ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ: ಕನ್ನಡ ರಾಜ್ಯೋತ್ಸವಕ್ಕೆ ದೇಣಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ಆರೋಪಿಗಳು ಅಂಗಡಿ ಮಾಲೀಕರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗದ ಗಾರ್ಡನ್ ಏರಿಯಾದಲ್ಲಿ ನಡೆದಿದೆ.
ದೂರುದಾರ ವ್ಯಕ್ತಿ ಗಾರ್ಡನ್ ಏರಿಯಾದಲ್ಲಿ ಫರ್ನಿಚರ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅವರ ಬಳಿ ಬಂದ ಕೆಲ ಯುವಕರು, ನಾವು ಈ ಬಾರಿ ಕನ್ನಡ ರಾಜ್ಯೋತ್ಸವ ಮಾಡುತ್ತಿದ್ದೇವೆ, ದೇಣಿಗೆ ಕೊಡಿ ಎಂದು ಕೇಳಿದ್ದಾರೆ. ಅದಕ್ಕೆ ಮಾಲೀಕರು, ಇಲ್ಲ, ಇವತ್ತು ನಮ್ಮ ಅಂಗಡಿಯಲ್ಲಿ ವ್ಯಾಪಾರ ಸರಿಯಾಗಿ ನಡೆದಿಲ್ಲ, ನಾಳೆ ಬನ್ನಿ ಕೊಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದರಿಂದ ಕೋಪಗೊಂಡ ಯುವಕರು, ನಾವೇನು ನಿಮ್ಮ ಬಳಿ ಭಿಕ್ಷೆ ಕೇಳೋಕೆ ಬಂದಿಲ್ಲ, ಬೆಳಿಗ್ಗೆಯಿಂದ ಚೆನ್ನಾಗಿ ವ್ಯಾಪಾರ ಮಾಡಿ ಈಗ ಹಣ ಇಲ್ಲ ಎಂದು ಹೇಳುತ್ತಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ನೋಡಿದ ದೂರುದಾರರ ಮಗ, ಏಕೆ ಜಗಳ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದಾಗ, ಅವರಿಗೂ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ದೂರುದಾರ ವ್ಯಕ್ತಿ ಹೊರಗೆ ಬಂದಾಗ ಅವರ ಮೇಲೆ ಹಲ್ಲೆ ನಡೆಸಿ, ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರುದಾರರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
