Malenadu Gidda ವಿಶ್ವ ಒಕ್ಕಲಿಗ ಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀ ಶ್ರೀ ನಿಶ್ಚಲಾನಂದ ಸ್ವಾಮೀಜಿಯವರು ಮಲೆನಾಡು ಗಿಡ್ಡ ತಳಿಗಳನ್ನು ಸಂರಕ್ಷಿಸಿ, ಪೋಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕರೆ ನೀಡಿದ್ದಾರೆ. ಮಲೆನಾಡು ಹಾಗೂ ಕರಾವಳಿ ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಈ ಗಿಡ್ಡ ತಳಿಯು, ಪ್ರಕೃತಿದತ್ತವಾದ ಗಿಡ್ಡ ಆಕಾರವನ್ನು ಹೊಂದಿದೆ. ನೋಡಲು ಗಿಡ್ಡವಾಗಿದ್ದರೂ ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸಲು ಬೇಕಾದ ದೇಹ ರಚನೆ, ಗಟ್ಟಿಮುಟ್ಟಾದ ಗೊರಸುಗಳು ಹಾಗೂ ಚಂಗನೆ ನೆಗೆಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಕಡಿಮೆ ಆಹಾರ ಸೇವಿಸಿ, ಗುಡ್ಡಗಾಡಿನಲ್ಲಿ ಮೇಯುವ ಕಾರಣದಿಂದಾಗಿ ಔಷಧೀಯ ಗುಣಗಳನ್ನೊಳಗೊಂಡ ಗವ್ಯ ಉತ್ಪನ್ನಗಳನ್ನು ಈ ತಳಿಗಳಿಂದ ಪಡೆಯಬಹುದಾಗಿದೆ. ಅಲ್ಲದೆ, ಸಾವಯವ ಕೃಷಿಗೆ ಈ ತಳಿಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಶ್ರೀ ನಿಶ್ಚಲಾನಂದ ಸ್ವಾಮೀಜಿ ಹೇಳಿದರು.

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ
Malenadu Gidda ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯ ಕ್ರಾಂತಿಯಿಂದಾಗಿ ಮಲೆನಾಡು ಗಿಡ್ಡ ತಳಿಗಳು ಅವನತಿಯ ಅಂಚಿನಲ್ಲಿದ್ದು, ಅವುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಅಳಿವಿನಂಚಿನಲ್ಲಿರುವ ಈ ತಳಿಗಳನ್ನು ಉಳಿಸಿ, ಬೆಳೆಸುವ ಪ್ರಯತ್ನವನ್ನು ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನ ತಂಡವು ಮಾಡುತ್ತಿದೆ. ಈ ಅಭಿಯಾನದ ರೂವಾರಿ ಸುಳ್ಯ ತಾಲೂಕಿನ ಅಲೆಕಾಡಿಯ ನೀರುಡೇಲ್‍ನ ಅಕ್ಷಯ್ ಆಳ್ವ ಅವರು ಸ್ನಾತಕೋತ್ತರ ಪದವಿ ಪಡೆದಿದ್ದರೂ ಉದ್ಯೋಗವನ್ನು ಬಿಟ್ಟು ಈ ಸಂರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸಾವಯವ ಮತ್ತು ಗೋ ಆಧಾರಿತ ಕೃಷಿ ಮಾಡುವ ಸುಮಾರು ಮೂರು ಸಾವಿರ ರೈತರಿಗೆ ಉಚಿತವಾಗಿ ಮಲೆನಾಡು ಗಿಡ್ಡ ತಳಿಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಲೆನಾಡು ಗಿಡ್ಡ ತಳಿಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ ಹೆಣ್ಣು ಕರುಗಳ ಅಭಾವವಿದ್ದು, ಗಂಡು ಕರುಗಳ ಪ್ರಮಾಣ ಜಾಸ್ತಿಯಾಗುತ್ತಿದೆ. ಹೀಗಾಗಿ ನಂದಿಗಳನ್ನು ಉಳಿಸಿದರೆ ಮಾತ್ರ ಮಲೆನಾಡು ಗಿಡ್ಡ ತಳಿಗಳ ಸಂತತಿ ವೃದ್ಧಿಯಾಗುತ್ತದೆ ಎಂಬ ಉದ್ದೇಶದಿಂದ ಜೋಡೆತ್ತು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ, ಡಿಸೆಂಬರ್ 7ರಂದು ಮಲೆನಾಡು ಗಿಡ್ಡ ತಳಿಯ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನ ಹಾಗೂ ಹಾಸನ್ ಗೂಳಿಯ ಗೋವು ದೇವಾಲಯ ಸೋರೆಕಾಯಿಪುರ ಇವರ ಆಶ್ರಯದಲ್ಲಿ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯ ಮಲ್ಲಿಗಮ್ಮ ದೇವಸ್ಥಾನ ಸೋರೆಕಾಯಿಪುರದಲ್ಲಿ ಮಲೆನಾಡು ಗಿಡ್ಡ ಹೋರಿ ಹಬ್ಬ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಹಬ್ಬದಲ್ಲಿ 50 ದೇಶಿ ತಳಿಯ ಮಲೆನಾಡು ಗಿಡ್ಡ ತಳಿಯ ಜೋಡಿ ಹೋರಿಗಳನ್ನು (ಒಂದು ಹೋರಿ-ಒಂದು ದನ) ಉಚಿತವಾಗಿ 50 ರೈತರಿಗೆ ನೀಡಲಾಗುತ್ತದೆ ಎಂದು ಮಲೆನಾಡು ಗಿಡ್ಡ ತಳಿ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನದ ಸಂಘಟಕರಾದ ಅಕ್ಷಯ್ ಆಳ್ವ ತಿಳಿಸಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಶ್ವ ಒಕ್ಕಲಿಗರ ಮಠದ ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದ ಸ್ವಾಮೀಜಿಯವರು ವಹಿಸಲಿದ್ದಾರೆ. ಶ್ರವಣಬೆಳಗೊಳದ ಶಾಸಕರಾದ ಡಾ. ಸಿ.ಎನ್. ಬಾಲಕೃಷ್ಣ ಅವರು ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಗೋ ಸೇವಾ ಸಂಸ್ಥಾನದ ಅಧ್ಯಕ್ಷರಾದ ಭಕ್ತಿ ಭೂಷಣ್ ದಾಸ್ ಅವರು ಉದ್ಘಾಟಿಸಲಿದ್ದಾರೆ. ಈಗಾಗಲೇ ಅಭಿಯಾನದಿಂದ ಬಿಂಡಿಕೆನವಿಲೆಯಲ್ಲಿ ಗೋಕಲ್ಯಾಣ ಉತ್ಸವವನ್ನು ಆಯೋಜಿಸಿ 15 ರೈತರಿಗೆ ಜೋಡಿಯನ್ನು ವಿತರಿಸಲಾಗಿದೆ. ಅಲ್ಲದೆ, ಬಯಲುಸೀಮೆಯಲ್ಲಿ ಸುಮಾರು ನೂರು ಜೋಡೆತ್ತುಗಳನ್ನು ವಿತರಿಸಿದ್ದೇವೆ ಎಂದು ಅಕ್ಷಯ್ ಆಳ್ವ ವಿವರಿಸಿದರು.
Malenadu Gidda ಷರತ್ತುಗಳೇನು
ಈ ಜೋಡೆತ್ತುಗಳು ಅಥವಾ ಮಲೆನಾಡು ಗಿಡ್ಡ ತಳಿಗಳನ್ನು ಪಡೆಯುವ ರೈತರಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗುತ್ತದೆ. ಸಾವಯವ ಕೃಷಿ ಮಾಡುವ ಹಿಂದೂ ಸಮುದಾಯವರಿಗೆ ಮಾತ್ರ ಈ ತಳಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ ತಳಿಗಳನ್ನು ಮಾರಾಟ ಮಾಡುವ ಹಾಗಿಲ್ಲ. ತಳಿಗಳು ಸತ್ತು ಹೋದರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ನೀಡಬೇಕು. ಕಾಣೆಯಾದರೆ ಎಫ್‍ಐಆರ್ ಮಾಡಬೇಕು. ಇಲ್ಲವಾದರೆ 2 ಲಕ್ಷ ರೂಪಾಯಿ ದಂಡವನ್ನು ಕಟ್ಟಬೇಕು. ವಿತರಣೆ ಮಾಡಿದ ಮಲೆನಾಡು ಗಿಡ್ಡ ತಳಿಗಳ ಬಗ್ಗೆ ನಿರಂತರ ಮಾಹಿತಿಯನ್ನು ಪಡೆದುಕೊಳ್ಳುತ್ತಾ, ಅವುಗಳ ದುರುಪಯೋಗ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಅಕ್ಷಯ್ ಆಳ್ವ ಮಾಹಿತಿ ನೀಡಿದರು. ಈ ಅಭಿಯಾನಕ್ಕೆ ರಾಜ್ಯಾದ್ಯಂತ ಉತ್ತಮ ಬೆಂಬಲ ಸಿಗುತ್ತಿದ್ದು, ಬಯಲು ಸೀಮೆಗಳ ರೈತರು ಹೆಚ್ಚಿನ ಬೇಡಿಕೆ ಇಡುತ್ತಿದ್ದಾರೆ. ಈ ಹೋರಿ ಹಬ್ಬದಲ್ಲಿ ಒಂದರಿಂದ ಮೂರು ವರ್ಷದ ಕರುಗಳನ್ನು ಮಾತ್ರ ವಿತರಣೆ ಮಾಡಲಾಗುತ್ತಿದ್ದು, ಇಲ್ಲಿ ಯಾವುದೇ ವ್ಯಾಪಾರ ನಡೆಯುವುದಿಲ್ಲ. ಬದಲಿಗೆ, ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಹಾಗೂ ತಳಿಗಳನ್ನು ಸಾಕುತ್ತಿರುವ ರೈತರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಅವರು ತಿಳಿಸಿದರು.








