Shivamogga news today : ನಾಣ್ಯಗಳಲ್ಲಿ ಅಂಬೇಡ್ಕರ್ ಸೇರಿದಂತೆ ಇತರೆ ಮಹಾನ್ ವ್ಯಕ್ತಿಗಳ ಭಾವಚಿತ್ರ ಸೇರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹ

prathapa thirthahalli
Prathapa thirthahalli - content producer

Shivamogga news today : ನಾಣ್ಯಗಳಲ್ಲಿ ಅಂಬೇಡ್ಕರ್ ಸೇರಿದಂತೆ ಇತರೆ ಮಹಾನ್ ವ್ಯಕ್ತಿಗಳ ಭಾವಚಿತ್ರ ಸೇರಿಸಲು ಸರ್ಕಾರಕ್ಕೆ ಆಗ್ರಹ

Shivamogga news today :  ಕರ್ನಾಟಕದ ಮಹಾನ್ ವ್ಯಕ್ತಿಗಳಾದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ, ವೀರರಾಣಿ ಕಿತ್ತೂರು ಚನ್ನಮ್ಮ, ಸಿದ್ದಗಂಗಾ ಮಠ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ, ಭಕ್ತ ಕನಕದಾಸ ಹಾಗೂ ಕೆಂಪೇಗೌಡರ ಚಿತ್ರಗಳಿರುವ ನಾಣ್ಯಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮಲೆನಾಡು ನಾಣ್ಯ ಮತ್ತು ಅಂಚೆಚೀಟಿ ಸಂಗ್ರಾಹಕರ ಸಂಘವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ. 

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ದೇವದಾಸ್ ನಾಯಕ್ ಈ ಕುರಿತು ಮಾತನಾಡಿ ದೇಶದ ವಿವಿಧ ಭಾಗಗಳ ಮಹಾನ್ ವ್ಯಕ್ತಿಗಳ ಗೌರವಾರ್ಥ ಈಗಾಗಲೇ ಬಿಡುಗಡೆ ಮಾಡಲಾಗಿರುವ ₹5 ಮತ್ತು ₹10 ಮುಖಬೆಲೆಯ ವಿಶೇಷ ನಾಣ್ಯಗಳನ್ನು ಚಲಾವಣೆಗೆ ತರುವಂತೆಯೂ ಸಂಘವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಹಿಂದೆ, ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದಾಗ, ₹5 ಅಥವಾ ₹10 ನಾಣ್ಯಗಳನ್ನು ಚಲಾವಣೆಗೆ ಬಿಡಲಾಗುತ್ತಿತ್ತು. ಆದರೆ, ಪ್ರಸ್ತುತ ಈ ನಿಯಮವನ್ನು ಕೈಬಿಟ್ಟಿರುವುದರಿಂದ, ಮಹಾನ್ ವ್ಯಕ್ತಿಗಳ ನಾಣ್ಯಗಳನ್ನು ಸಂಗ್ರಹಿಸುವುದು ದುಬಾರಿಯಾಗಿ ಪರಿಣಮಿಸಿದೆ.ಆದ್ದರಿಂದ, ಕೇಂದ್ರ ಸರ್ಕಾರವು ಮಹಾನ್ ವ್ಯಕ್ತಿಗಳ ಹಾಗೂ ಇತರ ವಿಶೇಷ ನಾಣ್ಯಗಳ ಜೊತೆಗೆ ಚಲಾವಣೆ ನಾಣ್ಯಗಳನ್ನೂ ಬಿಡುಗಡೆ ಮಾಡುವ ಮೂಲಕ ನಾಣ್ಯ ಸಂಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದೆ.

Shivamogga news today :  ಅಲ್ಲದೆ, ವಿಶ್ವದ ಬಹುತೇಕ ದೇಶಗಳು ತಮ್ಮ ನೋಟುಗಳ ಮೇಲೆ ವಿವಿಧ ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನು ಮುದ್ರಿಸುತ್ತವೆ. ಆದರೆ ಭಾರತದಲ್ಲಿ ಮಹಾತ್ಮ ಗಾಂಧಿಯವರನ್ನು ಹೊರತುಪಡಿಸಿ ಇತರೆ ಮಹಾನ್ ವ್ಯಕ್ತಿಗಳ ಭಾವಚಿತ್ರಗಳಿರುವ ನೋಟುಗಳು ಮುದ್ರಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೋಟುಗಳ ಮೇಲೆ ಸ್ವಾಮಿ ವಿವೇಕಾನಂದ, ಜಗಜ್ಯೋತಿ ಬಸವೇಶ್ವರ, ಸರ್ ಎಂ. ವಿಶ್ವೇಶ್ವರಯ್ಯ, ಬಾಲಗಂಗಾಧರ ತಿಲಕ್, ಭಗತ್ ಸಿಂಗ್, ಲಾಲಾ ಲಜಪತರಾಯ್, ಛತ್ರಪತಿ ಶಿವಾಜಿ, ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಮುದ್ರಿಸುವಂತೆ ಸಂಘವು ಒತ್ತಾಯಿಸಿದೆ.

Shivamogga news today :  ನಾಣ್ಯಗಳ ಮುದ್ರಣದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಸಂಘವು ಆತಂಕ ವ್ಯಕ್ತಪಡಿಸಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ, ಬಸವೇಶ್ವರ, ಕವಿ ಮುದ್ದಣ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರವಿರುವ ನಾಣ್ಯಗಳನ್ನು ಮಾತ್ರವೇ ಬಿಡುಗಡೆ ಮಾಡಲಾಗಿದೆ. ಇದು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮಹಾನ್ ವ್ಯಕ್ತಿಗಳ ನಾಣ್ಯಗಳ ಬಿಡುಗಡೆ ತೀರಾ ಕಡಿಮೆ ಸಂಖ್ಯೆಯಲ್ಲಿದೆ ಎಂದು ಸಂಘವು ಅಸಮಾಧಾನ ವ್ಯಕ್ತಪಡಿಸಿದೆ. ಕೂಡಲೇ, ಮೇಲೆ ತಿಳಿಸಲಾದ ಮಹಾನ್ ವ್ಯಕ್ತಿಗಳ ನಾಣ್ಯಗಳನ್ನು ಚಲಾವಣೆಗೆ ಬಿಡುಗಡೆ ಮಾಡುವ ಮೂಲಕ ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಲಾಗಿದೆ.

ಜನವರಿ 2026 ರಂದು ರಾಷ್ಟ್ರೀಯ ಮಟ್ಟದ ನಾಣ್ಯ ಅಂಚೆ ಚೀಟಿಯ ಸಮ್ಮೇಳನವನ್ನು ಸಹ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮ ನಡೆಯುವ ಸ್ಥಳವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು  ಎಂದು ಹೇಳಿದರು.

ಹಾಗೆಯೇ ಈ ಕುರಿತಾಗಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಿ  ಸರ್ಕಾರಕ್ಕೆ ವಿಷಯ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದರು.

Shivamogga news today ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವದಾಸ್​ ನಾಯಕ್​ ನಾಯಕ್
Shivamogga news today ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವದಾಸ್​ ನಾಯಕ್​
Share This Article