ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮುನ್ಸೂಚನೆ ನೀಡದೆ ವಾಹನ ಜಪ್ತಿ ಮಾಡಿ, ನಂತರ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಸಂಸ್ಥೆಯ ವಿರುದ್ಧ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (Shivamogga Consumer Commission) ತೀರ್ಪು ನೀಡಿದ್ದು, ದೂರುದಾರರಿಗೆ ವಾಹನವನ್ನು ಹಿಂತಿರುಗಿಸುವುದರ ಜೊತೆಗೆ ₹1.10 ಲಕ್ಷ ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ಏನಿದು ಪ್ರಕಟಣ
ಶಿವಮೊಗ್ಗದ ತುಂಗಾನಗರ ನಿವಾಸಿ ಶಾಬಾಜ್ ಎಸ್. ತಮ್ಮ ಜೀವನೋಪಾಯಕ್ಕಾಗಿ ₹15,10,147 ಸಾಲ ಪಡೆದು ಐಷರ್ ಪ್ರೊ 30009 ಗೂಡ್ಸ್ ವಾಹನ ಖರೀದಿಸಿದ್ದರು. ಈ ಸಾಲಕ್ಕೆ ತಿಂಗಳಿಗೆ ₹44,361 ಇಎಂಐ ನಿಗದಿಯಾಗಿತ್ತು. ಅವರು 5 ಕಂತುಗಳನ್ನು ಪಾವತಿಸಿದ್ದು, 4 ಕಂತುಗಳು ಬಾಕಿ ಉಳಿದಿದ್ದವು. 31/12/2024ರಂದು ವಾಹನ ಹಾಸನಕ್ಕೆ ಹೋಗಿತ್ತು. ಈ ಸಂದರ್ಭದಲ್ಲಿ ಯಾವುದೇ ಪೂರ್ವ ಮಾಹಿತಿ ಅಥವಾ ತಿಳುವಳಿಕೆ ಪತ್ರ ನೀಡದೆ ಟಿವಿಎಸ್ ಕ್ರೆಡಿಟ್ ಸಂಸ್ಥೆ ವಾಹನವನ್ನು ಜಪ್ತಿ ಮಾಡಿಕೊಂಡಿತ್ತು ಎಂದು ದೂರುದಾರರು ಆರೋಪಿಸಿದ್ದರು.
ನಂತರ ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲಿಸದೆ ವಾಹನವನ್ನು ಹರಾಜಿನ ಮೂಲಕ ಮಾರಾಟ ಮಾಡಲಾಗಿದೆ ಎಂದು 02/02/2025ರಂದು ನೋಟಿಸ್ ನೀಡಿ, ಬಾಕಿ ವ್ಯತ್ಯಾಸದ ಮೊತ್ತವಾದ ₹4,84,204 ಪಾವತಿಸುವಂತೆ ದೂರುದಾರರಿಗೆ ಸಂಸ್ಥೆ ಸೂಚಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಶಾಬಾಜ್ ಎಸ್. ಅವರು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗಆರ್‌ಬಿಐ ಮಾರ್ಗಸೂಚಿಗಳ ಉಲ್ಲಂಘನೆ ಹಾಗೂ ಹೈಕೋರ್ಟ್ ತೀರ್ಪುಗಳನ್ನು ಪರಿಗಣಿಸಿ, ಹಣಕಾಸು ಸಂಸ್ಥೆಯ ಕ್ರಮವು ಸೇವಾ ನ್ಯೂನ್ಯತೆ ಮತ್ತು ಅನುಚಿತ ವ್ಯವಹಾರ ಪದ್ಧತಿಯಾಗಿದೆ ಎಂದು ತೀರ್ಮಾನಿಸಿದೆ. ಆದೇಶ ನೀಡಿದ ದಿನದಿಂದ 45 ದಿನಗಳ ಒಳಗೆ ಐಷರ್ ವಾಹನವನ್ನು ದೂರುದಾರರ ವಶಕ್ಕೆ ಹಿಂತಿರುಗಿಸಬೇಕು ಎಂದು ಆಯೋಗ ಸೂಚಿಸಿದೆ. ವಾಹನ ಹಸ್ತಾಂತರಿಸಲು ವಿಫಲವಾದಲ್ಲಿ ಆದೇಶದ ದಿನಾಂಕದಿಂದ ವಾಹನವನ್ನು ವಾಸ್ತವವಾಗಿ ಹಸ್ತಾಂತರಿಸುವವರೆಗೆ ಪ್ರತಿದಿನ ₹2,000 ದಂಡ ಪಾವತಿಸಬೇಕು ಎಂದು ಆದೇಶಿಸಲಾಗಿದೆ.
ದೂರುದಾರರಿಗೆ ಉಂಟಾದ ಮಾನಸಿಕ ಹಿಂಸೆಗೆ ₹1,00,000 ಹಾಗೂ ವ್ಯಾಜ್ಯ ವೆಚ್ಚವಾಗಿ ₹10,000 ಸೇರಿ ಒಟ್ಟು ₹1,10,000 ಪರಿಹಾರವನ್ನು 45 ದಿನಗಳೊಳಗೆ ಪಾವತಿಸುವಂತೆಯೂ ಆಯೋಗ ಆದೇಶಿಸಿದೆ. ನಿಗದಿತ ಅವಧಿಯಲ್ಲಿ ಪರಿಹಾರ ಮೊತ್ತ ಪಾವತಿಸಲು ವಿಫಲವಾದರೆ ವಾರ್ಷಿಕ ಶೇ.10ರ ಬಡ್ಡಿಯೊಂದಿಗೆ ಹಣ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಅವರನ್ನು ಒಳಗೊಂಡ ಪೀಠ ಆದೇಶಿಸಿದೆ.
