ಸೆ.5, 6ರಂದು ನವುಲೆಯಲ್ಲಿ ‘ಸಹ್ಯಾದ್ರಿ ಕೃಷಿ ಸಂತೆ–2026’; 50ಕ್ಕೂ ಅಧಿಕ ಮಳಿಗೆಗಳಲ್ಲಿ ಇರಲಿದೆ ಸಖತ್ ವಿಶೇಷ

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗದ ನವುಲೆಯಲ್ಲಿ ನಡೆಯಲಿರುವ ಸಹ್ಯಾದ್ರಿ ಕೃಷಿ ಸಂತೆ–2026 ಎಐ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸೆಪ್ಟೆಂಬರ್ 5 ಮತ್ತು 6ರಂದು ನಗರದ ನವುಲೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ‘ಸಹ್ಯಾದ್ರಿ ಕೃಷಿ ಸಂತೆ–2026’ (Sahyadri Krishi Sante) ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಈ ಕೃಷಿ ಸಂತೆ ನಡೆಯಲಿದೆ.

ನಿಮ್ಮ ಮನೆಯ ಕೈತೋಟಕ್ಕೆ ಬೇಕಾದ ಗಿಡಗಳಿಂದ ಹಿಡಿದು ನೀವಿಷ್ಟ ಪಡುವ ಹೂವಿನ ಬೀಜಗಳ ವರೆಗೂ ಪ್ರತಿಯೊಂದು ಇಲ್ಲಿ ಸಿಗಲಿದೆ. ಇದಕ್ಕಾಗಿ ಹಣ್ಣಿನ ಸಸಿಗಳ ನರ್ಸರಿ, ಅಲಂಕಾರಿಕ ಗಿಡಗಳು, ತರಕಾರಿ ಮತ್ತು ಹೂವಿನ ಬೀಜಗಳು, ತಾರಸಿ ಹಾಗೂ ಕೈತೋಟಕ್ಕೆ ಅಗತ್ಯವಿರುವ ಪರಿಕರಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿದೆ.

ಅಲ್ಲದೆ ಅಲಂಕಾರಿಕ ಮೀನುಗಳು, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಒಳಗೊಂಡ 50ಕ್ಕೂ ಅಧಿಕ ಮಳಿಗೆಗಳು ಸಂತೆಯಲ್ಲಿ ಇರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಲೆನಾಡಿನ ವಿಶಿಷ್ಟ ಸಿಹಿ ಖಾದ್ಯ ತೊಡೆದೇವು, ಉತ್ತರ ಕರ್ನಾಟಕದ ತಿಂಡಿ–ತಿನಿಸು, ಸಿರಿಧಾನ್ಯ ಉತ್ಪನ್ನಗಳು ಹಾಗೂ ಸ್ಥಳೀಯ ವಿಶಿಷ್ಟ ಖಾದ್ಯ ಮಳಿಗೆಗಳು ಸಂತೆಯ ಪ್ರಮುಖ ಆಕರ್ಷಣೆಗಳಾಗಲಿವೆ. ಜೇನುತುಪ್ಪದಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆಗಳೂ ಇರಲಿವೆ.

ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿರುವ ವಿವಿಧ ಪ್ರಾತ್ಯಕ್ಷಿಕೆ ತಾಕುಗಳು ಮತ್ತು ಘಟಕಗಳನ್ನು ಸಂದರ್ಶಿಸಿ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಮಗ್ರ ಕೃಷಿ ಪದ್ಧತಿ, ಜೇನು ಸಾಕಣೆ ಘಟಕ, ಕುರಿ ಮತ್ತು ಕೋಳಿ ಸಾಕಣೆ ಘಟಕ, ಜಲಕೃಷಿ ಪದ್ಧತಿ (ಹೈಡ್ರೋಪೋನಿಕ್ಸ್), ಎರೆಹುಳು ಗೊಬ್ಬರ ತಯಾರಿಕೆ ಘಟಕ, ಕೊಳವೆಬಾವಿ ಜಲ ಮರುಪೂರಣ ಮಾದರಿ, ತಾರಸಿ ತೋಟ ಮತ್ತು ಅಲಂಕಾರಿಕ ಮೀನು ಘಟಕಗಳನ್ನು ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor