Shivamogga news ಮಹಿಳೆಯ ಶಿವಮೊಗ್ಗ: ಇತ್ತೀಚೆಗೆ ಜಿಲ್ಲೆಯಲ್ಲಿ ವಿಳಾಸ ಕೇಳುವ ನೆಪದಲ್ಲಿ ಅಮಾಯಕರನ್ನು ಸುಲಿಗೆ ಮಾಡುವ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಅದಕ್ಕೆ ನಿದರ್ಶನವೆಂಬಂತೆ ವಿನೋಬನಗರದಲ್ಲಿ ಮಹಿಳೆಯೊಬ್ಬರ ಕೊರಳಿನಿಂದ ಬರೋಬ್ಬರಿ 70 ಗ್ರಾಂ ಮೌಲ್ಯದ ಚಿನ್ನದ ಸರವನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ವಿನೋಬನಗರ ನಿವಾಸಿಯಾದ ಮಹಿಳೆಯೊಬ್ಬರು ಪ್ರತಿ ದಿನದಂತೆ ಸಂಜೆ 7:30ರ ಸುಮಾರಿಗೆ ಮನೆಯ ಸಮೀಪದ ಮಹಾಲಕ್ಷ್ಮೀ ಹಾಗೂ ಬಲಮುರಿ ಗಣಪತಿ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಒಬ್ಬರೇ ನಡೆದುಕೊಂಡು ವಾಪಸ್ ಆಗುತ್ತಿದ್ದರು.
ಮನೆಯ ಗೇಟ್ ತೆರೆದು ಒಳಗೆ ಹೋಗಿ, ಗೇಟ್ ಮುಚ್ಚುತ್ತಿದ್ದ ವೇಳೆ ಸಮೀಪದಲ್ಲಿ ಬೈಕ್ ನಿಲ್ಲಿಸಿಕೊಂಡು ಕುಳಿತಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳ ಪೈಕಿ ಒಬ್ಬ ಕೆಳಗಿಳಿದು ಬಂದಿದ್ದಾನೆ. ಆತ ಮಹಿಳೆಯ ಬಳಿ ಬಂದು ಶಿವಣ್ಣನ ಮನೆ ಯಾವುದು ಎಂದು ವಿಳಾಸ ಕೇಳಿದ್ದಾನೆ.ಮಹಿಳೆ ಗೊತ್ತಿಲ್ಲ, ಮುಂದೆ ಆ ಕಡೆ ಕೇಳಿ ಎಂದು ಹೇಳುತ್ತಿದ್ದಾಗ, ಆ ಕಳ್ಳ ಏಕಾಏಕಿ ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದ್ದಾನೆ. ಮಹಿಳೆ ಜೋರಾಗಿ ಕೂಗಿಕೊಂಡರೂ ಬಿಡದ ಕಳ್ಳ, ಅವರನ್ನು ತಳ್ಳಿ 70 ಗ್ರಾಂ ತೂಕದ, ₹2,20,000 ಅಂದಾಜು ಮೌಲ್ಯದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಹಿನ್ನೆಲೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರನ್ನು ದಾಖಲಿಸಿದ್ದಾರೆ.
ಇದೇ ಒಂದು ವಾರದ ಹಿಂದೆ ಶಿವಮೊಗ್ಗದ ಹೊಸಮನೆಯಲ್ಲಿ ರಂಗೋಲಿ ಹಾಕುತ್ತಿದ್ದ ಮಹಿಳೆಯ ಕುತ್ತಿಗೆಯಿಂದಲೂ ಸಹ ಇದೇ ಮಾದರಿಯಲ್ಲಿ ಕಳ್ಳರು ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದರು. ಜಿಲ್ಲೆಯಲ್ಲಿ ಈ ರೀತಿ ವಿಳಾಸ ಕೇಳುವ ನೆಪದಲ್ಲಿ ಸರ ಕದಿಯುವ ಸರಣಿ ಕಳ್ಳತನಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
Shivamogga news
 
 

 
  
  
  
 