ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಆಯುಧ ಪೂಜೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ಹೂವು, ಹಣ್ಣು, ಬೂದುಗುಂಬಳ, ಬಾಳೆಕಂದು ಸೇರಿದಂತೆ ವಿವಿಧ ವಸ್ತುಗಳ ಖರೀದಿ ಜೋರಾಗಿ ನಡೆಯುತ್ತಿದೆ. ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು, ಜನರ ನಡುವೆ ದುಡ್ಡು ಕೈ ಬದಲಾಯಿಸುತ್ತಿದೆ.
ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಹೂವುಗಳ ಬೆಲೆಯಲ್ಲಿ ಏರಿಕೆಯಾಗುವುದು ಸಾಮಾನ್ಯ. ಅದರಂಥೆ ಮತ್ತೆ ಬೆಲೆ ಹೆಚ್ಚಾಗಿದೆ. ಆಯುಧ ಪೂಜೆಯ ಸಂದರ್ಭದಲ್ಲಿ ವಾಹನಗಳು, ಕಚೇರಿಗಳು ಹಾಗೂ ಮನೆಗಳಲ್ಲಿರುವ ವಿವಿಧ ವಸ್ತುಗಳನ್ನು ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುವ ಪದ್ಧತಿ ಇರುವುದರಿಂದ ಚೆಂಡು ಹೂವು, ಸೇವಂತಿಗೆ, ಕನಕಾಂಬರ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ಕನಕಾಂಬರ ₹800, ಮಲ್ಲಿಗೆ ₹800, ಗುಲಾಬಿ ₹400 ಹಾಗೂ ಸೇವಂತಿಗೆ ₹400ರಂತೆ ಮಾರಾಟವಾಗುತ್ತಿವೆ. ಚೆಂಡು ಹೂವು ಪ್ರತಿ ಮಾರಿಗೆ ₹60ರಿಂದ ₹100ರವರೆಗೆ ಮಾರಾಟವಾಗುತ್ತಿದ್ದರೆ, ಸೇವಂತಿಗೆ, ಜಾಜಿ ಹಾಗೂ ಕಾಕಡ ಹೂವುಗಳ ಬೆಲೆ ಪ್ರತಿ ಮಾರಿಗೆ ₹150ರಿಂದ ₹250ರವರೆಗೆ ಇದೆ. ಬಿಡಿ ಹೂವುಗಳ ದರ ತುಸು ಕಡಿಮೆ ಇದ್ದು, ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಬಗೆಯ ಹೂವುಗಳ ಖರೀದಿ ಹೆಚ್ಚಾಗಿದೆ.
ಆಯುಧ ಪೂಜೆಗೆ ಪ್ರಮುಖವಾಗಿ ಬಳಸುವ ಬೂದುಗುಂಬಳಕ್ಕೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಬೂದುಗುಂಬಳದ ಬೆಲೆ ಪ್ರತಿ ಕೆ.ಜಿಗೆ ₹40ರಿಂದ ಆರಂಭವಾಗಿದ್ದು, ಗಾತ್ರಕ್ಕೆ ಅನುಗುಣವಾಗಿ ಒಂದಕ್ಕೆ ₹100ರಿಂದ ₹200ರವರೆಗೆ ಮಾರಾಟವಾಗಿದೆ. ಬಾಳೆದಿಂಡು ಜೋಡಿಗೆ ₹40ರಂತೆ ಮಾರಾಟವಾಗಿದ್ದು, ನಿಂಬೆಹಣ್ಣು, ಬಾಳೆ ಎಲೆ, ತೆಂಗಿನಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿಯೂ ಜೋರಾಗಿದೆ.
ಇನ್ನೂ ಸೇಬು, ಬಾಳೆಹಣ್ಣು, ಮೋಸಂಬಿ ಸೇರಿದಂತೆ ವಿವಿಧ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ಪೂಜೆಗೆ ಅಗತ್ಯವಿರುವ ಹಣ್ಣುಗಳ ಖರೀದಿಗೆ ಗ್ರಾಹಕರು ಮಾರುಕಟ್ಟೆಗೆ ಆಗಮಿಸುತ್ತಿದ್ದು, ಬೆಲೆ ಹೆಚ್ಚಳದ ಕಾರಣ ಕೆ.ಜಿಗಟ್ಟಲೆ ಹಣ್ಣುಗಳನ್ನು ಖರೀದಿಸುವ ಬದಲು ಪೂಜೆಯ ಶಾಸ್ತ್ರಕ್ಕಾಗಿ 5 ಬಗೆಯ ಹಣ್ಣುಗಳನ್ನು ಆಯ್ಕೆ ಮಾಡಿಕೊಂಡು ₹100ಕ್ಕೆ ಖರೀದಿಸುತ್ತಿರುವುದು ಕಂಡುಬಂದಿದೆ.
ಶಿವಮೊಗ್ಗ ನಗರದ ಗಾಂಧಿ ಬಜಾರ್, ದುರ್ಗಿಗುಡಿ, ನೆಹರು ರಸ್ತೆ, ಬಿ.ಎಚ್. ರಸ್ತೆ, ಪೊಲೀಸ್ ಚೌಕಿ, ಗೋಪಾಳ ಹಾಗೂ ವಿನೋಬನಗರದ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿಯ ಭರಾಟೆ ಕಂಡುಬಂದಿದೆ. ಹೂವು, ಹಣ್ಣುಗಳ ಜೊತೆಗೆ ತರಕಾರಿ, ದಿನಸಿ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ಬೂದುಗುಂಬಳ, ಬಾಳೆಕಂದು, ಬಾಳೆ ಎಲೆ ಹಾಗೂ ತೆಂಗಿನಕಾಯಿಗಳ ಖರೀದಿ ಜೋರಾಗಿ ನಡೆಯುತ್ತಿದೆ.
