ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದಲ್ಲಿ ದಿನ ಕಳೆದಂತೆ ಬೀದಿ ನಾಯಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಅದರಂತೆ ನಿನ್ನೆ ಶಿವಮೊಗ್ಗದ ಅನುಪಿನಕಟ್ಟೆ ಹಾಗೂ ಹನುಮಂತಾಪುರ ಗ್ರಾಮದಲ್ಲಿ ಓರ್ವ ಬಾಲಕ ಸೇರಿದಂತೆ ಮೂವರ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಂದರೇಶ್, ಸಂತೋಷ್ ಹಾಗೂ ಬಾಲಕ ನಿತಿನ್ ನಾಯ್ಕ್ ನಾಯಿಯ ದಾಳಿಗೆ ಒಳಗಾಗಿ ಗಾಯಗೊಂಡವರು.
ಅನುಪಿನಕಟ್ಟೆ ಹಾಗೂ ಹನುಮಂತಾಪುರ ಗ್ರಾಮಗಳಲ್ಲಿ, ಹುಚ್ಚುನಾಯಿಯೊಂದು ದಾರಿಯಲ್ಲಿ ಸಿಕ್ಕಸಿಕ್ಕವರ ಮೇಲೆ ಎರಗಿದೆ. ಅನುಪಿನಕಟ್ಟೆಯ ತೋಟದಲ್ಲಿ ಕುಳಿತಿದ್ದ ಸುಂದರೇಶ್ ಎಂಬುವರ ಹೊಟ್ಟೆ ಭಾಗಕ್ಕೆ ನಾಯಿ ಕಚ್ಚಿ ಗಾಯಗೊಳಿಸಿದೆ. ಅಲ್ಲದೆ, ಮನೆಯಲ್ಲಿ ಕುಳಿತಿದ್ದ ಸಂತೋಷ್ ಅವರ ಕಾಲು ಹಾಗೂ ತೊಡೆ ಭಾಗಕ್ಕೆ ಕಚ್ಚಿದ್ದು, ಮನೆ ಬಳಿ ಆಟವಾಡುತ್ತಿದ್ದ ಬಾಲಕ ನಿತಿನ್ ನಾಯ್ಕ್ನ ಕಿವಿ ಹಾಗೂ ಕೈಗಳಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಘಟನೆಯಲ್ಲಿ ಗಾಯಗೊಂಡಿರುವ ಮೂವರೂ ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇವಲ ಮನುಷ್ಯರಷ್ಟೇ ಅಲ್ಲದೆ, ರಸ್ತೆಯಲ್ಲಿ ಬರುತ್ತಿದ್ದ ಮೂರಕ್ಕೂ ಹೆಚ್ಚು ಜಾನುವಾರುಗಳ ಮೇಲೂ ಈ ಬೀದಿ ನಾಯಿ ದಾಳಿ ನಡೆಸಿದ್ದು, ಹಸುಗಳ ಮುಖಕ್ಕೆ ಕಚ್ಚಿ ಗಾಯಗೊಳಿಸಿದೆ. ಅನುಪಿನಕಟ್ಟೆಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಿಂದಾಗಿ ಈ ಭಾಗದಲ್ಲಿ ಬೀದಿ ನಾಯಿಗಳ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕದ ಶಿವಮೊಗ್ಗ ಮಹಾನಗರ ಪಾಲಿಕೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ನಾಯಿಗಳನ್ನು ಸೆರೆಹಿಡಿದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
