SHIVAMOGGA NEWS TODAY

ಶಿವಮೊಗ್ಗಕ್ಕೆ ಬಂದಿವೆಯಾ ರೌಡಿ ಫೀಲ್ಡ್​ನ ಹೊಸ ಮುಖಗಳು! ಕೋಕಾ ಕೇಸ್​ & ಸುಲಿಗೆ ಮತ್ತು ಪಾತಕ ಲೋಕದ ಮಾತುಗಳು!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ / ರೌಡಿಸಮ್​ಗೂ ಶಿವಮೊಗ್ಗಕ್ಕೂ ಒಂಥರ ಅಲೌಕಿಕ ನಂಟು, ಲಾಗಾಯ್ತಿನಿಂದಲೂ ಶಿವಮೊಗ್ಗ ಅಂಡರ್​ವರ್ಲ್ಡ್​ ತುಂಗಾನದಿಯಂತೆ ನಿರಂತರವಾಗಿದೆ. ಕೆಲವೊಮ್ಮೆ ತಳದೊಳಗೆ ಸುಳಿಯಾಗಿ, ಮತ್ತೆ ಕೆಲವೊಮ್ಮೆ ಮಳೆ ನೀರಿನ ಹೊಳೆಯಂತೆ, ಇನ್ನೂ ಕೆಲವೊಮ್ಮೆ ಸೂಕ್ಷ್ಮತೆಯ ಕೆರಳಿಸುವ ಪ್ರವಾಹವಾಗಿ ಶಿವಮೊಗ್ಗ ರೌಡಿಸಂ ಇಲ್ಲಿನ ಆಗುಹೋಗುಗಳಿಗೆ ಕಾರಣವಾಗುತ್ತಲೇ ಇದೆ. ಇಲ್ಲಿಗೆ ಬರುವ ಪ್ರತಿ ದೊಡ್ಡ ಅಧಿಕಾರಿಯು ಇಲ್ಲಿನ ಪಾತಕಲೋಕದ ಅರಿವು ಹಾಗೂ ಸುಳಿವನ್ನೆರಡು ಅರಿತುಕೊಂಡೇ ಬರುತ್ತಾರೆ. ಅಷ್ಟರಮಟ್ಟಿಗೆ ಶಿವಮೊಗ್ಗದ ಒಳದುನಿಯಾ ಸ್ಟ್ರಾಂಗ್ ಆಗಿದೆ.

ಪಾತಕ ಲೋಕದ ಮಾತುಗಳು

ಆದರೆ ಇತ್ತೀಚೆಗೆ ಈ ಪಾತಕಲೋಕದ ಮಾತುಗಳು ಪೊಲೀಸ್ ಇಲಾಖೆಯ ಸ್ಟೇಷನ್​ಗಳಿಗೆ ತಲುಪಿದರೂ, ಕೇಂದ್ರ ಕಚೇರಿಯನ್ನು ತಲುಪುತ್ತಿಲ್ಲವೆ ಎಂಬುದೊಂದು ಸಣ್ಣ ಅನುಮಾನವಿದೆ. ಈ ಸಂಶಯಕ್ಕೆ ಕಾರಣವಾಗಿರುವುದು ನಗರದಲ್ಲಿ ಅಪರಾಧ ಚಟುವಟಿಕೆಯು ಕಾನೂನು ಮೀರಿ ನಡೆಯುತ್ತಿರುವುದು ಶಿವಮೊಗ್ಗ ನಗರದಲ್ಲಿ ರೌಡಿಸಂ ಮತ್ತೆ ಆಕ್ಟೀವ್ ಆಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದೆ.ಅಪರಾಧ ಲೋಕವೂ ಮೌನ ಮುರಿದಾಗಲೆಲ್ಲಾ ಮಲೆನಾಡು ಟುಡೆ ಅದರಾಳಕ್ಕೆ ಇಳಿದು ವರದಿ ಮಾಡಿದೆ. ಸ್ಕೆಚ್ಚು, ಫೀಲ್ಡು, ಬ್ಯಾಟ್ಸ್​ಮನ್​ ಈ ಪದಗಳು ಕಿವಿಗೆ ಬಿದ್ದಾಗಲೆಲ್ಲಾ ಅದರ ಹಿಂದಿರೋ ರೌಡಿ ಮನಸ್ಸುಗಳ ಆಲೋಚನೆಗಳನ್ನ ವರದಿಯಲ್ಲಿ ಬಿತ್ತರಿಸಿದೆ. ಮಲೆನಾಡು ಟುಡೆಯ ವರದಿಗಳು ಹಲವು ಕ್ರೈಂ ಮೀಟಿಂಗ್​ಗಳಲ್ಲಿ ಸದ್ದು ಮಾಡಿದೆ ಎಂಬುದು ನಮ್ಮ ವರದಿಗಿರುವ ಹೆಮ್ಮೆಯಲ್ಲ ಜಸ್ಟ್ ಸ್ಪಷ್ಟತೆ.

ಸ್ಕೆಚ್ಚು, ಪೀಲ್ಡ್​, ಬ್ಯಾಟ್ಸ್​ಮನ್​

ಅಂದಹಾಗೆ, ಇಲ್ಲಿವರೆಗೂ ನಗರದಲ್ಲಿ ಎದುರಾಳಿಗಳ ವಿರುದ್ದ ದ್ವೇಷ ಪ್ರತಿಕಾರಕ್ಕಾಗಿ ಮಚ್ಚು ಮಸೆಯುತ್ತಿದ್ದ ಮನಸ್ಸುಗಳು ಈಗ ಸಾರ್ವಜನಿಕರಿಂದ ಹಣ ಸುಲಿಗೆ ಮತ್ತು ಕಿಡ್ನಾಪ್ ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಅದರಲ್ಲೂ ಒಂದು ಕೋಮಿನ ಉದ್ಯಮಿಗಳು ವ್ಯವಹಾರಸ್ತರು ಹಾಗು ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿಕೊಂಡಿರುವವರಿಗೆ ಅದೇ ಕೋಮಿನ ರೌಡಿಗಳು ಕೊಡುತ್ತಿರುವ ಉಪಟಳ ಹೆಚ್ಚಾಗಿದೆ. ಜೈಲಿನಿಂದಲೇ ತಮ್ಮ ಸಹಚರರ ಮೂಲಕ ಡೀಲ್ ಇಡುತ್ತಿದ್ದವರು, ಬಹಿರಂಗವಾಗಿಯೇ ಎದುರಿಗೆ ಬೆದರಿಕೆ ಹಾಕುತ್ತಿದ್ದಾರೆ. ಅದರಲ್ಲಿಯು ಕೋಕಾ ಕೇಸ್ ದಾಖಲಾಗಿದ್ದರೂ, ಶಿವಮೊಗ್ಗ ನಗರವನ್ನು ಯಾವ ಭಯವಿಲ್ಲದೆ ಪ್ರವೇಶ ಮಾಡುತ್ತಿದ್ದಾರೆ ಎಂದರೇ ವ್ಯವಸ್ಥೆಯಲ್ಲಿ ಏನೋ ಚೂರು ಹೆಚ್ಚುಕಮ್ಮಿ ಆಗಿರಬಹುದು ಎಂದು ಭಾವಿಸಹುದೇನೋ?

ಒಂದು ಎಫ್​ಐಆರ್​ ! ಉಳಿದವು ಸತ್ಯಕ್ಕೆ ಹತ್ತಿರ

ಇತ್ತೀಚೆಗೆ ದಾಖಲಾಗಿರುವ ಒಂದು ಎಫ್​ಐಆರ್​ ನಲ್ಲಿರುವಂತೆ ಕೋಕಾ ಕೇಸ್ ನಲ್ಲಿದ್ದ ರೌಡಿಯೊಬ್ಬ ಅದೇ ಕೋಮಿನ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ, ಒಂದು ಲಕ್ಷ ಸುಲಿಗೆ ಮಾಡಿದ್ದ. ಅದೃಷ್ಟಕ್ಕೆ ಪೊಲೀಸ್​ ಎಂಟ್ರಿಯಿಂದ ನಡೆಯಬಹುದಾಗಿದ್ದ ಇನ್ನೊಂದು ಕ್ರೈಂಗೆ ಅಂದು ತಡೆಯಾಗಿತ್ತು. ಇದು ಕೇವಲ ಒಂದು ಘಟನೆಯಷ್ಟೆ. ಆದರೆ ಕೆಲವು ನಿರ್ದಿಷ್ಟ ಏರಿಯಾಗಳಲ್ಲಿ ಒಂದು ಕೋಮಿನ ಶ್ರೀಮಂತರು ಬದುಕುವುದೇ ಕಷ್ಟ ಎಂಬಂತಾಗಿದೆ.

ಹೊಸ ಕಾರು ಖರೀದಿಸುವಂತಿಲ್ಲ. ಹೊಸ ಮನೆ ಕಟ್ಟುವಂತಿಲ್ಲ. ವಿದೇಶದಿಂದ ಬರುವಂತಿಲ್ಲ..ಎಲ್ಲದಕ್ಕೂ ನಶೆಯಲ್ಲಿರುವ ಪುಡಿರೌಡಿಗಳು ಡೀಲ್ ಇಡುತ್ತಿದ್ದಾರೆ ಎಂದು ನೊಂದ ಉದ್ಯಮಿಯೊಬ್ಬರು ಹೇಳುತ್ತಾರೆ. ಅಲ್ಲದೆ, ಪೊಲೀಸರಿಗೆ ವಿಷಯ ತಿಳಿಸಿದ್ರೆ…ಐಜಿಪಿ ನೆಟ್ ವರ್ಕ್ ನಲ್ಲಿದ್ದವನ್ನೆ ಎತ್ತಿದ್ದೇವೆ…ನೀನು ಯಾವ ಲೆಕ್ಕ ಎಂದು ಧಮ್ಕಿ ಹಾಕ್ತರಂತೆ. ಪರಿಸ್ಥಿತಿ ಪೊಲೀಸರ ಭಯವಿಲ್ಲದೆ ಪ್ರತಿಕೂಲವಾಗಿರುವಾಗ ಯಾರು ತಾನೇ ಪೊಲೀಸರಿಗೆ ದೂರು ನೀಡಲು ದೈರ್ಯ ಮಾಡಿ ಮುಂದೆ ಬರುತ್ತಾರೆ. ಹಾಗಾಗಿ ಈ ಸಹವಾಸವೇ ಬೇಡ ಎಂದು ಕೆಲವರು ಏರಿಯಾ ತೊರೆದು ಬೇರೆಡೆ ಹೋಗಿದ್ದಾರಂತೆ.

ಮುಖ್ಯವಾಗಿ ಇಲ್ಲಿ ಇಂತಹ ಕ್ರೈಂ ಎಸಗುತ್ತಿರುವ ಯುವಕರ ವಿರುದ್ಧ ಕ್ರಮಕ್ಕಿಂತಲೂ, ಮುಖ್ಯವಾಗಿ ಅರಿವು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಕೆಲ ಮುಖಂಡರುಗಳು ಹೇಳುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ರೌಡಿಗಳ ತೆರೆಮರೆ ಆಟ ಪೊಲೀಸರಿಗೆ ಗೊತ್ತಿದೆಯೋ ಇಲ್ಲವೋ ಎಂಬುದು ಬೇರೆ ವಿಚಾರ. ಆದರೆ ಆಯಕಟ್ಟಿನ ರೌಡಿಗಳು ಎದುರಾಳಿಗಳನ್ನು ಎತ್ತಲು ಫೀಲ್ಡ್​ ಮಾಡುತ್ತಿರುವುದೇನು ಗುಟ್ಟಾಗಿ ಉಳಿದಿಲ್ಲ.

ಹಾಗೊಂದು ವೇಳೆ ಮತ್ತೆ ರೌಡಿ ರೌಡಿಗಳ ನಡುವೆ ಎನಾದರೂ ಗಲಾಟೆಯಾದರೂ ಅದು ಸಾರ್ವಜನಿಕರ ಮೇಲೆ ಪ್ರಭಾವ ಬೀರುವುದಿಲ್ಲ. ಆದರೆ ರೌಡಿಗಳು ಸಿಂಡಿಕೇಟ್ ಆಗಿ, ಏರಿಯವನ್ನು ಹಂಚಿಕೊಂಡು, ಕಿಡ್ನಾಪ್ ಹಣ ವಸೂಲಿಯಂತ ಕೃತ್ಯಗಳನ್ನು ಹೆಚ್ಚು ಮಾಡುತ್ತಾರೆ ಎಂಬುದು ಕಟು ವಾಸ್ತವ. ಹಾಗಾದಲ್ಲಿ ಮಾತ್ರ ಶಿವಮೊಗ್ಗ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ.

ಶಿವಮೊಗ್ಗಕ್ಕೆ ಬರುತ್ತಿವೆ ಹೊಸಮುಖ

ಮುಂಬರುವ ಸನ್ನಿವೇಶಕ್ಕೆ ಪೂರಕ ಸಾಕ್ಷಿ ಎಂಬಂತೆ ಶಿವಮೊಗ್ಗದ ಹೊರವಲಯಗಳು ಆತಂಕದ ರಾತ್ರಿಗಳನ್ನು ನೋಡುತ್ತಿದೆ. ಸುಲಿಗೆ, ದರೋಡೆ, ಬೆದರಿಕೆ, ಅಸಲ್ಟ್ ಕೇಸ್​ಗಳು ವರದಿಯಾಗುತ್ತಿವೆ. ಕಳೆದ ನಾಲ್ಕೈದು ತಿಂಗಳಲ್ಲಿ ನಡೆದ ಅಸಲ್ಟ್ ಕೇಸ್​ಗಳು ರೌಡಿ ವಲಯದ ಪಕ್ಷಗಾರರ ಪ್ರತಿಷ್ಟೆಗೆ ಲಿಂಕ್​ ಆಗಿ ಬ್ಲಿಂಕ್ ಆಗುತ್ತಿವೆ. ಇಷ್ಟೆ ಅಲ್ಲದೆ, ಹೊರ ರಾಜ್ಯದ ಹೊಸಮುಖಗಳು ಶಿವಮೊಗ್ಗ ಪಾತಕವಲಯದಲ್ಲಿ ಎಂಟ್ರಿಯಾಗಿವೆ.

ಇದರ ಜೊತೆಗೆ ಇನ್ನೊಂದು ಮಾಹಿತಿಯು ಇದ್ದು, ನಿಜವೇ ಆಗಿದ್ದರೇ ಖಂಡಿತ ಅದು ಆಘಾತಕಾರಿ! ನಾವು ಶಿವಮೊಗ್ಗದವ್ರು, ಅನ್ನುವಂತಹ ಅಲಿಯಾಸ್​ಗಳು ಊರು ಬಿಟ್ಟಿದ್ದಾರೇನೋ ನಿಜ! ಆದರೆ ಅಂತಹವರ ಪೈಕಿ ಇಂತಹವರು ಊರಿಗೆ ಇಂದೆ ಬರುತ್ತಾರೆ ಎಂಬ ಮಾಹಿತಿ ರೌಡಿಸಂ ಫಾಲೋಅಫ್​ನಲ್ಲಿ ಪಕ್ಕಾ ಸಿಗುತ್ತಿದೆ. ಹಾಗೆ ಬಂದವರ ಎದುರಿಗೆ ಹೊಸಬರನ್ನು ಫಿಲ್ಡ್ ಮಾಡಲು ಬಿಡಲಾಗುತ್ತಿದೆ.

ರೂಮ್​ ಮಾಡಿ ಪೀಲ್ಡ್​ ಮಾಡಿದ್ರಾ

ಎದುರಾಳಿ ಮನೆ ಸನಿಹವೇ ಮನೆ ಮಾಡಿಕೊಂಡು ಹಗಲು ರಾತ್ರಿ ಅವರ ಚಲನ ವಲನದ ಮೇಲೆ ನಿಗಾ ಇಟ್ಟು, ಇಂತಹ ದಿನವೇ ಮಹೂರ್ತ ಫಿಕ್ಸ್ ಮಾಡಬೇಕು ಎಂಬ ಸ್ಕೆಚ್ ಪಾತಕಲೋಕದ ಕಟ್ಟೆಹರಟೆಯ ಸಂಭಾಷಣೆಯಾಗಿ ಹರಿದಾಡುತ್ತಿದೆ. ಶಿವಮೊಗ್ಗದ ಸ್ಟೆಷನ್​ ಒಂದರ ವ್ಯಾಪ್ತಿಯಲ್ಲಿ ಇಂತಹದ್ದೊಂದು ಘಟನೆಗೆ ಆಸ್ಪದ ಕೊಡದೇ ಪೊಲೀಸ್ ಇಲಾಖೆ ಗೌಪ್ಯ ಕಾರ್ಯಾಚರಣೆಯೊಂದನ್ನ ನಡೆಸಿದೆ ಎನ್ನಲಾಗ್ತಿದೆ. ಆದರೂ ಇಂತಹ ಎರಡು ಮೂರು ಸ್ಕೆಚ್ ಗಳು ಮಿಸ್ ಆಗಿದೆ ಎಂಬ ಮಾತುಗಳಿವೆ. ಎದುರಾಳಿಗಳು ಯಾರು..ಡೀಲ್ ಕೊಟ್ಟವರು ಯಾರು ಎಂಬುದು ಆಯಾ ವಲಯದಲ್ಲಿ ಗುರುತಿಸಿಕೊಂಡವರಿಗೆ ಮಾತ್ರ ಗೊತ್ತಿದೆ.

ಶಿವಮೊಗ್ಗ ಪೊಲೀಸ್ ಇಲಾಖೆಗೆ ದಕ್ಷ ಹೆಸರಿದೆ! ಇಲ್ಲಿನ ಪೊಲೀಸರ ನೆಟ್​ವರ್ಕ್​ ಮತ್ತು ಕೆಲಸದ ವಿಚಾರದಲ್ಲಿ ಡಿಪಾರ್ಟ್ಮೆಂಟಲ್ಲೆ ದೊಡ್ಡ ದೊಡ್ಡ ಕಥೆಗಳಿವೆ. ಇಲ್ಲಿಂದ ಕೆಲಸ ಮಾಡಿ ಹೊರ ಜಿಲ್ಲೆಗಳಿಗೆ ಹೋದ ಪೊಲೀಸರಿಗೂ ಸಿಗುವ ವಿಶೇಷ ರೆಸ್ಪೆಕ್ಟ್ , ಶಿವಮೊಗ್ಗ ಪೊಲೀಸ್​ ಇಲಾಖೆಯ ಗರಿಮೆಯನ್ನ ಸಾಕ್ಷಿಕರಿಸುತ್ತೆ. ಆದಾಗ್ಯು, ರಿಸ್ಕ್​ ಪ್ರಶ್ನೆ ಪಾತಕಲೋಕವನ್ನ ಕಟ್ಟಿಹಾಕುವುದಕ್ಕೆ ಅಡ್ಡಿ ಬರುತ್ತಿರಬಹುದು. ಆದಾಗ್ಯು ಅಂಡರ್​​ವರ್ಲ್ಡ್​ನ ದ್ವೇಷದ ಕರಿನೆರಳಿನ ಛಾಯೆ ಸಾರ್ವಜನಿಕರ ಮೇಲೆ ಬೀಳಬಾರದಷ್ಟೆ. ಸಾರ್ವಜನಿಕವಾಗಿ ಹಣ ಸುಲಿಗೆ ಕಿಡ್ನಾಪ್ ಬೆದರಿಕೆಯಂತ ಘಟನೆಗಳು ಮರುಕಳಿಸದಂತೆ ಮತ್ತು ಶಿವಮೊಗ್ಗದ ಸೂಕ್ಷ್ಮತೆಯನ್ನು ಮೀರದಂತೆ ಪೊಲೀಸರು ಕೆಲಸ ಮಾಡಬೇಕಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ