾಲ್ ಇರುವ ಸ್ಥಳವನ್ನು ನಿರ್ಭಂದಿತ ಪ್ರದೇಶವಾಗಿ ಅಧಿಕಾರಿಗಳು ಘೋಷಿಸಿದ್ದಾರೆ. ಮಾಧ್ಯಮಗಳು ಹಾಗು ಸಾರ್ವಜನಿಕರಿಗೆ ಪ್ರವೇಶ ನಿಷೇದಿಸಲಾಗಿದ್ದು, ಗೇಟ್ ನ್ನು ಹಾಕಲಾಗಿದೆ.
ತಡರಾತ್ರಿ ಸೇರಿತ್ತು ಜನಸಾಗರ
ವಿಕ್ರಾಂತ್ ಕಾಡಾನೆ ಸಕ್ರೆಬೈಲು ಕ್ರಾಲ್ ಬಳಿ ಬರುತ್ತಿದ್ದಂತೆ ನೂರಾರು ಜನರು ಜಮಾಯಿಸಿದ್ದರು. ಮೊಬೈಲ್‌ಗಳ ಟಾರ್ಚ್‌ಗಳು ರಾರಾಜಿಸತೊಡಗಿದವು. ಕಾಡಾನೆಯನ್ನು ಲಾರಿಯಿಂದ ಕ್ರಾಲ್‌ಗೆ ಹಾಕುವುದು ಎಂದರೆ ಅದು ಮಾವುತ ಕಾವಾಡಿಗಳಿಗೆ ಸವಾಲಿನ ಕೆಲಸ. ಕಗ್ಗತ್ತಲ ರಾತ್ರಿಯಲ್ಲಿ ಇಲ್ಲಿ ಬೆಳಕಿನ ವ್ಯವಸ್ಥೆಯನ್ನು ಕೂಡ ಮಾಡಿರಲಿಲ್ಲ. ಕೇವಲ ಟಾರ್ಚ್‌ಗಳ ಸಹಾಯದಿಂದ ಮಾವುತರು ಕಾಡಾನೆಯನ್ನು ಕ್ರಾಲ್‌ಗೆ ಹಾಕುವ ಪರಿಸ್ಥಿತಿ ಎದುರಾಯಿತು. ಜನರು ಕಾಡಾನೆಯಿದ್ದ ಸ್ಥಳದ ಹತ್ತಿರವೇ ಜಮಾಯಿಸಿದ್ರು. ಕತ್ತಲ ರಾತ್ರಿಯಾಗಿದ್ದರಿಂದ ಅರಣ್ಯ ಅಧಿಕಾರಿ ಹಾಗು ಸಿಬ್ಬಂದಿಗಳಿಗೆ ನಿಯಂತ್ರಿಸಲು ಕಷ್ಟಸಾಧ್ಯವಾಯಿತು. ಒಂದು ಕಾಡಾನೆಯನ್ನು ಹಾಸನದಿಂದ ಶಿವಮೊಗ್ಗಕ್ಕೆ ಕರೆತರುವಾಗ ರಾತ್ರಿಯಾಗುತ್ತದೆ ಎಂದು ಗೊತ್ತಿದ್ದರೂ, ಕ್ರಾಲ್ ಬಳಿ ಬೆಳಕಿನ ವ್ಯವಸ್ಥೆ ಸರಿಯಾಗಿ ಮಾಡದಿರುವುದು ನಿರ್ಲಕ್ಷ್ಯವಲ್ಲದೆ ಮತ್ತೇನು ಅಲ್ಲ
ಕಾರ್ಯಾಚರಣೆಯಲ್ಲಿ ಲಾರಿ ಚಾಲಕನ ಕೈಬೆರಳು ಕಟ್
ಇನ್ನು ಕಾಡಾನೆಯನ್ನು ಲಾರಿಯಿಂದ ಕೆಳಗಿಸುವ ಸಂದರ್ಭದಲ್ಲಿ ಲಾರಿ ಚಾಲಕ ಚೈನ್ ಕಳಚುದ್ದ ಸಂದರ್ಭದಲ್ಲಿ ಎಡವಟ್ಟು ಆಗಿದೆ. ದಿಢೀರ್ ಆಗಿ ಕಾಡಾನೆ ಕಾಲಿನಿಂದ ಚೈನ್ ಎಳೆದ ಪರಿಣಾಮ, ಲಾರಿ ಚಾಲಕನ ಕೈಬೆರಳಿನ ತುದಿಭಾಗ ಕಟ್ ಆಗಿದೆ. ತಕ್ಷಣ ಆತನನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಡಾನೆಯನ್ನು ಕ್ರಾಲ್‌ಗೆ ಹಾಕುವಾಗ ತುಂಬಾ ಜವಬ್ದಾರಿತನ ಮೆರೆಯಬೇಕಾಗುತ್ತದೆ. ಸಾವಿರಾರು ಜನರ ನಡುವೆ ಆನೆಯನ್ನು ಕ್ರಾಲ್‌ಗೆ ಹಾಕುವ ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಕಾಡಾನೆಯಾಗಲಿ ಕುಮ್ಕಿ ಆನೆಗಳಾಗಲಿ ಜನರ ಮೇಲೆ ಎರಗಿದರೆ, ಅದರಿಂದಾಗುವ ಸಾವುನೋವಿಗೆ ಹೊಣೆಯಾರು. ಕಾರ್ಯಾಚರಣೆಯಲ್ಲಿ ಮಾಧ್ಯಮಗಳು ಹುಳಕನ್ನೇ ಹುಡುಕುತ್ತಾರೆ ಎಂಬ ಕಾರಣಕ್ಕೆ ಪ್ರವೇಶ ನಿರ್ಭಂಧಿಸಿರುವಾಗ ಎಲ್ಲರಿಗೂ ಒಂದೇ ನ್ಯಾಯ ಇರಬೇಕಲ್ಲವೆ. ಇದಕ್ಕೆ ಉತ್ತರಿಸುವವರು ಯಾರು.
SUMMARY | Thousands of people take part in the operation to put the wild elephant crawling
KEYWORDS | elephant crawling, sakrebailu, shivamogga,
